‘ಸಿರಿಯಜ್ಜಿ ಸಂಕಥನ’ ಲೋಕಾರ್ಪಣೆ
ದಾವಣಗೆರೆ, ಜ.19- ಅನಕ್ಷರಸ್ಥರಲ್ಲೂ ಉತ್ತಮ ಕಲೆಗಳಿವೆ. ಮಾನವ ಸಂಬಂಧವನ್ನು ಎತ್ತಿ ಹಿಡಿಯುವ ಸದ್ಗುಣಗಳಿವೆ. ಇಂತಹ ಬದುಕಿನ ಜನರ ಚಿತ್ರಣದ ಬಗ್ಗೆ ಸಂಶೋಧನೆ ನಡೆಸಿ, ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಹಿರಿಯ ಸಂಶೋಧಕ ಡಾ. ಕೃಷ್ಣಮೂರ್ತಿ ಹನೂರು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಾಡೋಜ ಸಿರಿಯಜ್ಜಿ ಪ್ರತಿಷ್ಠಾನ ಬೆಂಗ ಳೂರು, ಮಾನವ ಬಂಧುತ್ವ ವೇದಿಕೆ ದಾವಣಗೆರೆ, ಚಳ್ಳಕೆರೆಯ ಅಮಿತ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಮಂಜಣ್ಣ ಮಲ್ಲಯ್ಯ ವಿರಚಿತ `ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಗುಡ್ಡಗಾಡು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಸಂಖ್ಯಾತ ಅನಕ್ಷರಸ್ಥರು ಆಧುನಿಕ ಮಾನವ ಜಗತ್ತನ್ನೇ ನಾಚಿಸುವಂತಹ ಸರಳ ಜೀವನ ಕ್ರಮ, ಆಹಾರ ಪದ್ಧತಿ, ಕಲೆ, ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದು, ಇಂತಹ ಜನರ ಬದುಕಿನ ಚಿತ್ರಣವನ್ನು ಪರಿಚಯಿಸುವ ಜವಾಬ್ದಾರಿಯನ್ನು ಪ್ರಾಧ್ಯಾಪಕರು ಹೊರಬೇಕಾಗಿದೆ ಎಂದರು.
ಡಾ.ಮಂಜಣ್ಣ ಬರೆದಿರುವ `ಸಿರಿಯಜ್ಜಿ ಸಂಕಥನ’ದಲ್ಲಿ ಬರುವ ಸಿರಿಯಜ್ಜಿಯು ಜನಪದ ಹಾಡುಗಳಿಂದಲೇ ಬುಡಕಟ್ಟು ಜನಾಂಗದಲ್ಲಿ ಗುರುತಿಸಿಕೊಂಡು ಖ್ಯಾತಿ ಹೊಂದಿದ್ದಾರೆ. ಸಿರಿಯಜ್ಜಿಯು ಇಡೀ ಗೊಲ್ಲ ಸಮುದಾಯದ ಚಿತ್ರಣವನ್ನು ತನ್ನ ಜೀವನ ಕ್ರಮ, ಜನಪದ ಕಲೆಯಿಂದಲೇ ಕಟ್ಟಿಕೊಂಡಿರುವುದನ್ನು ನೋಡಿದರೆ ಒಬ್ಬ ಅನಕ್ಷರಸ್ಥೆಯಲ್ಲಿನ ಅಪಾರ ಪಾಂಡಿತ್ಯ ನಿಬ್ಬೆರಗಾಗಿಸುವಂತೆ ಮಾಡುತ್ತದೆ. ಪಿಹೆಚ್ಡಿ ಪದವಿ ಪಡೆದವರಿಗೆ ಇರದಷ್ಟು ಜ್ಞಾನ ಸಂಪತ್ತು ಸಿರಿಯಜ್ಜಿಯಲ್ಲಿರುವುದು ತಿಳಿಯುತ್ತದೆ ಎಂದು ಹೇಳಿದರು.
ಇಂತಹ ಅಸಂಖ್ಯಾತ ಜನಪದರು ನಮ್ಮ ಮಧ್ಯೆ ಇದ್ದು, ಅವರ ಕಲೆಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಪ್ರಾಧ್ಯಾಪಕರ ಮೇಲಿದೆ ಎಂದರು.
