ಮಲೇಬೆನ್ನೂರು, ಜ.24- ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಮತ್ತು ಅಪೂರ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಜ.24ರಂದು ಇಬ್ಬರು ತಾಯಂದಿರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದ್ದರಿಂದ ಎರಡೂ ಆಸ್ಪತ್ರೆಯ ವೈದ್ಯರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂಗಿನಗೊಂದಿ ಗ್ರಾಮದ ರೇಷ್ಮಾ ಮಣಿಕಂಠ ಅವರಿಗೆ ಹೆಣ್ಣು ಮಗು ಜನನವಾಗಿದೆ. ತಾಯಿ, ಮಗು ಇಬ್ಬರೂ ಸ್ವಾಸ್ಥ್ಯವಾಗಿದ್ದಾರೆ ಎಂದು ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ `ಜನತಾವಾಣಿ’ಗೆ ತಿಳಿಸಿದರು.
ಅಪೂರ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕುಂಬಳೂರಿನ ಚೈತ್ರ ಎಂಬುವವರಿಗೆ ಈ ವಿಶೇಷ ದಿನದಂದು ಹೆಣ್ಣು ಮಗು ಜನಿಸಿದ್ದು, ಇದು ಅವರಿಗೆ ಚೊಚ್ಚಲ ಮಗುವಾಗಿದೆ. ಅವರ ತಂದೆ-ತಾಯಿಗೆ ಸಂತೋಷವಾಗಿದೆ. ನಾವೂ ಸಹ ಈ ದಿನವನ್ನು ಸಂಭ್ರಮಿಸಿದ್ದೇವೆ ಎಂದು ಸ್ತ್ರೀ ರೋಗ ಮತ್ತು ಹೆರಿಗೆ ತಜ್ಞೆ ಡಾ. ಅಪೂರ್ವ ಹೇಳಿದರು.
ಹೆರಿಗೆ ಆದ ಸ್ವಲ್ಪ ಸಮಯದ ನಂತರ ಆ ಇಬ್ಬರು ತಾಯಂದಿರಿಗೆ ಸಿಹಿ ನೀಡುವ ಮೂಲಕ `ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ’ ಆಚರಿಸಲಾಯಿತು.
ಪುರಸಭೆ ಅಧ್ಯಕ್ಷ ಹನುಮಂತಪ್ಪ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ, ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿ ಕಾರಿ ಕಿರಣ್, ಆರೋಗ್ಯ ಸುರಕ್ಷಣಾಧಿಕಾರಿ ವಿಮಲಶೀಲ, ಅಪೂರ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ಡಾ.ಟಿ ಬಸವರಾಜ್, ಚಿದಾನಂದಮ್ಮ, ಡಾ. ಅರ್ಜುನ್, ನಳಿನಾಕ್ಷಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.