ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ
ದಾವಣಗೆರೆ, ಜ.13- ರೈತ ನಾಯಕ ಜಗಜಿತ್ ಸಿಂಗ್ ದಲೈವಾಲಾರ ಪ್ರಾಣ ಉಳಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ, ಸೋಮವಾರ ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ರೈತ ಮತ್ತು ಕಾರ್ಮಿಕ ಸಂಘಟನೆಗಳ ಪದಾಕಾರಿ ಗಳು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಹೋರಾಟ ವಾಪಸ್ ಪಡೆಯುವಾಗ ನೀಡಿದ್ದ ಲಿಖಿತ ಭರವಸೆ ಈಡೇರಿ ಸುವಂತೆ ಆಗ್ರಹಿಸಿ, ದಿಲ್ಲಿಯಲ್ಲಿ ಅಮರ ಣಾಂತರ ಉಪವಾಸ ಕುಳಿತಿರುವ ದಲೈವಾಲಾರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಈ ವೇಳೆ ಕಾರ್ಮಿಕ ಮುಖಂಡ ಎಚ್.ಜಿ. ಉಮೇಶ್ ಆವರಗೆರೆ ಮಾತನಾಡಿ, ಕೃಷಿ ಉತ್ಪನ್ನ ಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ, ಸಾಲ ಮನ್ನಾ ಸೇರಿ ನಾನಾ ಬೇಡಿಕೆಗಳಿಗೆ ಆಗ್ರಹಿಸಿ 48 ದಿನಗಳಿಂದ 70 ವರ್ಷದ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲಾ ಆಮರಣಾಂತ ಉಪವಾಸ ಕೈಗೊಂಡಿದ್ದಾರೆ. ಇವರ ದೇಹ ನಿತ್ರಾಣಗೊಂಡು, ಮಾಂಸಖಂಡಗಳು ತೂಕ ಕಳೆದುಕೊಂಡಿವೆ. ರಕ್ತದೊತ್ತಡ ಸಹ ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದು, ಯಾವಾಗ ಬೇಕಾದರೂ ಪ್ರಾಣ ಹೋಗಬಹುದು ಎಂದು ರೈತ ನಾಯಕ ಇಂತಹ ಪರಿಸ್ಥಿತಿಗೆ ತಲುಪಲು ಕೇಂದ್ರ ಸರ್ಕಾರವೇ ನೇರ ಕಾರಣವಾಗಿದೆ ಎಂದು ಆರೋಪಿಸಿದರು.
ಕರಾಳ ಕೃಷಿ ಕಾಯಿದೆಗಳ ರದ್ದತಿ ಹಾಗೂ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಮಾನ್ಯತೆ ನೀಡಬೇ ಕೆಂಬುದು ಸೇರಿದಂತೆ ನಾನಾ ಹಕ್ಕೊತ್ತಾಯಗಳಿಗಾಗಿ ಒತ್ತಾಯಿಸಿ 385 ದಿನಗಳ ಕಾಲ ದಿಲ್ಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದ ವೇಳೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸದೆಯೇ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ರೈತ ಸಂಘದ ಹೊನ್ನೂರು ಮುನಿಯಪ್ಪ ದೂರಿದರು.
ಎಐಯುಟಿಯುಸಿಯ ಮಂಜುನಾಥ್ ಕೈದಾಳೆ ಮಾತನಾಡಿ, ರೈತ ನಾಯಕ ಜಗಜಿತ್ ಸಿಂಗ್ ದಲೈವಾಲಾರ ಪ್ರಾಣ ಉಳಿಸಲು ಕೇಂದ್ರ ಸರ್ಕಾರ ಹೋರಾಟನಿರತರ ಜತೆ ಮಾತುಕತೆ ಆರಂಭಿಸಬೇಕು, ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಖಾತರಿ ನೀಡುವ ಕಾನೂನು ಜಾರಿ ಮಾಡಬೇಕು, ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ವಿದ್ಯುತ್ ಖಾಸಗೀಕರಣ ಕೈ ಬಿಡುವುದರ ಜತೆಗೆ ಪಂಪ್‌ಸೆಟ್ ಮೀಟರೀಕರಣದ ಪ್ರಯತ್ನವನ್ನು ಕೂಡಲೇ ನಿಲ್ಲಿಸಬೇಕು, 60 ವರ್ಷ ದಾಟಿರುವ ಕೃಷಿಕರಿಗೆ ಮಾಸಿಕ 5 ಸಾವಿರ ರೂ. ಪಿಂಚಣಿ ನೀಡಬೇಕು, ಕರಾಳ ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಾನಾ ಸಂಘಟನೆಗಳ ಮುಖಂಡರಾದ ಕೆ.ಎಚ್. ಆನಂದರಾಜು, ಬಾಡಾ ಕ್ರಾಸ್ ಶ್ರೀನಿವಾಸ್, ಐರಣಿ ಚಂದ್ರು, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಡಾ.ಸುನೀತ್‌ಕುಮಾರ್, ಮಧು ತೊಗಲೇರಿ, ಸತೀಶ್ ಅರವಿಂದ್, ಪವಿತ್ರ, ಪರಶುರಾಮ, ಭರಮಪ್ಪ, ಗುಮ್ಮನೂರು ಬಸವರಾಜ, ಏಳುಕೋಟಿ ಮತ್ತಿತರರಿದ್ದರು.