ದಾವಣಗೆರೆ, ಜ.20- ಚಿತ್ರಕಲೆಯಲ್ಲಿ ಪರಿಣಿತಿ ಸಾಧಿಸಲು ತಾಳ್ಮೆ, ಏಕಾಗ್ರತೆ ಹಾಗೂ ಪರಿಶ್ರಮ ಬಹಳ ಮುಖ್ಯ ಎಂದು ಪ್ರೊ.ಸಿ.ಹೆಚ್ ಮುರಿಗೇಂದ್ರಪ್ಪ ಹೇಳಿದರು.
ನಗರದ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಚಿತ್ರಕಲಾ ಮತ್ತು ಕಾರ್ಯಾಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿತ್ರ ಕಲೆಯು ಭಾವನೆಗಳನ್ನು ಹುಟ್ಟುಹಾಕಲಿದೆ. ಇದು ಕರಗತವಾಗಲು ಸತತ ಪರಿಶ್ರಮ ಹಾಗೂ ತಾಳ್ಮೆ ಬೇಕೇಬೇಕು. ಸೃಜನಶೀಲತೆ, ಕಲಾ ಮೌಲ್ಯ ಹಾಗೂ ತಾಂತ್ರಿಕ ಪ್ರಬುದ್ಧ
ಚಿತ್ರ ಕಲಾವಿದರನ್ನು ಬೆಳೆಸಲಿದೆ ಎಂದು ಹೇಳಿದರು.
ಕಲಾ ಗ್ಯಾಲರಿಯಲ್ಲಿ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ನಡೆಸುತ್ತಿರುವ ಬಾಬು ಜತ್ತಕರ್, ಭೀಮರಾವ್ ಕೆ. ಬಡಿಗೇರ್, ಶಶಿಧರ್ ಎಂ. ಲೋಹಾರ್, ಶಿವಾನಂದ ಕೆ. ಪತ್ತಾರ ಇವರ ಕಲಾಕೃತಿಗಳು ಉನ್ನತ ಮಟ್ಟದ್ದಾಗಿದ್ದು, ಇವರ ಕಲಾ ಪ್ರೌಢಿಮೆಗೆ ಕಲಾ ಪ್ರದರ್ಶನವೇ ಸಾಕ್ಷೀಕರಿಸುತ್ತಿದೆ ಎಂದು ಶ್ಲ್ಯಾಘಿಸಿದರು.
ಸಾಹಿತಿ ಬಾ.ಮ ಬಸವರಾಜ್ ಮಾತನಾಡಿ, ಕಲಾಕೃತಿಗಳ ಪ್ರದರ್ಶನವು ಕಲಾವಿದರ ಪ್ರಾವೀಣ್ಯತೆಗೆ ಸಾಕ್ಷಿಯಾಗಿದೆ. ಈ ಕಾಲೇಜಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಕಲಾ ಕಾರ್ಯ ಕ್ರಮಗಳಿಂದ ಕಾಲೇಜಿನ ವರ್ಚಸ್ಸು ಹೆಚ್ಚಾಗಿದೆ ಎಂದರು.
ಪ್ರಾಚಾರ್ಯ ಡಾ. ಜೈರಾಜ ಎಂ. ಚಿಕ್ಕಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಕಲಾ ಜ್ಞಾನ ದ್ವಿಗುಣಗೊಳಿಸುವಂತೆ ಮಾಡುವುದೇ ನಮ್ಮ ಧ್ಯೇಯ ಎಂದು ಹೇಳಿದರು.
ಈ ವೇಳೆ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್ ಪಿ. ವಲ್ಲೇಪುರೆ, ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ಟ, ನಿವೃತ್ತ ಪ್ರಾಚಾರ್ಯ ಡಾ.ರವೀಂದ್ರ ಕಮ್ಮಾರ, ಎಲ್ ಕೆ. ಹನುಮಂತಾಚಾರ್, ಪಿಹೆಚ್‌ಡಿ ವಿದ್ಯಾರ್ಥಿ ಸುಭಾಷ್ ಕುಂಬಾರ, ಚಂದ್ರಶೇಖರ್ ತೆಗ್ಗಿನಮಠ, ಅರುಣ್ ಕಮ್ಮಾರ ಇತರರು ಇದ್ದರು.