ಶಾಸಕರ ಆರೋಪ: ಕಾಮಗಾರಿ ಪರಿಶೀಲನೆಗೆ ಸೂಚಿಸಿದ ಸಚಿವ ಎಸ್ಸೆಸ್ಸೆಂ
ದಾವಣಗೆರೆ, ಜ. 19- ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಪರಿಶೀಲನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚಿಸಿದರು.
ಜಿಲ್ಲಾ ಪಂಚಾಯ್ತಿಯ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ನಡೆದ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲೆಲ್ಲಿ ಕಾಮಗಾರಿಗಳು ಸಮರ್ಪಕವಾಗಿಲ್ಲ ಎಂಬ ದೂರುಗಳಿವೆಯೋ ಅಂತಹ ಕಡೆ ಶಾಸಕರು, ಜಿಲ್ಲಾಧಿಕಾರಿ, ಜಿ.ಪಂ. ಸಿಇಓ ತೆರಳಿ ಪರಿಶೀಲನೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಇದಕ್ಕೂ ಮುನ್ನ ಶಾಸಕ ಕೆ.ಎಸ್.ಬಸವಂತಪ್ಪ ಬಹುತೇಕ ಗ್ರಾಮಗಳಲ್ಲಿ ಜಲ್ಜೀವನ್ ಮಿಷನ್ ಯೋಜನೆ ಸಂಪೂರ್ಣ ವಿಫಲವಾಗಿದೆ. ಶೇ.90ರಷ್ಟು ಹಳ್ಳಿಗಳಲ್ಲಿ ನೀರು ಬರುತ್ತಿಲ್ಲ. ಆದರೂ ಎನ್ಒಸಿ ನೀಡಿ, ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗುತ್ತಿದೆ ಎಂದು ದೂರಿದರು.
ಜಿ.ಪಂ. ಸಿಇಓ ಸುರೇಶ್ ಇಟ್ನಾಳ್ ಮಾತನಾಡಿ, ಇದುವರೆಗೂ 630 ಕಾಮಗಾರಿಗಳು ಪೂರ್ಣಗೊಂಡಿದ್ದು, ಈ ಪೈಕಿ 20 ಗ್ರಾಮಗಳಲ್ಲಿ ಕಾಮಗಾರಿ ಸಮರ್ಪಕವಾಗಿಲ್ಲ ಎಂದರು.
ಮರಳು ಬ್ಲಾಕ್ ಹರಾಜಿಗೆ ಶೀಘ್ರ ಟೆಂಡರ್: ಎಸ್ಸೆಸ್ಸೆಂ
ಜಿಲ್ಲೆಯಲ್ಲಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ಮುಗಿಯದ ಕಾರಣ ಮರಳಿಗೆ ಸಮಸ್ಯೆಯಾಗಿದ್ದು ಇದರ ನಿವಾರಣೆಗಾಗಿ ಶೀಘ್ರದಲ್ಲಿ ಟೆಂಡರ್ ಕರೆದು ಗುರುತಿಸಲಾದ 24 ಬ್ಲಾಕ್ಗಳಲ್ಲಿ ಮರಳು ಎತ್ತಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಜಿಲ್ಲೆಯಲ್ಲಿ ಮರಳು ಬ್ಲಾಕ್ಗಳನ್ನು ಹರಾಜು ಮಾಡದ ಕಾರಣ ಶಿವಮೊಗ್ಗದಿಂದ ಮರಳು ತರಿಸಿಕೊಳ್ಳ ಬೇಕಾಗಿದೆ ಮತ್ತು ಇಲ್ಲಿ ಕಾಳಸಂತೆಯಲ್ಲಿ ಮರಳು ಸಾಗಣೆ ಮಾಡ ಲಾಗುತ್ತದೆ. ಇದರಿಂದ ಬಡವರು, ಮಧ್ಯಮ ವರ್ಗದವರು ಮನೆ ಕಟ್ಟಿಕೊಳ್ಳಲು ಸಮಸ್ಯೆಯಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಸಭೆಯಲ್ಲಿ ಪ್ರಸ್ತಾಪಿಸಿದರು.ಈ ವೇಳೆ ಗಣಿ ಮತ್ತು ಭೂ ವಿಜ್ಞಾನ ಸಚಿವರ ಖಾತೆಗೆ ಬರುವುದರಿಂದ ಶೀಘ್ರವಾಗಿ ಟೆಂಡರ್ ಕರೆಯಬೇಕೆಂ ದಾಗ ಸಚಿವರು ಅಲ್ಪಾವಧಿ ಟೆಂಡರ್ ಕರೆದು ಗುರುತಿಸಲಾದ ಮರಳು ಬ್ಲಾಕ್ಗಳನ್ನು ಹರಾಜು ಮಾಡುವ ಮೂಲಕ ಜಿಲ್ಲೆಯ ಜನರಿಗೆ ಮರಳು ಸಿಗುವಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗೆ ತಿಳಿಸಿದರು.
