ಗಿಡ ಮೂಲಿಕೆಗಳ ಉಚಿತ ಕಷಾಯ ವಿತರಣೆ ಕಾರ್ಯಕ್ರಮದಲ್ಲಿ ವರ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ
ಸಾವಯವ ಕೃಷಿಯಿಂದ ಆರೋಗ್ಯ ಉತ್ತಮ ವಾಗಲಿದೆ. ಹಾಗಾಗಿ ಎಲ್ಲರೂ ಸಾವಯವ ಕೃಷಿ ಪದ್ದತಿ ಮುಂದುವರೆಸಬೇಕು.
– ನಾಗನಗೌಡ ಪಾಟೀಲ್., ಸೊರಬ ತಾಲ್ಲೂಕಿನ ನಾಟಿ ವೈದ್ಯ
ಹರಪನಹಳ್ಳಿ, ಜ.12- ಮನುಷ್ಯನ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಲು ಪಾರಂಪರಿಕ ನಾಟಿ ಔಷಧಿ ಉಪಯುಕ್ತವಾಗಲಿದೆ ಎಂದು ಸ್ಥಳೀಯ ತೆಗ್ಗಿನ ಮಠದ ಪೀಠಾಧಿಪತಿ ಶ್ರೀ ವರ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕರ್ನಾಟಕ ಪಾರಂಪರಿಕ ನಾಟಿ ವೈದ್ಯರ ಸಂಘದಿಂದ ಪಟ್ಟಣದ ತೆಗ್ಗಿನಮಠದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 108 ಗಿಡ ಮೂಲಿಕೆಗಳಿಂದ ತಯಾರಿಸಿದ ಉಚಿತ ಕಷಾಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಪಾರಂಪರಿಕ ನಾಟಿ ಔಷಧಿ ಪದ್ಧತಿ ಶತ-ಶತಮಾನಗಳಿಂದ ತಲೆಮಾರುಗಳ ಮೂಲಕ ಭೌಗೋಳಿಕ ಮತ್ತು ನೈಸರ್ಗಿಕವಾಗಿ ಬೆಳೆದು ಬಂದಿದೆ. ಪ್ರಸಕ್ತ ದಿನಗಳಲ್ಲಿ ಗಿಡಮೂಲಿಕೆಗಳ ಪ್ರಚಾರದ ಕೊರತೆಯಿಂದ ಇಂದು ಹೆಚ್ಚಿನ ಜನರಿಗೆ ಇದು ತಲುಪಿಲ್ಲ ಎಂದು ಹೇಳಿದರು.
ದೇಹದ ಸಮತೋಲನ ಕಾಪಾಡಿಕೊಳ್ಳಬೇಕಾದರೆ ಗಿಡಮೂಲಿಕೆಗಳಿಂದ ತಯಾರಿಸಿದ ನಾಟಿ ಔಷಧಿ ಪಡೆಯಬೇಕು ಇದರಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದ ಅವರು, ಈ ಕಲೆಯನ್ನು ಹೆಚ್ಚು ಪ್ರಚಾರ ಮಾಡುವ ಮೂಲಕ ಸದೃಢ ಸಮಾಜ ನಿರ್ಮಿಸಬೇಕಿದೆ ಎಂದರು.
ತೆಗ್ಗಿನ ಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ಭಾರತೀಯ ವೈದ್ಯಕೀಯ ಪದ್ಧತಿಯನ್ನು ಪಾರಂಪರಿಕವಾಗಿ ಆಚರಣೆ ಮಾಡುತ್ತಾ ಬಂದಿದ್ದು, ಸರ್ಕಾರ ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಹೇಳಿದರು.
ಕಪತಾಗುಡ್ಡ, ಸಂಡೂರು ಕುಮಾರಸ್ವಾಮಿ ಗುಡ್ಡ, ಬಾಬಾಬುಡನ್ ಗಿರಿ ಬೆಟ್ಟಗಳಲ್ಲಿ ಗಣಿಗಾರಿಕೆಯಿಂದಾಗಿ ಔಷಧಿವುಳ್ಳ ಗಿಡ ಮರಗಳು ನಶಿಸಿ ಹೋಗುತ್ತಿವೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ, ಔಷಧಿ ಗಿಡಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕಿದೆ ಎಂದರು.
ಭಾರತದ ಮಣ್ಣಿನಲ್ಲಿ ಔಷಧಿ ಗುಣವಿದೆ. ಹಾಗಾಗಿ ಈ ನೆಲದಲ್ಲಿ ಔಷಧಿ ಗಿಡಗಳಿವೆ. ಅಂದಿನ ನಾಟಿ ವೈದ್ಯರು, ರೋಗಕ್ಕೆ ತಕ್ಕಂತೆ ನಾಟಿ ಔಷಧಿ ಹೇಗೆ ನೀಡಬೇಕು ಎಂಬುದನ್ನು ಬರೆದಿಟ್ಟಿದ್ದಾರೆ ತಿಳಿಸಿದರು. ನಾಟಿ ವೈದ್ಯೆ ಶಿವಲೀಲಾ ಮಾತನಾಡಿ, ನಾಟಿ ಔಷಧಿಗಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕಿದೆ, ನಾಟಿ ಔಷಧಿ ಮನುಷ್ಯ ಆರೋಗ್ಯಕ್ಕೆ ಉತ್ತಮ ಎಂದರು.
ಈ ವೇಳೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ಮಹಮದ್ ಇಬ್ರಾಹಿಂ, ಕಲ್ಲಹಳ್ಳಿ ಗೋಣಿಬಸಪ್ಪ, ಸಣ್ಣಜ್ಜಯ್ಯ, ಚಿರಬಿ ವೀರಣ್ಣ, ಕಿತ್ತೂರು ಕೊಟ್ರಪ್ಪ, ಧರ್ಮಪ್ಪ, ರಿಯಾಜ್, ಕೂಡ್ಲಿಗಿಯ ಮುನಿಯಪ್ಪ, ನಾಗರಾಜ, ಹರಿಹರದ ಗಿಡ್ಡಪ್ಪ, ರಾಜಣ್ಣ, ದಾವಣಗೆರೆ ರಿಯಾಜ್, ಕೆ.ಕಲ್ಲಹಳ್ಳಿಯ ಕೆ.ಎಂ.ಗುರುಸಿದ್ದಯ್ಯ, ನಾಗನಗೌಡ, ನಿವೃತ್ತ ಶಿಕ್ಷಕ ಬಿ. ಪ್ರಕಾಶ, ನಾಗರಾಜ, ಕಾನಹಳ್ಳಿ ಈರಮ್ಮ, ಶಾಂತಮ್ಮ, ಹುಲಿಕಟ್ಟಿ ಸಿದ್ದಪ್ಪ, ಬಿ.ಆರ್.ಪಿ ಅಣ್ಣಪ್ಪ ಇದ್ದರು.