ಅಥಣಿ ಉತ್ಸವದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಕಳಕಳಿ
ದಾವಣಗೆರೆ, ಜ.28- ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ. ನಮ್ಮ ಮಾತೃಭಾಷೆ ಕನ್ನಡ ರಾಣಿಯಂತೆ ಅತ್ಯಂತ ಕಂಗೊಳಿಸುವ ಭಾಷೆಯಾಗಿದ್ದು, ಕನ್ನಡ ಭಾಷೆಯ ಸಂರಕ್ಷಣೆಯ ಜವಾಬ್ದಾರಿ ಎಲ್ಲರದ್ದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.
ನಗರದ ಶ್ರೀ ವಿನಾಯಕ ಎಜುಕೇಶನಲ್ ಟ್ರಸ್ಟ್‌ನ ಆವರಣದಲ್ಲಿ ಇಂದು ಏರ್ಪಡಿಸಿದ್ದ ಜಿ.ಎಂ.ನರ್ಸರಿ, ಪಿಇಎಸ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಥಣಿ ಪ್ರೌಢಶಾಲೆಗಳ `ಅಥಣಿ ಉತ್ಸವ-2024-25′, ಕಲರವ-6 ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನ್ಯ ಭಾಷೆಗಳನ್ನು ಗೌರವಿಸುವ ಜೊತೆಗೆ ನಮ್ಮ ಮಾತೃ ಭಾಷೆ ಕನ್ನಡವನ್ನು ಉಳಿಸಿ, ಬೆಳೆಸುವ ಕರ್ತವ್ಯ ಎಲ್ಲ ಕನ್ನಡಿಗರದ್ದಾಗಿದೆ ಎಂದರು.
ಶ್ರೀ ವಿನಾಯಕ ಎಜುಕೇಶನಲ್ ಟ್ರಸ್ಟ್ ಸದಸ್ಯ ಅಥಣಿ ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಜೊತೆೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡು ಸಾಧನೆ ಮಾಡುವಂತೆ ಕರೆ ನೀಡಿದರು.
ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್ ಸದಸ್ಯ ಕೆ.ಜಿ.ಸುಗಂಧ ರಾಜ್, ಪಿಇಎಸ್ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಆರ್.ವೆಂಕಟರೆಡ್ಡಿ, ಎಸ್‌ಬಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಷಣ್ಮುಖಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಪ್ರೀ ನರ್ಸರಿಯಿಂದ 10 ನೇ ತರಗತಿವರೆಗೂ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದ ಪ್ರತಿಭಾನ್ವಿತ ಮಕ್ಕಳಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು. ರಾಜ್ಯ, ರಾಷ್ಟ್ರೀಯ ಕರಾಟೆ ಹಾಗೂ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೂ ಸಹ ಪುರಸ್ಕರಿಸಲಾಯಿತು.
ಮಕ್ಕಳು ದೇಶದ ವೈವಿಧ್ಯಮಯ ಸಂಸ್ಕೃತಿ, ವಿಭಿನ್ನ ಶೈಲಿಯ ಹಾಸ್ಯ ಮನರಂಜನೆ, ಗ್ರಾಮೀಣ ಸೊಗಡಿನ ಮನಮುಟ್ಟುವ ಹಾಡುಗಳನ್ನೆಲ್ಲಾ ಮೆಲುಕು ಹಾಕಿ `ವೈವಿಧ್ಯತೆಯಲ್ಲಿ ಏಕತೆ’ ಎಂಬ ನಮ್ಮ ದೇಶದ ಶಕ್ತಿಯನ್ನು ತೋರಿಸಿದ್ದಾರೆ. ಚಿತ್ರಕಲಾ ರಂಗಕ್ಕೆ ಗೌರವ ಸಮರ್ಪಣೆ ಮಾಡಿ, ಪ್ರಸಿದ್ದ ಹಿನ್ನೆಲೆ ಗಾಯಕರ ಹಾಡುಗಳಿಗೆ ಮಕ್ಕಳು ನೃತ್ಯಗಳನ್ನು ಪ್ರದರ್ಶಿಸಿ ಸಭೆಯ ಮೆರಗನ್ನು ಹೆಚ್ಚಿಸಿದರು.
ಮುಖ್ಯೋಪಾಧ್ಯಾಯಿನಿ ದಿತಾ ಡಿ. ಮೆನನ್ ಶಾಲಾ ವರದಿ ಮಂಡಿಸಿದರು. ಶ್ರೇಯ ಆರ್. ವಾಂಜ್ರೆ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಬಿ.ಡಿ. ಶುಭ ಮತ್ತು ಸಂಗಡಿಗರು ಸ್ವಾಗತ ನೃತ್ಯ ಮಾಡಿದರು.
ಶ್ರೀಮತಿ ಸಿ.ಪಿ. ಪ್ರವೀಣ ಸ್ವಾಗತಿಸಿದರು. ಬಿ.ಪಾಂಡು ವಂದಿಸಿದರು. ಎನ್. ಗೀತಾ, ಶ್ರೀಮತಿ ಕೆ.ಎಸ್. ಗೀತಾ, ಎಂ.ಜಿ.ಹೆಚ್. ಶ್ವೇತಾ ಸಭಾ ಕಾರ್ಯಕ್ರಮ ನಿರೂಪಿಸಿದರು.
ಕು. ಎಲ್.ಎಂ. ನಿಖಿಲ, ಚಿನ್ಮಯಿ ರಾಯುಡು, ಹೆಚ್.ಹೆಚ್. ಸಿಂಚನ, ಇಕ್ರನಾಜ್, ವಿ.ಎಂ. ವರ್ಷಿತ, ಅವರು ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.