ಕಾಂಗ್ರೆಸ್ ಪಕ್ಷಕ್ಕೆ `ಮೇಕಾ’ ಶಕ್ತಿಯಂತೆ ಇದ್ದರು : ಎಸ್ಸೆಸ್ಸೆಂ
ದಾವಣಗೆರೆ, ಜ.26- ಕಾಂಗ್ರೆಸ್ ಪಕ್ಷಕ್ಕೆ ಮೇಕಾ ಸೂರ್ಯನಾರಾಯಣರು ಶಕ್ತಿಯಾಗಿದ್ದರು. ಇಂತಹ ಶಕ್ತಿಯನ್ನು ಜಿಲ್ಲಾ ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮೇಕಾ ಅವರನ್ನು ನೆನಪಿಸಿಕೊಂಡರು.
ಇಲ್ಲಿಗೆ ಸಮೀಪದ ಕಡ್ಲೇಬಾಳು ಗ್ರಾಮದ ಶ್ರೀ ಮಧ್ವಾಂಜನೇಯ ಸ್ವಾಮಿ ದೇವಸ್ಥಾನದ ಆವರಣ ದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಿ. ಮೇಕಾ ಸೂರ್ಯನಾರಾಯಣರವರ 25ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.
ಮೇಕಾರವರು ಉತ್ತಮ ಅನುಭವಿ ರಾಜಕಾರಣಿಯಾಗಿದ್ದರು. ಜನರಿಗೆ ಹತ್ತಿರವಾಗಿ ಬದುಕು ನಡೆಸಿದ ಅವರು, ಬಡವರು ಹಾಗೂ ಸಮಾಜದಲ್ಲಿನ ಎಲ್ಲರ ಸಮಸ್ಯೆಗಳಿಗೆ ಕಿವಿಯಾಗಿ ಸ್ಪಂದಿಸುತ್ತಿದ್ದರು ಮತ್ತು ಪಕ್ಷದಲ್ಲಿ ಸ್ನೇಹ ಜೀವಿಯಾಗಿ ಬೆರೆಯುತ್ತಿದ್ದರು ಎಂದು ಅವರನ್ನು ಸ್ಮರಿಸಿದರು.
ಈ ಭಾಗದ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಇವರು ಸಾಕ್ಷಿಯಾಗಿದ್ದಾರೆ. ಬಡವರು ಹಾಗೂ ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಇವರ ತಂಡ ನಾಗಮ್ಮ ಕೇಶವಮೂರ್ತಿ ಅವರೊಂದಿಗೆ ಇದ್ದು, ಪ್ರತಿ ಚುನಾವಣೆಯನ್ನೂ ಅಚ್ಚುಕಟ್ಟಾಗಿ ಎದುರಿಸಿ, ಗೆಲುವಿಗಾಗಿ ಶ್ರಮಿಸುತ್ತಿತ್ತು ಎಂದು ತಿಳಿಸಿದರು.
ಮೇಕಾ ಸೂರ್ಯನಾರಾಯಣ ಅವರ ಪಕ್ಷ ಸಂಘಟನೆಯ ದಾರಿ ಮತ್ತು ಅವರ ಮಾರ್ಗದರ್ಶನ ದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ನಡೆದು, ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲು ಮುಂದಾಗೋಣ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಡಾ. ಕರಿ ವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಮೇಕಾ ಸೂರ್ಯನಾರಾಯಣರು ಕಲಿಯುಗದ ಬಸವಣ್ಣನಂತಿದ್ದರು ಎಂದು ಅವರ ಸಾಮಾಜಿಕ ಸೇವೆಯನ್ನು ಪ್ರಶಂಸಿಸಿದರು.
