ಸರ್ಕಾರದಿಂದ ದಿನಪತ್ರಿಕೆಗಳ ಕತ್ತು ಹಿಸುಕುವ ಕೆಲಸ

ಸರ್ಕಾರದಿಂದ ದಿನಪತ್ರಿಕೆಗಳ ಕತ್ತು ಹಿಸುಕುವ ಕೆಲಸ

ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ  ಜಾಹೀರಾತು ದರ ಹೆಚ್ಚಳ ಮಾಡಬೇಕು

 -ಎ.ಸಿ.ತಿಪ್ಪೇಸ್ವಾಮಿ, ರಾಜ್ಯಾಧ್ಯಕ್ಷರು, ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ 

ದಾವಣಗೆರೆ, ಜ. 20- ಸಾರ್ವಜನಿಕರು – ಸರ್ಕಾರದ ಮಧ್ಯೆ ಕೊಂಡಿಯಾಗಿರುವ ದಿನಪತ್ರಿಕೆಗಳ ಕತ್ತು ಹಿಸುಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು, ಇದರಿಂದ ಪತ್ರಿಕೆಗಳನ್ನು ನಡೆಸುವುದೇ ಸವಾಲಿನ ಕೆಲಸವಾಗಿದೆ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು. 

ನಗರದ ಬಂಟರ ಸಮುದಾಯ ಭವನದಲ್ಲಿ  ಏರ್ಪಡಿಸಲಾಗಿದ್ದ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ದಿನಪತ್ರಿಕೆಗಳಿಗೆ ಆಸರೆಯಾಗಬೇಕಿದ್ದ ರಾಜ್ಯ ಸರ್ಕಾರ, ಈಗ ಪತ್ರಿಕೆಗಳ ಏಳಿಗೆಗೆ ಸಹಕಾರ ನೀಡುವ ಬದಲಿಗೆ ಅಸಹಕಾರ ನೀಡುವ ಪ್ರವೃತ್ತಿ ಮುಂದುವರೆದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 

ಬದಲಾದ ಪರಿಸ್ಥಿತಿಯಲ್ಲಿ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಪೈಪೋಟಿ ನಡೆಸುವ ಸ್ಥಿತಿಯಲ್ಲಿಲ್ಲ. ದುಬಾರಿ ಮುದ್ರಣ ವೆಚ್ಚ, ಕಾಗದ, ಸಿಬ್ಬಂದಿ ವೇತನ ಹೀಗೆ ಪ್ರತಿಯೊಂದರ ಬೆಲೆಗಳು ಗಗನಮುಖಿಯಾಗಿದ್ದು, ಪತ್ರಿಕೆಗಳನ್ನು ಹೊರತರುವುದೇ ಕಷ್ಟದಾಯಕ ಕೆಲಸ ಸಂಪಾದಕರದ್ದಾಗಿದೆ. ಪತ್ರಿಕೆಯ ಮಾರಾಟ ಬೆಲೆಗೂ, ಮುದ್ರಣ ಖರ್ಚು-ವೆಚ್ಚಕ್ಕೂ ತುಲನೆ ಮಾಡಿ ನೋಡಿದಾಗ ಮುದ್ರಣ ವೆಚ್ಚಕ್ಕಿಂತಲೂ ಮುದ್ರಣ ಮಾರಾಟ ಬೆಲೆ ತೀರಾ ಕಡಿಮೆಯಾಗಿದೆ. ಪತ್ರಿಕೆಗಳನ್ನು ಕೊಂಡು ಓದುವ ಪ್ರವೃತ್ತಿ ಜನರಲ್ಲಿ ದಿನೇ ದಿನೇ ಕಡಿಮೆಯಾಗುತ್ತಿದೆ. 

