ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದಿಂದ ಪ್ರತಿಭಟನೆ
ದಾವಣಗೆರೆ, ಜ.24- ಸರ್ಕಾರವು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆ ಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ, ಸಹಾಯಕರಿಗೆ 10 ಸಾವಿರ ಗೌರವ ಧನ ನೀಡಬೇಕು ಎಂದು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ (ಹೆಚ್‌ಕೆಆರ್ ಬಣ) ಆಗ್ರಹಿಸಿದೆ.
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ (ಹೆಚ್‌ಕೆಆರ್ ಬಣ) ದಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಮುಖಂಡರಾದ ವಿಶಾಲಾಕ್ಷಿ ಮೃತ್ಯುಂಜಯ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿಸ್ವಾರ್ಥ ಸೇವೆಯಿಂದ ಕೆಲಸ ಮಾಡುತ್ತಿ ದ್ದಾರೆ. ಅವರ ದುಡಿಮೆಗೆ ತಕ್ಕ ಪ್ರತಿಫಲ ಕೊಡುವಂತೆ ಒತ್ತಾಯಿಸಿದರು.
ಮಕ್ಕಳ ಪೌಷ್ಠಿಕ ಆಹಾರ, ಲಾಲನೆ-ಪಾಲನೆ, ಆರೋಗ್ಯ, ಗರ್ಭಿಣಿ, ಬಾಣಂತಿಯರ ಆರೋಗ್ಯ ಕಾಳಜಿ ವಹಿಸುವ ಕೆಲಸವನ್ನು ನಿಸ್ವಾರ್ಥತೆಯಿಂದ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಬದುಕಲು ಬೇಕಾಗುವಷ್ಟು ಸಂಭಾವನೆ ನೀಡುತ್ತಿಲ್ಲ. ಸರ್ಕಾರ ನಮ್ಮ ಕೆಲಸವನ್ನು ಕೇವಲ ಗೌರವ ಸೇವೆ ಎಂದು ಪರಿಗಣಿಸದೇ ಸಂಭಾವನೆ ಹೆಚ್ಚಿಸಬೇಕು ಎಂದರು.
ಗುಜರಾತ್ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡಿರುವ ನಿರ್ದೇಶನದಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಯನ್ನು ನಾಗರಿಕ ಸೇವೆ ಎಂದು ಪರಿಗಣಿಸಿ ಕ್ರಮವಾಗಿ ಸಿ ಮತ್ತು ಡಿ ದರ್ಜೆ ನೌಕರರ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ಎಂ. ಸರ್ವಮ್ಮ, ವಿಮಲಾಕ್ಷಿ, ಸುಶೀಲ, ಜೆ.ಎಂ. ಉಮಾ, ಸಿ.ಜಿ. ಕಾಳಮ್ಮ, ಸುಧಾ, ಹೊನ್ನಮ್ಮ, ಇಂದಿರಾ, ಎನ್.ಜಿ. ಪುಷ್ಪ, ಗಾಯತ್ರಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.