ಮಾತೃ ಹೃದಯವಂತಿಕೆಯಿಂದ ಜನಸೇವೆಯಲ್ಲಿ ಮುಳುಗಿದ ಇವರು ರಸ್ತೆ, ಶಾಲೆ, ಕುಡಿಯುವ ನೀರು ಹಾಗೂ ವಸತಿ ವ್ಯವಸ್ಥೆಯನ್ನು ಜನರಿಗೆ ನೀಡುವ ಮುಖೇನ ಬಸವಣ್ಣನವರ ಆಶಯದಲ್ಲಿ ಬದುಕಿದ್ದರು. ಇವರಿಗೆ ಮುಕ್ತಿ ದೊರೆಯಲಿ ಎಂದು ಹಾರೈಸಿದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಅಂದಿನ ರಾಜಕೀಯಕ್ಕೂ ಇಂದಿನ ರಾಜಕೀಯಕ್ಕೂ ಬಹಳ ವ್ಯತ್ಯಾಸ ಇದೆ. ಅಂದಿನ ರಾಜಕೀಯ ನಾಯಕರಲ್ಲಿ ಸೇವಾ ಮನೋಭಾವವಿತ್ತು. ಆದರೆ ಇಂದಿನ ನಾಯಕರು ಕಮರ್ಷಿಯಲ್ ಆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೇಕಾ ಸೂರ್ಯನಾರಾಯಣ ಅವರು ಸೇವಾ ಮನೋಭಾವ ಹೊಂದಿದ ನಾಯಕರಾಗಿದ್ದರು. ಇಂತಹ ಸೇವಾ ಮನೋಭಾವ ಗುಣ ಹಾಗೂ ಅವರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು ಎಂದು ಹೇಳಿದರು.
ಶೋಷಿತರು, ಬಡವರು ಹಾಗೂ ತಳ ಸಮುದಾಯದ ಅಭಿವೃದ್ಧಿಗಾಗಿ ಮೇಕಾ ಸೂರ್ಯನಾರಾಯಣರು ಶ್ರಮಿಸಿದ್ದರು.
ಬಡವರಿಗೆ ಒಳಿತು ಮಾಡುವ ಗುಣ ಅವರಲ್ಲಿತ್ತು ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ
ಎನ್. ಜಯದೇವ ನಾಯ್ಕ್ ಶ್ಲ್ಯಾಘಿಸಿದರು.
ಕಾರ್ಯಕ್ರಮದ ಪ್ರಾರಂಭಕ್ಕೂ ಮುನ್ನ ಅರಸಾಪುರ, ದೊಡ್ಡ ಓಬಜ್ಜಿಹಳ್ಳಿ, ಬದಿಯನಾಯಕನ ಹಟ್ಟಿ ಹಾಗೂ ಚಿಕ್ಕ ಓಬಜ್ಜಿಹಳ್ಳಿ ಗ್ರಾಮಗಳಲ್ಲಿನ ವೃತ್ತಗಳಿಗೆ ಮೇಕಾ ಸೂರ್ಯನಾರಾಯಣ ಹೆಸರನ್ನು ನಾಮಕರಣ ಮಾಡಲಾಯಿತು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಮಾಜಿ ಸಚಿವ ಹೆಚ್. ಆಂಜನೇಯ, ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಪಂಚಮಸಾಲಿ ಸಮಾಜದ ಬಿ.ಸಿ. ಉಮಾಪತಿ, ಮಾಜಿ ಶಾಸಕ ಬಿ.ಹೆಚ್. ತಿಪ್ಪಾರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ರಾಘವೇಂದ್ರ ನಾಯಕ್, ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ವೇಣುಗೋಪಾಲ್ ರೆಡ್ಡಿ, ಕೆಪಿಸಿಸಿ ಸದಸ್ಯ ಆರ್.ಎಸ್. ಶೇಖರಪ್ಪ, ನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್,
ಡಿ.ಬಸವರಾಜ್, ಉದಯಶಂಕರ್ ಒಡೆಯರ್, ನಗರ ಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೆಚ್.ಎಂ. ರುದ್ರಮುನಿಸ್ವಾಮಿ, ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಇತರರು ಉಪಸ್ಥಿತರಿದ್ದರು.
ಮೇಕಾ ಸೂರ್ಯನಾರಾಯಣ ಅವರ ಪುತ್ರರೂ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರೂ, ಕಮ್ಮ ಸಮಾಜ ಮತ್ತು ರೆಡ್ಡಿ ಜನ ಸಂಘದ ಅಧ್ಯಕ್ಷರೂ ಆದ ಮೇಕಾ ಮುರುಳೀಕೃಷ್ಣ, ರಿಯಲ್ ಎಸ್ಟೇಟ್ ಉದ್ಯಮಿ ಮೇಕಾ ಸತ್ಯನಾರಾಯಣ ಸಹೋದರರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿದರು.