ನಗರದಲ್ಲಿ ಸಂಗೀತ ನೃತ್ಯಾದಿಗಳ ಮಹಾವಿದ್ಯಾಲಯದ ಸ್ಥಾಪನೆ ಅಗತ್ಯವಿದೆ

ನಗರದಲ್ಲಿ ಸಂಗೀತ ನೃತ್ಯಾದಿಗಳ ಮಹಾವಿದ್ಯಾಲಯದ ಸ್ಥಾಪನೆ ಅಗತ್ಯವಿದೆ

ನಾಟ್ಯ ಭಾರತಿ ವಾರ್ಷಿಕೋತ್ಸವದಲ್ಲಿ ಕುಲಪತಿ ಪ್ರೊ. ಕುಂಬಾರ

ದಾವಣಗೆರೆ, ಜ.27- ಶೈಕ್ಷಣಿಕ ರಂಗದಲ್ಲಿ ಗುರುತಿಸಿಕೊಂಡಿರುವ ದಾವಣಗೆರೆ ಮಹಾನಗರದಲ್ಲಿ ಶಾಸ್ತ್ರೀಯ ನೃತ್ಯ ಸಂಗೀತಾದಿಗಳ ಪೂರ್ಣ ಪ್ರಮಾಣದ ಶಿಕ್ಷಣ ನೀಡುವ ಮಹಾವಿದ್ಯಾಲಯ ಒಂದರ ಸ್ಥಾಪನೆಯ ಅಗತ್ಯವಿದೆ ಎಂದು  ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ. ಡಿ. ಕುಂಬಾರ ಅಭಿಪ್ರಾಯ ಪಟ್ಟರು.                        

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪ ದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ನಾಟ್ಯ ಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರದ 65ನೇ ವಾರ್ಷಿಕ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸ್ತ್ರೀಯ ನೃತ್ಯ ಸಂಗೀತ ಚಿತ್ರಕಲೆ ಇವುಗಳಲ್ಲಿನ ಆಸಕ್ತಿ ಸುಸಂಸ್ಕೃತಿಯ ಲಕ್ಷಣವಾಗಿದ್ದು, ಶಿಕ್ಷಣದ ಜೊತೆ ಜೊತೆಗೆ ಕಲೆಗಳಲ್ಲೂ ಆಸಕ್ತಿಯನ್ನು ಮುಂದುವರೆಸಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹಿಸಬೇಕು. ನೃತ್ಯ ಸಂಗೀತಾದಿಗಳಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗಗಳಲ್ಲೂ ಮೀಸಲಾತಿ ಇದೆ ಎಂದರು. 

ತಮ್ಮ ವಿಶ್ವವಿದ್ಯಾನಿಲಯದಲ್ಲಿ ಈ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡಲು ಎರಡು ಸ್ಥಾನಗಳ ಅವಕಾಶವಿದೆ ಎಂದು ಸಹಾ ಹೇಳಿದರು. 

ನಾಟ್ಯ ಭಾರತಿಯ ಗೌರವಾಧ್ಯಕ್ಷರೂ, ಹಿರಿಯ ಪತ್ರಕರ್ತರೂ ಆದ ಹೆಚ್.ಬಿ.ಮಂಜುನಾಥ ಮಾತನಾಡಿ, ಸಂಪತ್ತಿನಿಂದ ಸಂತೋಷ ಪಡೆಯ ಬಹುದು. ಆದರೆ ಆನಂದ ಪಡೆಯಬೇಕೆಂದರೆ ಅದು ಲಲಿತ ಕಲೆಗಳಾದ ಶಾಸ್ತ್ರೀಯ ನೃತ್ಯ, ಸಂಗೀತಗಳಿಂದ ಸಾಧ್ಯ. ಏಕೆಂದರೆ ಭಾರತೀಯ ಶಾಸ್ತ್ರೀಯ ನೃತ್ಯ ಸಂಗೀತಗಳು ಮಾನವ ಸೃಷ್ಟಿ ಆಗಿರದೆ ದೈವ ಸೃಷ್ಟಿಯಾಗಿವೆ. ಆತ್ಮ ನಿವೇದನೆಗೂ ಪರಮಾತ್ಮನ ಸಾಕ್ಷಾತ್ಕಾರಕ್ಕೂ ಇವು ಸಾಧನ ಎಂಬ ಭಾವನೆ ನಮ್ಮ ದೇಶದಲ್ಲಿದೆ, ಆದ್ದರಿಂದಲೇ ನಮ್ಮ ಶಾಸ್ತ್ರೀಯ ನೃತ್ಯ, ಸಂಗೀತಗಳನ್ನು ವಿಶ್ವಾದ್ಯಂತ ಎಲ್ಲರೂ ಪೂಜ್ಯ ಭಾವನೆಯಿಂದ ಸ್ವೀಕರಿಸುತ್ತಾರೆ ಎಂದರು. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ನೃತ್ಯ ಮತ್ತು ಸಂಗೀತಗಳ ಕುರಿತಾಗಿ ಗ್ರಂಥಗಳು 150 ರಿಂದ 200 ವರ್ಷಗಳ ಕೆಳಗೆ ರಚನೆಯಾದರೆ ಭಾರತ ದೇಶದಲ್ಲಿ ಮೂರುವರೆ ಸಾವಿರ ವರ್ಷಗಳ ಹಿಂದೆಯೇ ಭರತಮುನಿ, ನಂದಿಕೇಶ್ವರ, ಶಿಲಾಲಿ ಸಾರಂಗದೇವ ಮುಂತಾದ ಋಷಿಗಳು ನೃತ್ಯ ಸಂಗೀತಗಳ ಬಗ್ಗೆ ಮಹಾ ಗ್ರಂಥಗಳನ್ನೇ ರಚಿಸಿದ್ದಾರೆ ಎಂದರು.               

