ದಾವಣಗೆರೆ, ಜ.20- ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕು, ಅವರ ಸ್ವಾವಲಂಬಿ ಬದುಕಿಗೆ ಅಕ್ಕ ಕೆಫೆಯು ಸಹಕಾರಿಯಾಗಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಸೋಮವಾರ ಪಶು ವೈದ್ಯಕೀಯ ಇಲಾಖೆ ಮುಂಭಾಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವ ನೋಪಾಯ ಅಭಿಯಾನ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಹಭಾಗಿತ್ವ ದಲ್ಲಿ ಮಹಿಳಾ ಸ್ವ-ಸಹಾಯ ಸಂಘದವರು ನಿರ್ವಹಣೆ ಮಾಡುವ ಅಕ್ಕ ಕೆಫೆ ಉದ್ಘಾಟಿಸಿ ಮಾತನಾಡಿದರು.
ಅಕ್ಕ ಕೆಫೆಯನ್ನು ಸ್ವಸಹಾಯ ಗುಂಪಿಗೆ ಸೇರಿದ 14 ಮಹಿಳೆಯರು ನಡೆಸುವರು. ಬೆಳಗ್ಗೆ 6 ರಿಂದ ರಾತ್ರಿ 10 ರ ವರೆಗೆ ವಾರವಿಡೀ ಕಾರ್ಯನಿರ್ವಹಿಸಲಿದೆ. ಇಲ್ಲಿ ಆರೋಗ್ಯಕರ, ಮನೆರುಚಿಯ ಸ್ವಾದಿಷ್ಟ ಆಹಾರ ಲಭ್ಯವಿರಲಿದೆ. ಶುಚಿ-ರುಚಿ ಜತೆಗೆ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಆಹಾರ ಪೂರೈಕೆಯಾಗಲಿದೆ ಎಂದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ, ಎಸ್ಪಿ ಉಮಾ ಪ್ರಶಾಂತ್, ಜಿ.ಪಂ. ಸಿಇಒ ಸುರೇಶ್ ಬಿ.ಇಟ್ನಾಳ್, ಜಿ.ಪಂ. ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ ಉಪಸ್ಥಿತರಿದ್ದರು.