ಸಂಸ್ಕಾರ, ಸಂಸ್ಕೃತಿ, ಧಾರ್ಮಿಕ ಆಚಾರ-ವಿಚಾರಗಳ ಶಕ್ತಿಯೇ ಆರ್ಥಿಕ ಸದೃಢತೆ ಕಾರಣ

ಸಂಸ್ಕಾರ, ಸಂಸ್ಕೃತಿ, ಧಾರ್ಮಿಕ ಆಚಾರ-ವಿಚಾರಗಳ ಶಕ್ತಿಯೇ ಆರ್ಥಿಕ ಸದೃಢತೆ ಕಾರಣ

ಹರಿಹರದ ಗಣರಾಜ್ಯೋತ್ಸವದಲ್ಲಿ ಶಾಸಕ ಬಿ.ಪಿ. ಹರೀಶ್

ಹರಿಹರ, ಜ.27- ವಿದೇಶಿಗರು ಭಾರತ ದೇಶದ ಜನರ ಸಂಪತ್ತು, ವಜ್ರ, ವೈಢೂರ್ಯ ಸೇರಿದಂತೆ ಎಲ್ಲವನ್ನೂ ಕೊಳ್ಳೆ ಹೊಡೆದು ಕೊಂಡು ಹೋದರೂ ಸಹ, ಭಾರತ ದೇಶವು ಆರ್ಥಿಕ ವ್ಯವಸ್ಥೆಯಲ್ಲಿ ಮೂರನೇ ಸ್ಥಾನಮಾನ ಹೊಂದಿರುವುದಕ್ಕೆ ಇಲ್ಲಿನ ಭೂಮಿಯಲ್ಲಿರುವ ಸಂಸ್ಕೃತಿ, ಸಂಸ್ಕಾರ, ಧರ್ಮದ ಆಚಾರ-ವಿಚಾರಗಳಲ್ಲಿ ಇರುವಂತಹ ಶಕ್ತಿ ಕಾರಣವಾಗಿದೆ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಮೈದಾನದಲ್ಲಿ, ತಾಲ್ಲೂಕು ಆಡಳಿತದ ವತಿಯಿಂದ ನಡೆದ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಾತಿ, ಧರ್ಮ, ಭಾಷೆಗಳ ಭೇದವಿಲ್ಲದೆ ಭಾರತೀಯರು ನಾವೆಲ್ಲರೂ ಒಂದೇ ಎನ್ನುವ ಭಾವನೆಯ ಅಡಿಯಲ್ಲಿ ಸಾಗಿ ಭಾರತವನ್ನು ವಿಶ್ವಮ ಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡೋಣ ಎಂದರು.

ಭಾರತವನ್ನು ಸಾರ್ವಭೌಮ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಘೋಷಿಸಿದ ಸುದಿನವಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದವರ ಸ್ಮರಣೆ ಮಾಡುವುದು ಅತ್ಯವಶ್ಯಕವಾಗಿದೆ. ಅವರ ತ್ಯಾಗ, ಬಲಿದಾನ ದಿಂದಾಗಿ, ವಿಶ್ವವು ನಮ್ಮ ದೇಶದ ಕಡೆಗೆ ಗಮನ ಹರಿಸುವ ರೀತಿಯಲ್ಲಿ ಸಾಧನೆ ಮಾಡುವತ್ತ ಸಾಗಿದೆ. 

ಮಾಹಿತಿ ತಂತ್ರಜ್ಞಾನ ಮತ್ತು  ಚಂದ್ರಯಾನ 2, ಮಂಗಳಯಾನ ದಂತವುಗಳು ಯಶಸ್ವಿಯಾಗಿವೆ. ಹಾಗಾಗಿ ವಿಶ್ವ ಮಟ್ಟದಲ್ಲಿ ಭಾರತ ಆರ್ಥಿಕ ವ್ಯವಸ್ಥೆಯಲ್ಲಿ ಮೂರನೇ ಸ್ಥಾನಮಾನವನ್ನು ಗಳಿಸಿ ಬಲಾಢ್ಯ ರಾಷ್ಟ್ರವಾಗಿದೆ ಎಂದು ಹೇಳಿದರು.

ತಹಶೀಲ್ದಾರ್ ಗುರು ಬಸವರಾಜ್ ಧ್ವಜಾರೋಹಣ ಮಾಡಿ ಮಾತನಾಡಿ, ಭಾರತದಲ್ಲಿ ಏಕಾಗ್ರತೆಯಿಂದ, ಏಕತೆಯಿಂದ, ಸಮಗ್ರತೆಯಿಂದ ಒಂದು ದೇಶ ಕಟ್ಟಬೇಕಾದರೆ ನಮ್ಮದೇ ಆದ ಸ್ವಂತ ಸಂವಿಧಾನ ಇರಲಿಲ್ಲ. ಆಗಾಗಿ ಲಿಖಿತ ಹೊಂದಿರುವಂತಹ ಸಂವಿಧಾನವು ಜ. 26 ರಂದು ಆಚರಣೆಗೆ ಬಂತು, 399 ಸದಸ್ಯರನ್ನು ಹೊಂದಿ ಸಂವಿಧಾನದ ಕರಡು ಸಿದ್ದತೆ ಮಾಡಲಿಕ್ಕೆ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ 2 ವರ್ಷ 11 ತಿಂಗಳು 15 ದಿನಗಳನ್ನು ತೆಗೆದುಕೊಂಡಿದ್ದರ ಪರಿಣಾಮ 1950 ರಲ್ಲಿ ಸಂವಿಧಾನ ಅಂಗೀಕರಿಸಿ, ಗಣರಾಜ್ಯೋ ತ್ಸವ ಆಚರಣೆಗೆ ಬಂತು ಎಂದು ಹೇಳಿದರು.

ಭಾರತದ ಸಂವಿಧಾನವು ಸಮಾನತೆಯ ತತ್ವದ ಮೇಲೆ ನಿಂತಿದೆ. ಪ್ರಜೆಗಳೇ ಪ್ರಭುಗಳು ಎಂಬ ಸಂದೇಶ ಸಾರಿದ, ಸಂವಿಧಾನ ಜಾರಿಗೆ ಆದ ದಿನವಾಗಿದೆ ಎಂದು ಹೇಳಿದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿದರು.  ಶಾಸಕ ಬಿ.ಪಿ. ಹರೀಶ್ ವಿದ್ಯಾರ್ಥಿಗಳ ಗೌರವ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ತಾಪಂ ಇಓ ಸುಮಲತಾ, ಪ್ರಭಾರಿ ಬಿಇಓ ಕೃಷ್ಣಪ್ಪ, ಆರಕ್ಷಕ ವೃತ್ತ ನಿರೀಕ್ಷಕ ಸುರೇಶ್ ಸಗರಿ, ಎಸ್. ದೇವಾನಂದ್, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಪಿಎಸ್ಐ ವಿಜಯಕುಮಾರ್, ಶ್ರೀಪತಿ ಗನ್ನಿ, ನಗರಸಭೆ ಎಇಇ ವಿನಯ್ ಕುಮಾರ್, ಸಿಡಿಪಿಓ ಪೂರ್ಣಿಮಾ, ಕಾರ್ಮಿಕ ಇಲಾಖೆ ಕವಿತಾ, ತೋಟಗಾರಿಕೆ ಇಲಾಖೆ ಶಶಿಧರಯ್ಯ ಹಾಗೂ ಇತರರು ಹಾಜರಿದ್ದರು.

error: Content is protected !!