ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್
ದಾವಣಗೆರೆ, ಜ. 16- ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯಲ್ಲಿನ ಬಹುತೇಕ ಕುಟುಂಬಗಳು ಆರ್ಥಿಕವಾಗಿ ಸಬಲ ರಾಗಲು ಕಾರಣವಾಗಿದ್ದು ಈ ಯೋಜನೆಗಳ ಅನುಷ್ಟಾನದಲ್ಲಿ ಶೇ 98ಕ್ಕಿಂತ ಹೆಚ್ಚು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗದ ವ್ಯಾಪ್ತಿಯಲ್ಲಿ ಡಿಸೆಂಬರ್ ಅಂತ್ಯದವರೆಗೆ 67,75,1001 ಟ್ರಿಪ್ಗಳಲ್ಲಿ ಮಹಿಳೆಯರು ಪ್ರಯಾಣಿಸಿದ್ದು ಇದರ ವೆಚ್ಚವಾಗಿ ರೂ.189,13,62,548 ರೂ.ಗಳನ್ನು ಸರ್ಕಾರದಿಂದ ಭರಿಸಲಾಗಿದೆ.
ಗೃಹಜ್ಯೋತಿ ಯೋಜನೆಯಲ್ಲಿ ದಾವಣಗೆರೆ ಮತ್ತು ಹರಿಹರ ವಿಭಾಗದಿಂದ ಒಟ್ಟು 556624 ವಿದ್ಯುತ್ ಸಂಪರ್ಕ ಪಡೆದ ಆರ್.ಆರ್.ಸಂಖ್ಯೆಗಳಿದ್ದು ಇದರಲ್ಲಿ 502344 ಆರ್.ಆರ್.ಸಂಖ್ಯೆಯ ಫಲಾನುಭವಿಗಳು ಗೃಹಜ್ಯೋತಿಯಡಿ ನೊಂದಣಿಯಾಗಿದ್ದು ಇದರ ವೆಚ್ಚವಾಗಿ ಡಿಸೆಂಬರ್ ತಿಂಗಳಲ್ಲಿ ರೂ.21 ಕೋಟಿ ವೆಚ್ಚವನ್ನು ಹೊಂದಾಣಿಕೆ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ಅಕ್ಟೋಬರ್ ಅಂತ್ಯದ ವರೆಗೆ 360849 ಮಹಿಳೆಯರಿಗೆ ಆರಂಭದಿಂದ ಇಲ್ಲಿಯ ವರೆಗೆ 501.72 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.
ಅನ್ಯಭಾಗ್ಯ ಯೋಜನೆಯಡಿ ಸೆಪ್ಟೆಂಬರ್ ಅಂತ್ಯದವರೆಗೆ 342968 ಕಾರ್ಡ್ದಾರರಲ್ಲಿನ 1229893 ಸದಸ್ಯರಿಗೆ ಯೋಜನೆ ಆರಂಭವಾದಾಗಿನಿಂದ ರೂ.286.66 ಕೋಟಿಯನ್ನು ಡಿಬಿಟಿ ಮೂಲಕ ಅವರ ಖಾತೆಗೆ ವರ್ಗಾಯಿಸಲಾಗಿದೆ.
ಯುವನಿಧಿ ಯೋಜನೆಯಡಿ 5802 ಅಭ್ಯರ್ಥಿಗಳಿಗೆ 8,46,8700 ರೂ.ಗಳನ್ನು ಶಿಷ್ಯವೇತನವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
2024 ನೇ ಸಾಲಿನಲ್ಲಿ ಉತ್ತೀರ್ಣರಾದ ಪದವೀ ಧರರಿಗೆ ಹಾಗೂ ಡಿಪ್ಲೊಮಾ ಪಾಸಾದವರು ಯುವನಿಧಿಯಡಿ ನೊಂದಣಿ ಮಾಡಲು ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ಧಿಕಾರಿ ಮಲ್ಲಾನಾಯ್ಕ್, ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯರಾದ ಅನೀಶ್ ಪಾಷ, ನಂಜಾನಾಯ್ಕ್, ಅನಿತಾ ಬಾಯಿ ಮಾಲತೇಶ, ರೇವಣಸಿದ್ದಪ್ಪ , ಮಂಜಣ್ಣ, ಡೋಲ್ ಚಂದ್ರು, ಸುಭಾನ್ ಸಾಬ್, ಎನ್ ನೀಲಗಿರಿಯಪ್ಪ, ಕೆ.ಶಿವಶಂಕರ್, ಶಶಿಕಲಾ ನಾಕುದರಿ, ನಾಗರಾಜ ಸಿ, ಎ.ಅರ್ ಚಂದ್ರಶೇಖರ್, ರಾಘವೇಂದ್ರ, ಎಸ್ ಗಿರೀಶ್ ಹಾಗೂ ಇನ್ನಿತರೆ ಸದಸ್ಯರು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.