ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದ ಕಾರ್ಯಕ್ರಮ
ದಾವಣಗೆರೆ, ಜ. 13- ಇಂದಿನ ಮಕ್ಕಳಿಗೆ ಮನೆಯಲ್ಲಿ ಪೋಷಕರು ಕಲಿಸುವ ಸಂಸ್ಕೃತಿಯನ್ನು ಮಕ್ಕಳು ಮುಂದುವರೆಸಿಕೊಂಡು ಹೋದರೆ ಮಾತ್ರ ತಿಳಿದುಕೊಳ್ಳಲು ಸಾಧ್ಯ ಎಂದು ಹಿರಿಯ ದಂತ ವೈದ್ಯರೂ, ಸಾಹಿತಿಗಳೂ ಆದ ಡಾ. ರೂಪಶ್ರೀ ಶಶಿಕಾಂತ್ ಸಮಾಜಕ್ಕೆ ಸಲಹೆ ನೀಡಿದರು.
ನಗರದ ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದ 12ನೇ ವರ್ಷದ ವಾರ್ಷಿಕೋತ್ಸವ `ಚೈತನ್ಯ ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಒಳ್ಳೆಯ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ನುಡಿದರು.
ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಪಿ.ಎಸ್. ಸುರೇಶ್ ಬಾಬು ಮಾತನಾಡಿ, ಸಂಸ್ಥೆ ನಡೆದು ಬಂದ ದಾರಿ, ಸಂಸ್ಥೆಯಿಂದ ನಡೆಯುವ ಕಾರ್ಯ ಚಟುವಟಿಕೆಗಳು ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಸಂಸ್ಥೆಯಿಂದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಶಿಕ್ಷಕರಿಗೆ ಗುರುವಂದನೆ, ಸಮಾಜದ ಏಳಿಗೆಗಾಗಿ ಆರೋಗ್ಯ ನಿಧಿಯನ್ನು ಸ್ಥಾಪಿಸಿದ್ದು, ವೈದ್ಯಕೀಯ ಸೌಲಭ್ಯವನ್ನು ಪಡೆಯಲು ಈ ನಿಧಿ ಉಪಯೋಗವಾಗಲಿದೆ ಎಂದು ತಿಳಿಸಿದರು.
ಬೆಳಗಾವಿಯ ಪ್ರಸಿದ್ಧ ಹಿಂದೂಸ್ಥಾನಿ ಗಾಯಕಿ, ಸಪ್ತಸ್ವರ ಸಂಗೀತ ಶಾಲೆಯ ಶಿಕ್ಷಕರಾದ ಶ್ರೀಮತಿ ನಿರ್ಮಲ
ಪ್ರಕಾಶ್ ಮಾತನಾಡಿ, ಸಂಗೀತ ಕಲಿಯಲು ವಯಸ್ಸಿನ ಇತಿ ಮಿತಿ ಇರುವುದಿಲ್ಲ, ಆದರೆ ಕಲಿಯಲು ಆಸಕ್ತಿಯನ್ನು ಬೆಳೆಸಿಕೊಳ್ಳ ಬೇಕು ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.
ಸಮಾರಂಭದ ವೇದಿಕೆ ಮೇಲೆ ಸಂಸ್ಥೆ ಕಾರ್ಯದರ್ಶಿ ಎಲ್. ವಿ. ಸುಬ್ರಮಣ್ಯ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥ ಬಿ.ಟಿ ಚಂದ್ರಶೇಖರ್, ಉಪಾಧ್ಯಕ್ಷ ಪಿ.ಎಲ್.ಶಂಕರ್‌ರಾವ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಮಹಿಳಾ ಮಂಡಳಿಯವರು ಪ್ರಾರ್ಥಿಸಿದರು. ಪ್ರಸನ್ನ ಸೀಮೆಕಳ ಸ್ವಾಗತಿಸಿದರು, ವಿಜಯಕುಮಾರ್ ಕುಂಚಿಬೆಟ್ಟು ವಂದಿಸಿದರು. ಸಹ ಕಾರ್ಯದರ್ಶಿಯೂ ಆದ ರಕ್ತದಾನಿ ಅನಿಲ್ ಬಾರೆಂಗಳ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಹಿರಿಯ ದಂತ ವೈದ್ಯರೂ ಆದ ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಸಿ. ಶಶಿಕಾಂತ್, ಮಾಜಿ ಕಾರ್ಯದರ್ಶಿ ಸತ್ಯನಾರಾಯಣ ಎಸ್.ಪಿ. ಮತ್ತು ಇತರರು ಉಪಸ್ಥಿತರಿದ್ದರು.