ದೇಶದಲ್ಲಿ ಮೌಢ್ಯ, ಅಂಧಶ್ರದ್ಧೆ ಜೊತೆಗೆ ಒಳ್ಳೆಯದೂ ಇದೆ. ಜಾನಪದ ಮತ್ತು ಶಿಷ್ಟ ಪರಂಪರೆಯಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದಿದೆ. ಅದರಲ್ಲಿ ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಿದೆ. ಸಿರಿಯಜ್ಜಿ ಗೊತ್ತಿಲ್ಲ ಎನ್ನುತ್ತಲೇ ಎಲ್ಲವನ್ನು ಬಲ್ಲವಳಾಗಿದ್ದಳು. ಆದರೆ ಪ್ರಾಧ್ಯಾಪಕರು ಎಲ್ಲಾ ಗೊತ್ತು ಅಂತಾರೆ ಅವರಿಗೆ ಏನೂ ತಿಳಿದಿರುವುದಿಲ್ಲ. ಅನಕ್ಷರಸ್ಥರಲ್ಲೂ ಉತ್ತಮ ಕಲೆಗಳಿವೆ. ಮಾನವ ಸಂಬಂಧದ ಮೌಲ್ಯ ಎತ್ತಿ ಹಿಡಿಯುವ ಸದ್ಗುಣಗಳಿವೆ ಎಂದು ಹೇಳಿದರು.
ಕೆಟ್ಟದ್ದನ್ನು ಬದಿಗಿಟ್ಟು ಒಳ್ಳೆಯದರ ಬಗ್ಗೆ ದೇಶದ ಯುವ ಸಮೂಹ ಅರಿತುಕೊಳ್ಳಬೇಕಾಗಿದೆ. ಈ ವಿಚಾರವನ್ನು ಅಧ್ಯಾಪಕರಾದವರು ತಿಳಿಸದೇ ಹೋದರೆ ಅವರ ಜವಾಬ್ದಾರಿ ಅಪೂರ್ಣ ಎಂದರು.
ಪುಸ್ತಕ ಕುರಿತು ಹಂಪಿ ಕನ್ನಡ ವಿವಿ ಸಿಂಡಿಕೇಟ್ ಸದಸ್ಯ ಡಾ. ಎಸ್.ಎಂ. ಮುತ್ತಯ್ಯ ಮಾತನಾಡಿ, ಕನ್ನಡ ಸಾಹಿತ್ಯ, ಸಂಸ್ಕೃತಿಯಲ್ಲಿ ಜಾನಪದ ಸಾಹಿತ್ಯ ಕಣ್ಣಿಗೆ ಬೀಳಲಿಲ್ಲ. ನಂತರ ಹಾ.ಮ. ನಾಯಕ್ ಅಂತವರು ವಿದೇಶಕ್ಕೆ ತೆರಳಿದ ವೇಳೆ ಮಿಷನರಿಗಳು ಜನಪದ ಸಾಹಿತ್ಯವನ್ನು ದಾಖಲಿಸಿ, ಅದಕ್ಕೆ ಗೌರವ ಕೊಡುತ್ತಿರುವುದು ಕಂಡ ನಂತರದಲ್ಲಿ ರಾಜ್ಯದಲ್ಲಿ ಜನಪದ ಸಾಹಿತ್ಯಕ್ಕೆ ಸ್ಥಾನ ನೀಡಲಾಯಿತು. ವಿವಿಗಳು ಜನಪದವನ್ನು ಪಠ್ಯವಾಗಿ ಪರಿಗಣಿಸಿದಾಗ ಅನಕ್ಷರಸ್ಥರ ಸಾಹಿತ್ಯ ಎಂಬ ಕಾರಣಕ್ಕಾಗಿ ಮೊದಲಿಗೆ ಆಕ್ಷೇಪ ವ್ಯಕ್ತವಾಗಿತ್ತು. ಕಾಲಕ್ರಮೇಣ ಜನಪದ ಸಾಹಿತ್ಯ ಎಲ್ಲರಿಗೂ ಪ್ರಿಯವೆನಿಸಿತು ಎಂದು ಹೇಳಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಶೋಧಕ ಮಲ್ಲಯ್ಯ ಕಟ್ಟೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಡಾ. ಜಿ.ಕೆ.ಪ್ರೇಮ, ಲೇಖಕ ಡಾ. ಮಂಜಣ್ಣ ಮಲ್ಲಯ್ಯ, ಬಿ. ಶಾರದಮ್ಮ ಉಪಸ್ಥಿತರಿದ್ದರು.
ಚೇತನ್ ಸಂಗಡಿಗರು ಪ್ರಾರ್ಥಿಸಿದರು. ಮಲ್ಲಿಕಾರ್ಜುನ್ ತೂಲಹಳ್ಳಿ ಸ್ವಾಗತಿಸಿದರು. ಡಾ. ಪಿ.ಕೆ. ಇಂಗಳಗೊಂದಿ ವಂದಿಸಿದರು.