ಭಾರತೀಯ ಗ್ರಾಮೀಣ ಮಹಿಳಾ ಸಂಘದ ಕಾರ್ಯಕ್ರಮದಲ್ಲಿ ಎಸ್ಪಿ ಉಮಾ ಪ್ರಶಾಂತ್
ದಾವಣಗೆರೆ, ಜ. 13 – ಮದ್ಯಪಾನದಿಂದ ಅಹಿತಕರ ಘಟನೆ ಹೆಚ್ಚಾಗುತ್ತಿದ್ದು, ಹಳ್ಳಿಗಳನ್ನು ಪಾನಮುಕ್ತಗೊಳಿಸಲು, ಜನರ ಮನಪರಿವರ್ತನೆ ಮಾಡುವಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ತಿಳಿಸಿದರು.
ನಗರದ ವನಿತಾ ಸಮಾಜದ ವತಿಯಿಂದ ವನಿತಾ ಸಮಾಜದ ಅಂಗ ಸಂಸ್ಥೆಯಾದ ಭಾರತೀಯ ಗ್ರಾಮೀಣ ಮಹಿಳಾ ಸಂಘದಿಂದ ಸತ್ಯ ಸಾಯಿ ರಂಗಮಂದಿರದಲ್ಲಿ ನೂತನ ವರ್ಷಕ್ಕೆ ಸಂಗೀತ ಸಂಜೆ ಮಧುರ ಗೀತೆಗಳ ಸಂಗಮ ಮತ್ತು ಕ್ಯಾಂಪ್ ಫೈಯರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ಮದ್ಯಪಾನದಿಂದಾಗುವ ದುಷ್ಪರಿಣಾಮ ಕುರಿತು ಜನಜಾಗೃತಿ ಅಗತ್ಯವಾಗಿದ್ದು, ಇಡೀ ರಾಜ್ಯವನ್ನೇ ಪಾನಮುಕ್ತಗೊಳಿಸುವ ಮೊದಲು ಅದನ್ನು ಒಂದು ಸಣ್ಣ ಗ್ರಾಮದಿಂದ ಪ್ರಾರಂಭ ಮಾಡುವುದು ಉತ್ತಮ. ಜನರ ಮನ ಪರಿವರ್ತನೆಯಾಗದ ಹೊರತು ದುಶ್ಚಟ ದೂರವಾಗುವುದು ಕಷ್ಟಸಾಧ್ಯ. ಮಹಿಳೆ ಮನಸ್ಸು ಮಾಡಿದಲ್ಲಿ, ತನ್ನ ಇಡೀ ಸಂಸಾರ ತಪ್ಪು ದಾರಿಗೆ ಹೋಗುವುದನ್ನು ತಡೆಗಟ್ಟಲು ಸಾಧ್ಯವಿದೆ. ಹೀಗಾಗಿ ಮಹಿಳೆಯರು ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಬಹಳ ಹಿಂದೆಯೇ ಕೇಂದ್ರ ಸರ್ಕಾರದ ಸಂಸದೀಯ ಸದಸ್ಯರಾದ ಶ್ರೀಮತಿ ಯಶೋಧ ದಾಸಪ್ಪ ಹುಟ್ಟಿ ಹಾಕಿದ ಸಂಸ್ಥೆಯನ್ನು ದಾವಣಗೆರೆ 1987-88ರಲ್ಲಿ ವನಿತಾ ಸಮಾಜದದ ಅಂಗ ಸಂಸ್ಥೆಯಾಗಿ ಹುಟ್ಟಿಕೊಂಡ ಭಾರತೀಯ ಗ್ರಾಮೀಣ ಮಹಿಳಾ ಸಂಘ ಇದರಲ್ಲಿ ಭಾರತವನ್ನು ಪಾನಮುಕ್ತವನ್ನಾಗಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು.
ಪಾಶ್ಚಿಮಾತ್ಯರ ಅನುಕರಣೆಯಂತೆ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಿದ್ದ ಆ ದಿನಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಹೊಸ ವರ್ಷ ಆಚರಿಸಲು ಆರಂಭಿಸಿದರು. ಅಂತೆಯೇ ಹೊಸ ವರ್ಷವನ್ನು ಈ ರೀತಿಯಾಗಿ ಬರಮಾಡಿಕೊಳ್ಳುವುದನ್ನು ರೂಡಿಸಿಕೊಂಡು ಬರುತ್ತಾ ಪಾನಯುಕ್ತ ಹಳ್ಳಿಗಳನ್ನು ಪಾನಮುಕ್ತ ಹಳ್ಳಿಗಳನ್ನಾಗಿಸಲು ಪಣ ತೊಡೋಣ ಎಂದು ಉಮಾ ಪ್ರಶಾಂತ್ ಭಾರತೀಯ ಗ್ರಾಮೀಣ ಮಹಿಳಾ ಸಂಘವು ನಡೆದು ಬಂದ ದಾರಿಯನ್ನು ವಿವರಿಸಿ ಹೇಳಿದರು.
ಇದೇ ರೀತಿ ಪಾನಮುಕ್ತ ಹಳ್ಳಿ ನಿರ್ಮಿಸಲು ಇಲಾಖೆ ಕಡೆಯಿಂದ ಸ್ವ ಸಹಾಯ ಸಂಘಗಳಿಗೆ ಬೇಕಾದ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ ಎಸ್ಪಿ ಉಮಾ, ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಮದ್ಯವರ್ಜನೆ ಶಿಬಿರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ವಿವರಿಸಿದರು.
ಭಾರತೀಯ ಗ್ರಾಮೀಣ ಮಹಿಳಾ ಸಂಘದ ಶ್ರೀಮತಿ ಗುಂಡಿ ಪುಷ್ಪ ಸಿದ್ದೇಶ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಪ್ರತಿ ವರ್ಷ ಹೊಸ ವರ್ಷಾಚರಣೆಯನ್ನು ಭಾರತೀಯ ಸಂಸ್ಕೃತಿಯಲ್ಲಿ ಆಚರಿಸುತ್ತಾ ಬಂದಿದ್ದು, ಪಾನಯುಕ್ತ ಹಳ್ಳಿಗಳನ್ನು ಪಾನಮುಕ್ತ ಹಳ್ಳಿಗಳನ್ನಾಗಿಸುವಲ್ಲಿ ಪಣ ತೊಟ್ಟು ವರ್ಷಕ್ಕೆ ಒಂದು ಬಾರಿ ನಡೆಸುತ್ತಿದ್ದ ಇಂತಹ ಶಿಬಿರವನ್ನು ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ನಡೆಸಲು ಶ್ರಮಿಸುವುದಾಗಿ ತಿಳಿಸಿದರು.
ಹೊಸ ವರ್ಷಾಚರಣೆಯಯಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಮಂಜುಳಾ ಬಸವಲಿಂಗಪ್ಪ ಮಾತನಾಡಿದರು. ವನಿತಾ ಸಮಾಜದ ಅಧ್ಯಕ್ಷರಾದ ಪಿ.ಟಿ. ಪದ್ಮಾ ಪ್ರಕಾಶ್ ಉಪಸ್ಥಿತರಿದ್ದರು. ಶ್ರೀಮತಿ ಗೀತಾ ಬದ್ರಿನಾಥ್ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಪೂರ್ಣಿಮಾ ವಂದಿಸಿದರು.