ಅರ್ಜಿದಾರ ರೈತರ ಒಕ್ಕಲೆಬ್ಬಿಸದಂತೆ ಆಗ್ರಹ

ಅರ್ಜಿದಾರ ರೈತರ ಒಕ್ಕಲೆಬ್ಬಿಸದಂತೆ ಆಗ್ರಹ

ಅರಣ್ಯ ಭೂಮಿ ಸಾಗುವಳಿದಾರರ ಮೇಲೆ ದೌರ್ಜನ್ಯ ನಡೆಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಒತ್ತಾಯ

ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ

ದಾವಣಗೆರೆ, ಜ. 27- ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಯಾಗದ ಹೊರತು ಅರ್ಜಿದಾರರನ್ನು ಒಕ್ಕಲೆಬ್ಬಿಸಬಾರದು ಎಂಬಿತರೇ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ವತಿಯಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಧರಣಿ ಸತ್ಯಗ್ರಹ ನಡೆಸಲಾಯಿತು.

ಗಾಂಧಿ ವೃತ್ತದಿಂದ ಬೈಕ್ ರಾಲಿ ಮೂಲಕ ತೆರಳಿದ ಪ್ರತಿಭಟನಾಕಾರರು ದಾರಿಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಇದೇ ವೇಳೆ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಜಗಳೂರು ತಾಲ್ಲೂಕು ಗೌಡಗೊಂಡನಹಳ್ಳಿ ಗ್ರಾಮದಲ್ಲಿ ಅರಣ್ಯ ಭೂಮಿ ಸಾಗುವಳಿದಾರರ ಮೇಲೆ ದೌರ್ಜನ್ಯ ನಡೆಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಗ್ರಾಮದ ಅರಣ್ಯ ಭೂಮಿ ಸಾಗುವಳಿದಾರರ ಅರ್ಜಿಗಳು ವಿಲೇವಾರಿ ಆಗುವವರೆಗೂ ಜಮೀನು ಬಿಡಿಸುವ ಪ್ರಯತ್ನ ಮಾಡಬಾರದೆಂದು ಒತ್ತಾಯಿಸಿದರು.

ಚನ್ನಗಿರಿ ತಾಲ್ಲೂಕಿನಲ್ಲಿ 9 ಸಾವಿರ, ಜಗಳೂರು ತಾಲ್ಲೂಕಿನಲ್ಲಿ 6 ಸಾವಿರ, ದಾವಣಗೆರೆ ತಾಲ್ಲೂಕಿನಲ್ಲಿ 7 ಸಾವಿರಕ್ಕೂ ಅಧಿಕ ಬಗರ್ ಹುಕ್ಕುಂ ಸಾಗುವಳಿದಾರರು ಫಾರ ನಂ. 53 ಮತ್ತು 57 ರಲ್ಲಿ ಅರ್ಜಿ ಸಲ್ಲಿಸಿದ್ದು, ಈ ಎಲ್ಲಾ ಅರ್ಜಿಗಳನ್ನು ಮಾನ್ಯ ಮಾಡಬೇಕು. ಈ ಹಿಂದೆ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಿಂದ ಸುಡು ಬಿಸಿಲಿನ್ನೂ ಲೆಕ್ಕಿಸದೇ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಸಹ ನಡೆಸಲಾಗಿತ್ತು. ಜಿಲ್ಲಾಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಮೇರೆಗೆ ಧರಣಿ ಸತ್ಯಾಗ್ರಹ ಹಿಂತೆಗೆದುಕೊಂಡಿದ್ದೆವು. ಆದರೆ ಇದುವರೆಗೂ ಅಧಿಕಾರಕ್ಕೆ ಬಂದ ಜಿಲ್ಲಾಧಿಕಾರಿಗಳು ಕೊಟ್ಟ ಭರವಸೆಯನ್ನು ಹುಸಿಗೊಳಿಸಿದ್ದಾರೆ ಎಂದು ಆರೋಪಿಸಿದರು.

ಚನ್ನಗಿರಿ ತಾಲ್ಲೂಕಿನ ಶಿವಗಂಗೆಹಾಳ, ಅಸ್ತಾಫನಹಳ್ಳಿ, ಮಧುರನಾಯಕನಹಳ್ಳಿ, ಬಿ.ಆರ್.ಟಿ. ಕಾಲೋನಿ, ಬಸವಾಪುರ, ಮಲ್ಲನಾಯಕನಹಳ್ಳಿ, ಬೆಟ್ಟಕಡೂರು, ಹೊನ್ನನಾಯಕನಹಳ್ಳಿ, ಜೋಳದಹಾಳ್, ಚಿಕ್ಕಕೋಗಲೂರು, ಹರೋಸಾಗರ, ಗರಗ, ಅಗರಬನ್ನಿಹಟ್ಟಿ, ಎರೇಹಳ್ಳಿ, ಮಲ್ಲಿಗೇನಹಳ್ಳಿ, ಎನ್. ಗಾಣದಕಟ್ಟೆ ಸೇರಿದಂತೆ ಇನ್ನೂ ಅನೇಕ ಹಳ್ಳಿಗಳಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರ ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ. ಉಪ ವಿಭಾಗಾಧಿಕಾರಿಗಳು ಸರಿಯಾಗಿ ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ಇದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯ ಹೆಚ್ಚಾಗಿದೆ. ಅರಣ್ಯ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮಾಡುವಂತೆ ಆಗ್ರಹಿಸಿದರು.

ಜಗಳೂರು ತಾಲ್ಲೂಕಿನ ಗೌಡಗೊಂಡನಹಳ್ಳಿಯ 23 ಕುಟುಂಬಗಳನ್ನು ಒಕ್ಕಲೆಬ್ಬಿಸಿ ಈ ಭೂಮಿಯಲ್ಲಿ ಕಂದಕಗಳನ್ನು ನಿರ್ಮಾಣ ಮಾಡಿ ಸಸಿಗಳನ್ನು ನೆಡಲಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ 23 ಕುಟುಂಬಗಳಿಗೆ ಸಾಗುವಳಿ ಚೀಟಿ ವಿತರಿಸುವಂತೆ ಮನವಿ ಮಾಡಿದರು.

ಧರಣಿ ಸತ್ಯಾಗ್ರಹದಲ್ಲಿ ರೈತ ಮುಖಂಡರಾದ ಅಸ್ತಾಫನಹಳ್ಳಿ ಗಂಡುಗಲಿ, ಎಲೋದಹಳ್ಳಿ ರವಿಕುಮಾರ್, ಕೋಗಲೂರು ಕುಮಾರ್, ಚಿಕ್ಕಮಲ್ಲನಹೊಳೆ ಚಿರಂಜೀವಿ, ರಾಜು, ಗೌಡಗೊಂಡನಹಳ್ಳಿ ಸತೀಶ್, ಆನಗೋಡು ಭೀಮಣ್ಣ, ಚಿನ್ನಸಮುದ್ರ ಪರಶುರಾಮ್, ಆಲೂರು ಪರಶುರಾಮ್, ಕೊಡಗನೂರು ತಿಪ್ಪಣ್ಣ, ಸುರೇಶ್ ನಾಯ್ಕ, ಭರಮಸಾಗರ ಸೂರಪ್ಪ, ಗುಮ್ಮನೂರು ರುದ್ರೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. 

error: Content is protected !!