ಮೊಟ್ಟೆ ವಿತರಣೆ ವಿಡಿಯೋ ಮಾಡಲು ಸೂಚನೆ
ಶಾಲೆಗಳಲ್ಲಿ ಪ್ರತಿ ಮಗುವಿಗೆ ವಾರಕ್ಕೆ 6 ಮೊಟ್ಟೆ ವಿತರಿಸಬೇಕು. ಆದರೆ ಹರ್ಲಿಪುರ ಗ್ರಾಮದಲ್ಲಿ ವಾರಕ್ಕೆ 2 ಮೊಟ್ಟೆ ಮಾತ್ರ ವಿತರಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಸಭೆಯಲ್ಲಿ ಪ್ರಸ್ತಾಪಿಸಿದರು.
ವಾರದಲ್ಲಿ 2ದಿನ ರಾಜ್ಯ ಸರ್ಕಾರ ಹಾಗೂ 4 ದಿನ ಅಜೀಂ ಪ್ರೇಮ್ಜೀ ಫೌಂಡೇಷನ್ ವತಿಯಿಂದ ಸೇರಿ ಒಟ್ಟು 6 ಮೊಟ್ಟೆಗಳನ್ನು ವಿತರಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಪ್ರತಿ ದಿನ ಮೊಟ್ಟೆ ವಿತರಿಸುವುದನ್ನು ವೀಡಿಯೋ ಮಾಡಿ ಅಪ್ಲೋಡ್ ಮಾಡಲು ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಶೇ.80ರಷ್ಟು ಅನಧಿಕೃತ ಹೋರ್ಡಿಂಗ್ಸ್
ಜಿಲ್ಲೆಯಲ್ಲಿ ಅಳವಡಿಸಲಾಗಿರುವ ಶೇ.80ರಷ್ಟು ಹೋರ್ಡಿಂಗ್ಸ್ ಅಕ್ರಮವಾಗಿವೆ. ಈ ಕುರಿತು ಕಳೆದ ಎರಡು ತಿಂಗಳನಿಂದ ಮಾಹಿತಿ ಕೇಳಿದರೂ ನೀಡಲಿಲ್ಲ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಪಿಡಬ್ಲ್ಯೂಡಿ ಇಲಾಖೆ ಇಂಜಿನಿಯರ್ಗೆ ತರಾಟೆಗೆ ತೆಗೆದುಕೊಂಡರು.
ಹರಿಹರದಲ್ಲಿಯೇ 186 ಹೋರ್ಡಿಂಗ್ಗಳಿವೆ. ನೀವು ಜಿಲ್ಲೆಯಲ್ಲಿ 200 ಹೋರ್ಡಿಂಗ್ಸ್ ಇರುವುದಾಗಿ ಮಾಹಿತಿ ನೀಡಿದ್ದೀರಿ ಎಂದು ಕಿಡಿಕಾರಿದರು.
