ಸಂವಿಧಾನದ ಆಶಯವನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ

ಜಗಳೂರಿನ ಗಣರಾಜ್ಯೋತ್ಸವದಲ್ಲಿ ಶಾಸಕ ಬಿ.ದೇವೇಂದ್ರಪ್ಪ

ಜಗಳೂರು, ಜ. 27- ಸಂವಿಧಾನದ ಆಶಯಗಳನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸಂವಿಧಾನ ಉಳಿಸಲು ನಾವೆಲ್ಲರೂ ಕಂಕಣಬದ್ದರಾಗಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮುಖ್ಯವಾಹಿನಿಗೆ ಬರಲು ಸಂವಿಧಾನವೇ ಮೂಲಾಧಾರ. ಮೀಸಲಾತಿಯಡಿ ನಾನೂ ಒಬ್ಬ ಶಾಸಕನಾಗಿ ಆಯ್ಕೆಗೊಂಡಿದ್ದೇನೆ. ಚಹಾ ಮಾರುವ ವ್ಯಕ್ತಿ, ಮಣ್ಣಿನ ಮಕ್ಕಳು ದೇಶಕ್ಕೆ ಪ್ರಧಾನಿಯಾಗಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ನವರ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕ ಜಾರಿಗೊಳಿಸಿ ಜನಪರ ಆಡಳಿತ ನಡೆಸುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಗಳನ್ನೊಳಗೊಂಡಂತೆ ವಿಧಾನಸಭಾ  ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಬದ್ದನಾಗಿರುವೆ ಎಂದು ಶಾಸಕರು ಭರವಸೆ ನೀಡಿದರು.

ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಬಸವರಾಜ್ ಮರೇನಹಳ್ಳಿ ಮಾತನಾಡಿ, ಸಂವಿಧಾನ ದೇಶದ ಪ್ರತಿಯೊಬ್ಬರಿಗೂ ಸಮಾನ ಮತದಾನದ ಹಕ್ಕು ಕಲ್ಪಿಸಿದೆ. ಮಹಿಳೆಯರ ಮುಖ್ಯವಾಹಿನಿಗೆ ಕಾರಣವಾಗಿದೆ ಎಂದರು.

ದೇಶದಲ್ಲಿ ನೆಮ್ಮದಿ, ಶಾಂತಿ, ಸುವ್ಯವಸ್ಥೆಗೆ  ಸಂವಿಧಾನ ಕಾರಣವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ  ಎಂದು  ತಿಳಿಸಿದರು.

ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ನವೀನ್ ಕುಮಾರ್,ಉಪಾಧ್ಯಕ್ಷೆ ಲೋಕಮ್ಮ, ತಾ.ಪಂ ಇಓ ಕೆಂಚಪ್ಪ, ಸಿಪಿಐ ಹೆಚ್ಎಸ್.ರಾಷ್ಟ್ರಪತಿ,  ಬಿಇಓ ಹಾಲಮೂರ್ತಿ, ಪ.ಪಂ.ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸರ್ಕಾರಿ ನೌಕರರ ಸಂಘದ  ಅಧ್ಯಕ್ಷ ಎ.ಎಲ್.ತಿಪ್ಪೇಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್, ಪ.ಪಂ ಸದಸ್ಯರುಗಳು, ನಾಮನಿರ್ದೇಶಿತ ಸದಸ್ಯರುಗಳು  ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

error: Content is protected !!