76ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಸಚಿವರು
ಪಥ ಸಂಚಲನದಲ್ಲಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್
ದಾವಣಗೆರೆ, ಜ. 26- ಜನಸಾಮಾನ್ಯರ ಬದುಕಿಗೆ ಆರ್ಥಿಕ ಸಬಲತೆಯೊಂದಿಗೆ, ಸಾಮಾ ಜಿಕ ಗೌರವ ತಂದುಕೊಡುವ ದೃಷ್ಟಿಯಿಂದ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಹಲವಾರು ಜನಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿದರು.
ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾ ರೋಹಣ ನೆರವೇರಿಸಿ, ಪಥ ಸಂಚಲನದಲ್ಲಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ತಮ್ಮ ಸಂದೇಶದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಈವರೆಗೂ 5 ಗ್ಯಾರಂಟಿ ಯೋಜನೆ ಗಳಿಂದ ಒಟ್ಟು ರೂ. 1966 ಕೋಟಿ ಮೊತ್ತವನ್ನು ನೇರವಾಗಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಅವರ ಖಾತೆಗೆ ವರ್ಗಾಯಿಸಲಾಗಿದೆ ಎಂದರು.
ರೈತರ ಬದುಕನ್ನು ಇನ್ನಷ್ಟು ಹಸನಗೊಳಿ ಸಲು ಸರ್ಕಾರ ಬದ್ಧವಾಗಿದೆ. ಕೆರೆ ತುಂಬಿಸುವ ಯೋಜನೆ, ನಾಲೆಗಳ ದುರಸ್ತಿ ಕೈಗೊಳ್ಳುವ ಮೂಲಕ ಕೊನೆ ಭಾಗಕ್ಕೂ ನೀರು ಸಿಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಜನರ ಆರೋಗ್ಯ ರಕ್ಷಣೆಯೂ ಸರ್ಕಾರದ ಜವಾಬ್ದಾರಿಯಾಗಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ರೂ. 35 ಕೋಟಿ ವೆಚ್ಚದಲ್ಲಿ ಮಹಿಳಾ ಮತ್ತು ಮಕ್ಕಳ ಚಿಕಿತ್ಸಾ ಘಟಕವನ್ನು ಹಾಗೂ ರೂ. 13 ಕೋಟಿ ವೆಚ್ಚದಲ್ಲಿ ಅಪಘಾತ ಮತ್ತು ಟ್ರಾಮಾ ಕೇರ್‌ಸೆಂಟರ್ ಕಾರ್ಯಾರಂಭ ಮಾಡಲಾಗಿದೆ. ಅತ್ಯವಶ್ಯಕವಾಗಿದ್ದ ತೀವ್ರ ನಿಗಾ ಘಟಕ ನಿರ್ಮಾಣಕ್ಕೆ ರೂ. 17 ಕೋಟಿ ಅನುದಾನ ನೀಡಲಾಗಿದೆ. ಇದಲ್ಲದೇ ಹೊನ್ನಾಳಿ ಕತ್ತಿಗೆ ಮತ್ತು ಕೂಲಂಬಿಯಲ್ಲಿ ರೂ. 6 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದರು.
ಜಿಲ್ಲೆಗೆ ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ 8,510 ಮನೆಗಳನ್ನು ಮಂಜೂರು ಮಾಡಲಾಗಿದೆ. ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆಯಡಿ 2 ಅಕ್ಕ ಕೆಫೆ ಮಂಜೂರಾಗಿದ್ದು ಈಗಾಗಲೇ ದಾವಣಗೆರೆ ನಗರದಲ್ಲಿ ಆರಂಭಿಸ ಲಾಗಿದೆ. ಮಹಿಳಾ ಸ್ವ ಸಹಾಯ ಸಂಘದವರೇ ಇದರ ನಿರ್ವಹಣೆ ಮಾಡುವರು ಎಂದು ಹೇಳಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿ.ಆರ್.ಆರ್ ಶಾಲೆಗಳ ತಂಡ ಪ್ರಥಮ ಸ್ಥಾನ, ಅಲ್ ಇಕ್ರಾ ಶಾಲೆ ದ್ವಿತೀಯ ಸ್ಥಾನ, ಸೆಂಟ್ ಜಾನ್ಸ್ ಪ್ರೌಢಶಾಲೆ ತೃತೀಯ ಸ್ಥಾನ ಪಡೆದವು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಪಾಲಿಕೆ ಮೇಯರ್ ಕೆ. ಚಮನ್‍ಸಾಬ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಜಯದೇವ ನಾಯ್ಕ್ , ಉಪಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಗಣೇಶ್ ಹುಲ್ಲುಮನೆ, ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ರವಿಕಾಂತೇಗೌಡ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ., ಎಸ್ಪಿ ಉಮಾ ಪ್ರಶಾಂತ್, ಜಿ.ಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಮತ್ತಿತರರಿದ್ದರು.