ದಾವಣಗೆರೆ, ಜ. 13- ಶಾಲೆಯ ಅಂಗಳ ಪ್ರವೇಶಿಸುತ್ತಿದ್ದಂತೆ ಎದುರಾದ ಚಪ್ಪರದ ಸ್ವಾಗತ. ಮುಂದೆ ಸಾಗಿದರೆ ಪೂಜೆಗೆ ಸಿದ್ಧಪಡಿಸಿದ ವಿವಿಧ ಧಾನ್ಯಗಳ ರಂಗೋಲಿ, ಪಕ್ಕದಲ್ಲೇ ಕುಂಭ ಸಹಿತ ಧಾನ್ಯಗಳ ರಾಶಿ. ರಾಶಿಯ ಮೇಲೆ ಹೂ, ಬಾಳೆ, ಕಬ್ಬು, ಹೊಂಬಾಳೆ, ಎಲೆ ಅಡಿಕೆ, ಬೆಲ್ಲದ ಸಿಂಗಾರ.
ಅಂಗಳದ ತುಂಬಾ ಸೀರೆ, ರವಿಕೆ, ಪಂಚೆ, ಜುಬ್ಬಾ, ಟವೆಲ್ ಹಾಕಿಕೊಂಡು ಸಂಭ್ರಮದಿಂದ ಓಡಾಡುತ್ತಿದ್ದ ಚಿಣ್ಣರು…
ಇಲ್ಲಿನ ತರಳಬಾಳು ಬಡಾವಣೆಯಲ್ಲಿನ ಮಾಗನೂರು ಬಸಪ್ಪ ಶಾಲೆಯ ಅಂಗಳದಲ್ಲಿ ಸೋಮವಾರ ಕಂಡುಬಂದ ದೃಶ್ಯವಿದು.
ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ, ಆಚರಣೆಗಳ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು. ಸುಗ್ಗಿಯ ಹಬ್ಬವಾಗಿರುವುದರಿಂದ ವಿಶೇಷವಾಗಿ ಬೆಳೆಯ ರಾಶಿಯ ಪೂಜೆ ಮಾಡಲಾಯಿತು.
ಆವರಣದಲ್ಲಿ ಪೋಷಕರು, ಶಿಕ್ಷಕರ ನೆರವಿನಿಂದ ಮಕ್ಕಳೇ ತಯಾರಿಸಿದ ಬಾವಿ, ಚಕ್ಕಡಿ ಬಂಡಿ ಚಂದ ಕಂಡವು. ಚಿಕ್ಕ ಗುಡಿಸಲಿನ ಮಾದರಿಯಲ್ಲಿ ಕಟ್ಟಿಗೆಯ ಒಲೆ, ಶಾವಿಗೆ ಮಣೆ, ಮಜ್ಜಿಗೆಯ ಕಡಗೋಲು, ಹಳೆಯ ಪಿಟಾರಿ ಸೇರಿದಂತೆ ಹಳ್ಳಿ ಮನೆಯಲ್ಲಿರುತ್ತಿದ್ದ ಗೃಹ ಬಳಕೆ ವಸ್ತುಗಳು ಗಮನ ಸೆಳೆದವು.
ಶಾಲೆಯ ಅಂಗಳದಲ್ಲಿ ಬಣ್ಣದ ರಂಗೋಲಿ ಬಿಡಿಸಿ ಅಲಂಕರಿಸಲಾಗಿತ್ತು. ಶಾಲೆಯ ಮಕ್ಕಳು ತಾವೇ ತಯಾರಿಸಿದ ಗಾಳಿಪಟ ಹಾರಿಸಿ ಸಂಭ್ರ ಮಿಸಿದರು. ಪೂಜೆಯ ನಂತರ ಎಳ್ಳು, ಬೆಲ್ಲ, ಕಬ್ಬು ವಿತರಿಸಿ ಶುಭಾಶಯ ಹಂಚಿಕೊಂಡರು. ಶಿಕ್ಷಕರು, ಸಿಬ್ಬಂದಿಗಳು, ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಅತಿಥಿಗಳಿಗೆ ಖಡಕ್ ರೊಟ್ಟಿ, ಚಟ್ನಿಪುಡಿ, ಪಲ್ಯೆ, ಗೋದಿ ಪಾಯಸ, ಬುತ್ತಿ ಉಂಡೆ, ಮಿರ್ಚಿ, ಮಜ್ಜಿಗೆ ಸೇರಿದಂತೆ ಸವಿ ಯಾದ ಊಟವಿತ್ತು. ಆಧುನಿಕತೆಯ ಭರಾಟೆ ಯಲ್ಲಿ ಗ್ರಾಮೀಣ ಭಾಗದಲ್ಲೂ ಸಂಸ್ಕೃತಿ, ಆಚರಣೆಗಳು ಕಣ್ಮರೆಯಾಗುತ್ತಿವೆ. ನಮ್ಮ ಹಬ್ಬದ ಆಚರಣೆಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಅಗತ್ಯವಿದೆ. ಮಕ್ಕಳು ವರ್ಷದ ಮೊದಲ ಹಬ್ಬ ಹಾಗೂ ಸುಗ್ಗಿಯ ಹಬ್ಬವಾಗಿರುವ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ್ರು ಮಾತನಾಡಿ, ಸಂಕ್ರಾಂತಿ ಎಲ್ಲರಲ್ಲಿಯೂ ಒಳ್ಳೆಯ ನುಡಿಗಳನ್ನಾಡುವ ವಾತಾವರಣ ಕಲ್ಪಿಸುತ್ತದೆ ಎಂದರು.
ಆಡಳಿತಾಧಿಕಾರಿ ಎಸ್.ಆರ್. ಶಿರಗುಂಬಿ, ಮುಖ್ಯೋಪಾಧ್ಯಾಯಿನಿ ಕುಸುಮ, ಪಿಯು ಕಾಲೇಜು ಪ್ರಾಚಾರ್ಯ ಡಾ.ಪ್ರಸಾದ್ ಬಂಗೇರ, ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ಟಿ. ನಾಗರಾಜನಾಯ್ಕ ಸೇರಿದಂತೆ ಇತರರು ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ವಿದ್ಯಾರ್ಥಿಗಳಿಗೆ ವ್ಯಾವಹಾರಿಕ ಜ್ಞಾನ ನೀಡುವುದಕ್ಕಾಗಿ ಸಂತೆ ಏರ್ಪಡಿಸಲಾಗಿತ್ತು. ಸಾಂಪ್ರದಾಯಿಕ ಗ್ರಾಮೀಣ ಖಾದ್ಯಗಳನ್ನು ಪ್ರದರ್ಶಿಸಲಾಯಿತು. ಮಕ್ಕಳಿಗೆ ಸಾಂಪ್ರದಾಯಿಕ ಆಟಗಳಾದ ಕಣ್ಣಾಮುಚ್ಚಾಲೆ, ಲಗೋರಿ, ರತ್ತೋ ರತ್ತೋ ಮುಂತ್ತಾದ ಆಟಗಳನ್ನು ಆಡಿಸಲಾಯಿತು.