ಮಲೇಬೆನ್ನೂರಿನಲ್ಲಿ ಜಿ.ಬಿ.ವಿನಯ್‌ಕುಮಾರ್ ನೇತೃತ್ವದ ಸ್ಬಾಭಿಮಾನಿ ಬಳಗದಿಂದ ಸಾರ್ವಜನಿಕ ಆದಾಲತ್
ಮಲೇಬೆನ್ನೂರು, ಜ.27- ಹಗರಿಬೊಮ್ಮನಹಳ್ಳಿ – ಶಿವಮೊಗ್ಗ ರಾಜ್ಯ ಹೆದ್ದಾರಿ ಕಳೆದ ಅನೇಕ ವರ್ಷಗಿಂದ ಅಗಲೀಕರಣ ಹಾಗೂ ಅಭಿವೃದ್ಧಿಗೊಳ್ಳದೇ ಇರುವುದಕ್ಕೆ ಜನಪ್ರತಿನಿಧಿಗಳಿ ನಿರ್ಲಕ್ಷ್ಯವೇ ಕಾರಣ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್‌ಕುಮಾರ್ ದೂರಿದರು.
ಸೋಮವಾರ ಪಟ್ಟಣದಲ್ಲಿ ಹಾದು ಹೋಗಿರುವ ಎನ್.ಹೆಚ್ ರಸ್ತೆ ಬಳಿ ಸ್ವಾಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಅದಾಲತ್ ಕಾರ್ಯಕ್ರಮವನ್ನು ಸಂವಿಧಾನಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇದುವರೆಗೂ ಅಧಿಕಾರ ನಡೆಸಿದ ಮತ್ತು ನಡೆಸುತ್ತಿರುವ ಜನಪ್ರತಿನಿಧಿಗಳು ರಾಜ್ಯ ಹೆದ್ದಾರಿ – 25ರ ಅಗಲೀಕರಣ ಹಾಗೂ ಅಭಿವೃದ್ಧಿ ಬಗ್ಗೆ ಸಚಿವರಿಗೆ ಮನವಿ ಮಾಡಿ, ಪ್ರಚಾರ ಪಡೆದುಕೊಂಡಿದ್ದಾರೆಯೇ ಹೊರತು ಕೆಲಸ ಮಾಡಿಸಿಲ್ಲ. ಇನ್ನಷ್ಟು ಜೀವಗಳನ್ನು ಬಲಿ ಪಡೆದುಕೊಂಡ ನಂತರ ರಸ್ತೆ ಅಗಲೀಕರಣವಾಗಲಿದೆ ಎಂದು ವಿನಯ್‌ಕುಮಾರ್ ಪ್ರಶ್ನಿಸಿದರು.
ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಾಜ್ಯದ ಪ್ರಮುಖ ಹೆದ್ದಾರಿ ಆಗಿರುವ ಶಿವಮೊಗ್ಗ ರಸ್ತೆ ಅತಿ ಶೀಘ್ರದಲ್ಲೇ ಅಗಲೀಕರಣ ಹಾಗೂ ಅಭಿವೃದ್ಧಿಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಮನ ಹರಿಸಬೇಕೆಂದು ಆಗ್ರಹಿಸಿದ ವಿನಯ್ ಅವರು, ಹರಿಹರ ತಾಲ್ಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಬಹು ನಿರೀಕ್ಷಿತ ಭೈರನಪಾದ ಏತ ನೀರಾವರಿ
ಯೋಜನೆ ಎಲ್ಲರಿಗೂ ಪ್ರಚಾರದ ಅಸ್ತ್ರವಾಗಿದೆಯೇ ಹೊರತು ಯೋಜನೆ ಮಾತ್ರ ಜಾರಿಗೊಂಡಿಲ್ಲ.
ಚಈ ಬಗ್ಗೆ ಮುಖ್ಯಮಂತ್ರಿಗಳು ಇತ್ತೀಚೆಗೆ ಡಿಪಿಆರ್ ಮಾಡಲು ಸೂಚನೆ ನೀಡಿದ್ದಾರೆ. ಅದರಂತೆ ಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕೆಂಬುದು ನಮ್ಮ ಬಳಗದ ಒತ್ತಾಯವಾಗಲಿದೆ ಎಂದು ವಿನಯ್‌ಕುಮಾರ್ ಹೇಳಿದರು.
ಈ ಹೋರಾಟ ಹರಿಹರ ಅಥವಾ ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ನಡೆಯುತ್ತಿಲ್ಲ. ಈ ಹೋರಾಟ ರಾಜ್ಯ ವ್ಯಾಪ್ತಿ ನಡೆಯುತ್ತಿದೆ.
ಆದರೆ, ಜನಪರ ಹೋರಾಟಕ್ಕೆ ಹರಿಹರ ತಾಲ್ಲೂಕಿನಲ್ಲಿ ಅಡ್ಡಿಪಡಿಸುವ ಕೆಲಸವನ್ನು ಕೆಲವರು ಮಾಡಿದ್ದು, ಇದನ್ನು ಸವಾಲಾಗಿ ಸ್ವೀಕರಿಸಿ, ನಮ್ಮ ಹೋರಾಟವನ್ನು ಈ ತಾಲ್ಲೂಕಿನ ಪ್ರತಿ ಹಳ್ಳಿಯಲ್ಲೂ ಮಾಡುತ್ತೇವೆ ಎಂದು ವಿನಯ್‌ಕುಮಾರ್ ಹೇಳಿದರು.
ಸ್ವಾಭಿಮಾನಿ ಬಳಗದ ರಾಜ್‌ಮೌರ್ಯ, ಶಿವಕುಮಾರ್ ಡಿ.ಶೆಟ್ಟರ್, ದಿಡಗೂರು ಸುದೀಪ್, ಮಲ್ಲನಾಯ್ಕನಹಳ್ಳಿ ಚಂದ್ರಶೇಖರ್, ಪುರಂದರ್ ಲೋಕೆಕೆರೆ, ವಿರೂಪಾಕ್ಷಪ್ಪ ಪಂಡಿತ್, ರಾಜು ಕರೇಗಣ್ಣನವರ್ ಸೇರಿದಂತೆ ಮಲೇಬೆನ್ನೂರಿನ ಕೆಲವು ಕಾಂಗ್ರೆಸ್ ಕಾರ್ಯಕರ್ತರು, ಆಟೋ ಚಾಲಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಕಲಾವಿದರಾದ ಜಿಗಳಿ ರಂಗನಾಥ್, ಸಿರಿಗೆರೆ ಶಿವಕುಮಾರ್ ನೇತೃತ್ವದ ತಂಡ ಜಾಗೃತಿ ಗೀತೆಗಳನ್ನು ಹಾಡಿದರು.
ಅಡ್ಡಿ : ಸಾರ್ವಜನಿಕ ಅದಾಲತ್ ಕಾರ್ಯಕ್ರಮಕ್ಕೆ
ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯದ ಕಾರಣ,
ಪುರಸಭೆ ಹಾಗೂ ಪೊಲೀಸ್ ಠಾಣೆಯ ಅಧಿಕಾರಿಗಳು ಧ್ವನಿವರ್ಧಕ ಬಳಕೆಗೆ ಅಡ್ಡಿ ಪಡಿಸಿದರು.