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ  ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್  ಮಾತನಾಡಿ,  ನಾಟ್ಯ ಭಾರತಿಯು  ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೂ ಕೈಗೆಟಕುವ ಶುಲ್ಕದಲ್ಲಿ ದಶಕಗಳಿಂದ ಶಾಸ್ತ್ರೀಯ ನೃತ್ಯ, ಸಂಗೀತ ಶಿಕ್ಷಣ ನೀಡುತ್ತಿರುವುದು ಸ್ವಾಗತಾರ್ಹ ಎಂದರು. 

ಸಂಸ್ಥೆಯ ಅಧ್ಯಕ್ಷರಾದ ವಿದುಷಿ ರಜನಿ ರಘುನಾಥ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.    

ಶ್ರೀನಿಧಿ ಆರ್ ಕುಲಕರ್ಣಿಯವರ ನಟುವಾಂಗ ವಿದುಷಿ ರಜನಿ ರಘುನಾಥ ಕುಲಕರ್ಣಿಯವರ ಹಾಡುಗಾರಿಕೆ ವಿದ್ವಾನ್ ಬಿ ಶ್ರೀನಾಥ ಭಟ್ ಹೊಸಪೇಟೆ ಇವರ ಮೃದಂಗ ಹಾಗೂ ವಿದ್ವಾನ್ ಜಿ ಸಿ ಕುಲಕರ್ಣಿ ತುಮಕೂರು ಇವರ ಹಾರ್ಮೋನಿಯಂ ಹಿಮ್ಮೇಳದಲ್ಲಿ ಸಂಸ್ಥೆಯ ಹಿರಿ-ಕಿರಿಯ ವಿದ್ಯಾರ್ಥಿನಿಯರು ಸುಮಾರು 19 ವಿಶೇಷ ಶಾಸ್ತ್ರೀಯ ಹಾಗೂ ಲಘು ಶಾಸ್ತ್ರಿಯ ವೈವಿಧ್ಯಮಯ ನೃತ್ಯಗಳನ್ನು ಹಾಗೂ ಗಂಗಾವತರಣ ಎಂಬ  ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು. 

ವಿಶೇಷವಾಗಿ ಜರ್ಮನಿಯಿಂದ ಬಂದ ಶ್ರೀಕಾಂತ ಆರ್. ಕುಲಕರ್ಣಿಯವರ ನವಿಲು ನೃತ್ಯ ಹಾಗೂ ಉಡುಪಿಯ ವಿಶ್ವನಾಥರಾವ್ ಮತ್ತು ವರ್ಣಿಕಾ ಅವರ `ವರವ ಕೊಡು’ ಎಂಬ ಕನಕದಾಸರ ಕೀರ್ತನೆ ನೃತ್ಯ ಆಕರ್ಷಕವಾಗಿತ್ತು.            

ನಾಟ್ಯ ಭಾರತಿಯ ನಿರ್ದೇಶಕ ರಾಜಶೇಖರ್, ವಿಜಯ ಕುಮಾರ್ ಕಲಮದಾನಿ, ಕುಬೇರ, ವಿಶ್ವನಾಥ್ ಕೆ ಎಸ್, ಸಾಗರ್ ತೌಡೂರು, ಬಿ ಶಿವಶಂಕರ್, ಶರತ್ ರಾಜ್ ಕಾರ್ಯ ಕ್ರಮಕ್ಕೆ ಸಹಕಾರ ನೀಡಿದರು. ಧಾರವಾಡದ ಸಂತೋಷ್ ಮಹಾಲೆ ದಂಪತಿ ಕಲಾತ್ಮಕ ಮೇಕಪ್ ವ್ಯವಸ್ಥೆ ನಿರ್ವಹಿಸಿದರು.

error: Content is protected !!