ಒಂದು ಕಾಲದಲ್ಲಿ ಪತ್ರಿಕೆಗಳಿದ್ದ ಮಾನ್ಯತೆ ಇಂದು ಕ್ಷೀಣಿಸುತ್ತಿದ್ದು, ಮಾಧ್ಯಮ ಕ್ಷೇತ್ರದಲ್ಲಿರುವ ಎಲ್ಲರೂ ಪತ್ರಿಕೆ ಗಳ ಮಹತ್ವ ಕುರಿತು ಜನರಲ್ಲಿ ಸದಭಿಪ್ರಾಯ ಮೂಡಿಸುವ ಕೆಲಸಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು.

ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್.ಬಡದಾಳ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಸಂಘದ ಉಪಾಧ್ಯಕ್ಷರುಗಳಾದ ಮಂಜುನಾಥ ಅಬ್ಬಿಗೇರಿ, ರಾಮಕೃಷ್ಣ ಮಾಮರ ಮತ್ತು ಭೀಮರಾಯ ಹದ್ದಿನಾಳ ಮಾತನಾಡಿದರು. 

ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಆರ್. ಕುಣೆಬೆಳಕೆರೆ, ವರದಿಗಾರರ ಕೂಟದ ನಿಕಟಪೂರ್ವ ಅಧ್ಯಕ್ಷ ಕೆ. ಏಕಾಂತಪ್ಪ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ರಮೇಶ್ ಜಹಗೀರದಾರ್, ದೂರದರ್ಶನದ ವರದಿಗಾರ ಎ.ಎಲ್.ತಾರಾನಾಥ, ಡಾ. ವರದರಾಜು ಮಾತನಾಡಿದರು. 

ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪುರಸ್ಕೃತರಿಗೆ ಮತ್ತು ಮಾನ್ಯತಾ ಸಮಿತಿ ಸದಸ್ಯರಿಗೆ ಸನ್ಮಾನಿಸಿ, ಗೌರವಿಸಲಾಯಿತು. 

ಪತ್ರಿಕಾ ಮಾನ್ಯತಾ ಸಮಿತಿ ಸದಸ್ಯರಾದ ಯಳನಾಡು ಮಂಜುನಾಥ, ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯರಾದ ಕೆ. ಜೈಮುನಿ, ಬಿ. ವಾಸುದೇವ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ವೇದಮೂರ್ತಿ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು. 

ಚಿನ್ನಸಮುದ್ರದ ಜಾನಪದ ಕಲಾವಿದ ಉಮೇಶ ನಾಯ್ಕ, ಬಸವ ಕಲಾ ಲೋಕದ ಕಲಾವಿದರು ಜಾನಪದ ಹಾಡುಗಳನ್ನು   ಸುಶ್ರಾವ್ಯವಾಗಿ ಹಾಡಿದರು. ಎಸ್.ಆರೋಗ್ಯ ಸ್ವಾಮಿ ಕವನ ವಾಚನ ಮಾಡಿದರು. ಸಪ್ತರ್ಷಿ ಯೋಗ ಅಕಾಡೆಮಿಯ ಅಂತರ ರಾಷ್ಟ್ರೀಯ ಯೋಗಪಟುಗಳಾದ ಕು. ಶ್ರೇಯ ಶಿವಪೂಜಿ, ಕು. ಅನನ್ಯ ಪ್ರಾರ್ಥನಾ ಗೀತೆಯನ್ನು ನೃತ್ಯದೊಂದಿಗೆ ನಡೆಸಿಕೊಟ್ಟರು. ರಾಜ್ಯ ಸಂಘದ ಖಜಾಂಚಿ ವೇದಮೂರ್ತಿ ಸ್ವಾಗತಿಸಿದರು. ಹಿರಿಯ ಪತ್ರಕರ್ತೆ ದೇವಿಕಾ ಸುನೀಲ್ ನಿರೂಪಿಸಿದರು. ಜಿಲ್ಲಾ ಖಜಾಂಚಿ ಶಿವಮೂರ್ತಿ ವಂದಿಸಿದರು.

error: Content is protected !!