ದಾವಣಗೆರೆ, ಜ. 15- ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಂದು ನಗರದಲ್ಲಿ ಬೈಕ್ ಜಾಥಾ ನಡೆಸಲಾಯಿತು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಜಾಥಾಕ್ಕೆ ಎಸ್ಪಿ ಉಮಾ ಪ್ರಶಾಂತ್ ಚಾಲನೆ ನೀಡಿ, ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡುವ ಮೂಲಕ ವಾಹನ ಸವಾರರು, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸುವಂತೆ ಮನವಿ ಮಾಡಿದರು.
ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸದಂತೆ ಜಾಗೃತಿ ಮೂಡಿಸಿದರು. ಜನವರಿ 11 ರಿಂದ 17 ರವರೆಗೆ ಅಪರಾಧ ತಡೆ ಮಾಸಾಚರಣೆ ಹಾಗೂ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು, ಪ್ರತಿ ದಿನ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತಿಯೊಬ್ಬ ನಾಗರಿಕರೂ ರಸ್ತೆ ಸುರಕ್ಷತಾ ಕ್ರಮ ಅನುಸರಿಸಬೇಕೆಂದು ಮನವಿ ಮಾಡಿದರು. ಕಳೆದ ವರ್ಷ ದೇಶದಲ್ಲಿ ನಡೆದಿರುವ ನಾಲ್ಕು ಲಕ್ಷ ಅಪಘಾತಗಳಲ್ಲಿ ರಸ್ತೆ ಸುರಕ್ಷತಾ ಕ್ರಮ ಪಾಲಿಸದೇ 1.70 ಲಕ್ಷ ಜನರು ಮೃತಪಟ್ಟಿದ್ದಾರೆ. ಇದರಿಂದ ವಾಹನ ಚಾಲನೆ ಮಾಡುವ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಹಾಕುವುದು ಸೇರಿದಂತೆ ಎಲ್ಲಾ ಬಗೆಯ ರಸ್ತೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಜ.1 ರಿಂದ 31 ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಾಗೂ ಜ. 11 ರಿಂದ 17 ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದ್ದು, `ಬೀ ಎ ರೋಡ್ ಸೇಫ್ಟಿ ಹೀರೋ’ ಎಂಬುದು ಈ ವರ್ಷದ ಘೋಷಣೆಯಾಗಿದೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ, ಸಾರ್ವಜನಿಕರೂ ಸಹ ಸಂಚಾರ ನಿಯಮ ಪಾಲಿಸಬೇಕೆಂದರು.
ಈ ಸಂದರ್ಭದಲ್ಲಿ ಎಎಸ್ಪಿ ವಿಜಯಕುಮಾರ್ ಸಂತೋಷ್, ಜಿ.ಮಂಜುನಾಥ್, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐಗಳಾದ ಲಕ್ಷ್ಮಣನಾಯ್ಕ, ನಲವಾಗಲು ಮಂಜುನಾಥ, ಶಿಲ್ಪಾ, ಅಶ್ವಿನ್ ಕುಮಾರ್, ಸುನೀಲ್ ಕುಮಾರ್ ಮತ್ತಿತರರರು ಭಾಗವಹಿಸಿದ್ದರು.