ಸಿರಿಧಾನ್ಯ ನಡಿಗೆ ಜಾಥಾಕ್ಕೆ ಚಾಲನೆ ನೀಡಿದ ಪಿ.ಎನ್. ಲೋಕೇಶ್
ದಾವಣಗೆರೆ, ಜ. 17- ಕಲಬೆರಕೆ ರಹಿತ ಮತ್ತು ಆರೋಗ್ಯವಂತರಾಗಿರಲು ಸಿರಿಧಾನ್ಯ ದಿಂದ ತಯಾರಿ ಸಿದ ಆಹಾರವನ್ನು ನಮ್ಮ ದೈನಂದಿನ ಉಪಹಾರ, ಊಟದ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯವಂತರಾಗಿ ಬದುಕಬಹುದೆಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ತಿಳಿಸಿದರು.
ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿಕ ಸಮಾಜ, ಕೃಷಿ ಪರಿಕರ ಮಾರಾಟಗಾರರ ಸಂಘ, ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಇತರೆ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿಲಾಗಿದ್ದ ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ನಡಿಗೆ ಆರೋಗ್ಯದ ಕಡೆಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳಾದ ನವಣೆ, ಆರಕ, ಊದಲು, ಕೊರಲೆ, ಸಾಮೆ, ಬರಗು ಬಳಕೆಯಿಂದಾಗುವ ಮಹತ್ವ ಕುರಿತು ಜಾಗೃತಿ ಹೆಚ್ಚಿದ್ದು ಸಿರಿಧಾನ್ಯ ಬಳಕೆಯೂ ಕೂಡ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮಗಳ ಮುಖಾಂತರ ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯಲು ಉತ್ತೇಜಿಸುತ್ತಿದೆ ಎಂದರು.
ಸಿರಿಧಾನ್ಯಗಳಿಂದ ವಿವಿಧ ಖಾದ್ಯಗಳನ್ನು ತಯಾರಿಸುವ ಬಗೆಯ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯ ಪಾಕಸ್ಪರ್ಧೆ, ಸಿರಿಧಾನ್ಯ ಜಾಥಾ ಹಾಗೂ ಇದೇ ಜನವರಿ 23 ರಿಂದ 25 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ವಾಣಿಜ್ಯ ಮೇಳ, ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಆಯೋಜಿಸ ಲಾಗಿದ್ದು, ನಾವೆಲ್ಲರೂ ಇದರ ಸದುಪಯೋಗ ವನ್ನು ಪಡೆದುಕೊಳ್ಳೋಣ ಎಂದರು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಮಾತನಾಡಿ, ಇತ್ತೀಚಿಗೆ ಜಂಕ್ ಫುಡ್ ಉಪಯೋಗಿಸುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಆರೋಗ್ಯ ಕೆಡುತ್ತಲಿದೆ. ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಇದರ ಬೆಳೆಯನ್ನೂ ಸಹ ಅತಿ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾಗಿದ್ದು, ಬೆಳೆದಂತಹ ರೈತರಿಗೆ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು.
ಸಿರಿಧಾನ್ಯ ನಡಿಗೆ ಜಾಥಾ ನಗರದ ಜಯದೇವ ವೃತ್ತದಿಂದ ಪ್ರಾರಂಭವಾಗಿ ಪಿ.ಬಿ. ರಸ್ತೆ ಮುಖಾಂತರ, ಎ.ವಿ.ಕೆ. ಕಾಲೇಜು ರಸ್ತೆ, ರಾಂ ಅಂಡ್ ಕೋ ವೃತ್ತ, ಚರ್ಚ್‍ರಸ್ತೆ ಮೂಲಕವಾಗಿ ಸಾಗಿ ಗುಂಡಿ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಮುಕ್ತಾಯಗೊಂಡಿತು.
ಜಾಥಾ ನಡಿಗೆ ಯುದ್ದಕ್ಕೂ ಸಿರಿಧಾನ್ಯ ಕುರಿತು ಘೋಷಣೆಗಳನ್ನು ಹಾಗೂ ಸಿರಿಧಾನ್ಯಕ್ಕೆ ಸಂಬಂಧಿಸಿದ ಹಾಡುಗಳು ಹಾಗೂ ಭಿತ್ತಿ ಚಿತ್ರಗಳು ಹಾಗೂ ಪತ್ರಗಳ ಮುಖಾಂತರ ಜಾಗೃತಿಯನ್ನು ಮೂಡಿಸಲಾಯಿತು.
ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತಹಶೀಲ್ದಾರ್ ಅಶ್ವತ್ಥ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ತೋಟಗಾರಿಕೆ ಉಪ ನಿರ್ದೇಶಕರು, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷರು ಕೃಷಿ ಅಧಿಕಾರಿಗಳು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಹಾಜರಿದ್ದರು.