ಈ ವಿಷಯದಲ್ಲಿ ಹತ್ತಿಪ್ಪತ್ತು ವರ್ಷಗಳಿಂದ ದುಡಿದುಕೊಂಡಿದ್ದಾರೆ. ಆದರೆ ಕಳೆದ 6 ತಿಂಗಳಿನಿಂದ ಬಂಡವಾಳ ಹಾಕಿದ ಬಡವರಿಗೆ ಈಗ ತೊಂದರೆಯಾಗಿದೆ. ಅನಧಿಕೃತ ಹೋರ್ಡಿಂಗ್ಸ್ಗಳಿಂದ ಸ್ಥಳೀಯ ಸಂಸ್ಥೆಗಳ ಆದಾಯಕ್ಕೂ ವಂಚನೆಯಾಗುತ್ತದೆ ಎಂದರು. ಸಮರ್ಪಕ ಮಾಹಿತಿಯನ್ನು ಶಾಸಕರಿಗೆ ನೀಡುವಂತೆ ಸಚಿವ ಮಲ್ಲಿಕಾರ್ಜುನ್ ಅಧಿಕಾರಿಗೆ ಸೂಚಿಸಿದರು.
ಎಸ್ಸೆಸ್ಸೆಲ್ಸಿ: 2,000 ವಿದ್ಯಾರ್ಥಿಗಳು ಗೈರು-ಫಲಿತಾಂಶ ಹೆಚ್ಚಳದ ನಿರೀಕ್ಷೆ ಹುಸಿ ಸಾಧ್ಯತೆ
ಜಿಲ್ಲೆಯಲ್ಲಿ ಅನುದಾನಿತ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿಗೆ ನೋಂದಣಿಯಾಗಿರುವ 2 ಸಾವಿರ ಮಕ್ಕಳು ಇಲ್ಲಿಯವರೆಗೂ ಗೈರು ಹಾಜರಾಗಿದ್ದಾರೆ. ಹೀಗಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ ಏರಿಕೆ ಕಾಣುವುದು ಕಷ್ಟ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಹೇಳಿದರು.
ಕಳೆದ ಬಾರಿ ಫಲಿತಾಂಶದಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ಸಿಇಒ ಜೊತೆಗೂಡಿ ಮುಖ್ಯೋಪಾಧ್ಯಾಯರ ಸಭೆಗಳನ್ನು ನಡೆಸಿದ್ದೇವೆ. ಬೆಳಿಗ್ಗೆ 5 ಗಂಟೆಗೆ ಮಕ್ಕಳಿಗೂ ಟ್ಯೂಷನ್ ಮಾಡಲು ಹಾಗೂ ಸಂಜೆ ಪಾಠಗಳಿಗೆ ಮತ್ತು ಮಕ್ಕಳು ಹಿಂದುಳಿದ ವಿಷಯ ಗುರುತಿಸಿ ಒತ್ತು ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಈ ಬಾರಿಯ ಕನಿಷ್ಟ 15ನೇ ಸ್ಥಾನದ ಬಳಿಯಾದರೂ ಬನ್ನಿ ಎಂದು ಶಾಸಕ ಹರೀಶ್ ಹೇಳಿದರೆ, ಒಂದಂಕಿ ಸ್ಥಾನಕ್ಕೆ ಬರುವಂತೆ ಹೇಳಿ ಎಂದು ಸಚಿವ ಎಸ್ಸೆಸ್ಸೆಂ ಶಾಸಕರಿಗೆ ನಗುತ್ತಲೇ ಹೇಳಿದರು.
ಕನ್ನಡಕ್ಕೆ ಆದ್ಯತೆ ನೀಡಿ: ಎ.ಬಿ.ಆರ್.
ಅನೇಕ ಇಲಾಖೆಗಳು ಸಭೆಗೆ ಇಂಗ್ಲಿಷ್ನಲ್ಲಿ ಮಾಹಿತಿ ನೀಡಿದ್ದು, ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಬಿ. ರಾಮಚಂದ್ರಪ್ಪ ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೇ ವರದಿ ತರಿಸಲು ಕ್ರಮ ಕೈಗೊಳ್ಳುವಂತೆ ಜಿ.ಪಂ. ಸಿಸಿಒ ಭರವಸೆ ನೀಡಿದರು.
