`ಹೆಲ್ಮೆಟ್ ಧರಿಸಿ ಜೀವ ಉಳಿಸಿ’ ಅಭಿಯಾನದಲ್ಲಿ ಹೆಚ್ಚುವರಿ ಎಸ್ಪಿ ವಿಜಯ ಸಂತೋಷ್
ದಾವಣಗೆರೆ, ಜ.13- ಜೀವ ಅತ್ಯಂತ ಅಮೂಲ್ಯವಾಗಿದೆ. ಅಸಡ್ಡೆ ಮತ್ತು ನಿರ್ಲಕ್ಷ್ಯ ಮನೋಭಾವದಿಂದ ಯಾರೂ ವಿನಾಕಾರಣದಿಂದ ಜೀವ ಕಳೆದುಕೊಳ್ಳಬಾರದು ಎಂದು ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ. ಸಂತೋಷ್ ಸಲಹೆ ನೀಡಿದರು.
ಇಲ್ಲಿನ ಅಖ್ತರ್ ರಜ್ಹಾ ವೃತ್ತದಲ್ಲಿ ಸೋಮವಾರ ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ `ಹೆಲ್ಮೆಟ್ ಧರಿಸಿ ಜೀವ ಉಳಿಸಿ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನವರಿ 1ರಿಂದ 13ರ ವರೆಗೆ ಜಿಲ್ಲೆಯೊಂದರಲ್ಲಿಯೇ 12 ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೈಕ್ ಸ್ಕಿಡ್ ಆಗಿ, ಯಾವುದೋ ವಾಹನ ಡಿಕ್ಕಿ ಹೊಡೆದು ಸಂಭವಿಸಬಹುದಾದ ದುರಂತ ಸಾವು-ನೋವುಗಳನ್ನು ತಡೆಯಬೇಕಾದರೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಈ ಭಾಗರದಲ್ಲಿ ಬೈಕ್‌ನಲ್ಲಿ 3-4 ಜನ ಓಡಾಡುವುದು, ನಂಬರ್ ಪ್ಲೇಟ್, ಡಿಎಲ್, ಆರ್‌ಸಿ, ಲೈಸನ್ಸ್ ಇಲ್ಲದೇ ವಾಹನ ಓಡಿಸುವುದು, ವ್ಹೀಲಿಂಗ್ ಮಾಡುವುದು ಹೆಚ್ಚಾಗಿದೆ. ಸಾರ್ವಜನಿ ಕರಿಗೆ ಯಾರೂ ತೊಂದರೆ ಕೊಡಬಾರದು.
ದಾಖಲೇ ಇಲ್ಲದೇ ವಾಹನ ಚಲಾಯಿಸಿದರೆ ಕನಿಷ್ಠ 1ಸಾವಿರ ರೂ., ಅಪ್ರಾಪ್ತರು ಚಲಾಯಿಸಲು ವಾಹನ ನೀಡಿದರೆ 25 ಸಾವಿರ ರೂ. ದಂಡ ವಿಧಿಸಲಾಗುವುದು. ಆದ್ದರಿಂದ 18 ವರ್ಷದೊಳ ಗಿನ ಬಾಲಕರಿಗೆ ಯಾರೂ ವಾಹನ ಕೊಡಬಾರದು ಎಂದು ಎಚ್ಚರಿಸಿದರು. ಪೊಲೀಸ್ ಇಲಾಖೆಯಿಂದ ಮಾತ್ರ ಅಪರಾದ, ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ. ಅದಕ್ಕೆ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಸಂಚಾರ ವೃತ್ತ ನಿರೀಕ್ಷಕ ಮಂಜುನಾಥ್ ಹೇಳಿದರು.
ಯುವ ಜನತೆಯ ಹುಂಬತನದಿಂದ ಪ್ರತಿ ವರ್ಷ ದೇಶದಲ್ಲಿ 1.75 ಲಕ್ಷ ಮಂದಿ ಮೃತಪಡುತ್ತಿದ್ದು, ದಿನಕ್ಕೆ 450 ರಿಂದ 500 ಜನರು ಸಾವನಪ್ಪುತ್ತಿದ್ದಾರೆ. ಜನರಲ್ಲಿರುವ ಇಂತಹ ನಿರ್ಲಕ್ಷ್ಯ ಮನೋಭಾವ ಹೋಗಬೇಕಾದರೆ ಅರಿವುದು ಮೂಡಿಸುವುದು ಅತ್ಯವಶ್ಯ ಎಂದು ಹೇಳಿದರು.
ಆಜಾದ್ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಅಶ್ವಿನ್‌ಕುಮಾರ್ ಮಾತನಾಡಿ, ವಾಹನ ಸವಾರರಿಗೆ ಒಳ್ಳೆಯದಾಗಲೆಂಬ ಸದುದ್ದೇಶದಿಂದಲೇ ವಾಹನ, ದಾಖಲೆ ತಪಾಸಣೆ ನಡೆಸಲಾಗುತ್ತದೆ. ಸಂಚಾರ ನಿಯಮ ಪಾಲನೆಯು ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್. ಶಿವಕುಮಾರಪ್ಪ, ಪದಾಧಿಕಾರಿಗಳಾದ ಗಣೇಶ ದುರ್ಗದ, ಪ್ರೊ. ಧರ್ಮ ನಾಯ್ಕ, ಆದಿಲ್ ಖಾನ್, ಸುರೇಶ್ ಶಿಡ್ಲಪ್ಪ, ರವೀಂದ್ರ, ಶಬ್ಬೀರ್ ಅಹ್ಮದ್, ಬಸವರಾಜ್, ಹನುಮಂತ ನಾಯ್ಕ, ಅಜಿತ್ ಕುಮಾರ್, ಮೊಹಮ್ಮದ್ ಗೌಸ್, ವಿಕಾಸ್ ಮತ್ತಿತರರಿದ್ದರು.