ಮರಣೋತ್ತರ ಪರೀಕ್ಷೆಯ ವರದಿಯನ್ನೂ ಕನ್ನಡದಲ್ಲಿಯೇ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರಾಮಚಂದ್ರಪ್ಪ, ವೈದ್ಯಾಧಿಕಾರಿಗಳಿಗೆ ಹೇಳಿದಾಗ, ಎರಡೂ ಭಾಷೆಯಲ್ಲಿ ನೀಡುವಂತೆ ಸಚಿವರು ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಅಳವಡಿಸಲಾದ ಶುದ್ದ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಸಕಾಲಕ್ಕೆ ರಿಪೇರಿಯಾಗು ತ್ತಿಲ್ಲ ಎಂದು ಹೊನ್ನಾಳಿ ಶಾಸಕ ಶಾಂತನಗೌಡ ಆರೋ ಪಿಸಿದಾಗ, ಸರ್ಕಾರ ಇದಕ್ಕಾಗಿ ಆಯಾ ಪಂಚಾಯಿತಿ ಗಳಿಗೆ ಆರ್.ಓ.ಗಳ ನಿರ್ವಹಣೆ ಜವಾಬ್ದಾರಿ ನೀಡಿದ್ದು ಇದಕ್ಕಾಗಿ ಪ್ರತಿ ತಿಂಗಳು ಮೂರು ಸಾವಿರ ರೂ.ಗಳ ನಿರ್ವಹಣಾ ವೆಚ್ಚ ನೀಡಲಾಗುತ್ತದೆ ಎಂದು ಸಿಇಒ ಸುರೇಶ್ ಇಟ್ನಾಳ್ ಹೇಳಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈ ಬಾರಿ ಅತಿ ಹೆಚ್ಚು ಅಂದರೆ 67,411 ರೈತರು ನೋಂದಾಯಿಸಿಕೊಂಡಿರುವುದಾಗಿ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳಿದರು. ಮುಂಗಾರು ಹಂಗಾಮಿನಲ್ಲಿ 63937 ಹಾಗೂ ಹಿಂಗಾರು ಹಂಗಾಮಿನಲ್ಲಿ 3474 ರೈತರು ನೋಂದಾಯಿಸಿಕೊಂಡಿದ್ದು, ಹಿಂದಿನ ವರ್ಷಗಳಿಗಿಂತ ಇದು ಅತಿ ಹೆಚ್ಚು ನೋಂದಣಿಯಾಗಿದೆ ಎಂದರು.
ಈ ಬಾರಿ ವಾಡಿಕೆಗಿಂತ ಶೇ.45ರಷ್ಟು ಹೆಚ್ಚು ಮಳೆಯಾಗಿದ್ದು, ಜಗಳೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ರಸಗೊಬ್ಬರಕ್ಕೆ ಕೊರತೆ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಮುಂಗಾರು ಹಾಗೂ ಹಿಂಗಾರಿನಲ್ಲಿ ಅತಿವೃಷ್ಟಿಯಿಂದ 1.92 ಕೋಟಿ ರೂ. ಬೆಳೆ ಹಾನಿಯಾಗಿದ್ದು, ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ಮೊಬೈಲ್ ನೋಡುತ್ತಿದ್ದ ಅಧಿಕಾರಿಯೊಬ್ಬರನ್ನು ಸಚಿವ ಮಲ್ಲಿಕಾರ್ಜುನ್ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಅಲ್ಲದೇ ಸಭೆಗೆ ಗೈರು ಹಾಜರಾದ ಪರಿಸರ ಇಲಾಖೆ ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳುವಂತೆಯೂ ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಬಿ.ಪಿ.ಹರೀಶ್, ಬಸವರಾಜ್ ಶಿವಗಂಗಾ, ಮೇಯರ್ ಕೆ.ಚಮನ್ ಸಾಬ್, ಎಸ್ಪಿ ಉಮಾ ಪ್ರಶಾಂತ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಮತ್ತಿತರರಿದ್ದರು.