ಮಹಿಳಾ ಸಬಲೀಕರಣಕ್ಕೆ ಸ್ವ-ಉದ್ಯೋಗ ತರಬೇತಿ ಅವಶ್ಯ

ಮಹಿಳಾ ಸಬಲೀಕರಣಕ್ಕೆ ಸ್ವ-ಉದ್ಯೋಗ ತರಬೇತಿ ಅವಶ್ಯ

ಮಹಿಳಾ ಸ್ವ-ಉದ್ಯೋಗ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಜವಳಿ ಉದ್ಯಮಿ ಬಿ.ಸಿ.ಉಮಾಪತಿ

ದಾವಣಗೆರೆ, ಜ.9- ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಮಹಿಳಾ ಸ್ವ ಉದ್ಯೋಗ ತರಬೇತಿ ಕೇಂದ್ರಗಳ ಅವಶ್ಯವಿದೆ ಎಂದು ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಹೇಳಿದರು.

ಸ್ಥಳೀಯ ವಿದ್ಯಾನಗರ 2 ನೇ ಬಸ್ ನಿಲ್ದಾಣದ ಬಳಿ ಭಾರತ ವಿಕಾಸ ಪರಿಷದ್ ಗೌತಮ ಶಾಖೆ ದಾವಣಗೆರೆ ವತಿಯಿಂದ ಇಂದು ಹಮ್ಮಿಕೊಂಡಿದ್ದ ಮಹಿಳಾ ಸ್ವ-ಉದ್ಯೋಗ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದೆ ಮಹಿಳೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಜೀವನ ಸಾಗಿಸುತ್ತಿದ್ದಳು. ದುಡಿಯುವ ಸಮಾನತೆ ಇರಲಿಲ್ಲ. ಅಡುಗೆ ಮನೆಗೆ ಸೀಮಿತಳಾಗಿದ್ದಳು. ಆದರೆ ಕಾಲ ಬದಲಾದಂತೆ ಮಹಿಳೆ ಪುರುಷನಷ್ಟೇ ಸರಿ ಸಮನಾಗಿ ದುಡಿಯುವ ಮೂಲಕ ಸ್ವಾವಲಂಬಿ ಬದುಕಿನತ್ತ ಮುಖ ಮಾಡಿರುವುದು ಸಂತಸದ ವಿಚಾರ. ಸರ್ಕಾರಗಳು ಮತ್ತು ಖಾಸಗಿ ಸಂಘ-ಸಂಸ್ಥೆಗಳು ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡುತ್ತಿರುವುದು ಶ್ಲ್ಯಾಘನೀಯ ಎಂದರು.

ಶ್ರದ್ಧೆ, ಸತತ ಪರಿಶ್ರಮದ ಮೂಲಕ ಕೌಶಲ್ಯ ಹೊಂದಿದ ಮಹಿಳೆ ಆರ್ಥಿಕ ಸ್ವಾವಲಂಬನೆ ಪಡೆಯುವ ಮೂಲಕ ಸಾಮಾಜಿಕ, ಆರ್ಥಿಕ ಸುಧಾರಣೆಗೆ ಕೈ ಜೋಡಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಮಕೃಷ್ಣ ಆಶ್ರಮದ ಶ್ರೀ ತ್ಯಾಗೀಶ್ವರಾನಂದ ಮಹಾರಾಜ್ ಮಾತನಾಡಿ, ಮನೆ ಕೆಲಸದ ಒತ್ತಡದ ನಡುವೆಯು ಹೊಲಿಗೆ, ಕೈ ಕಸೂತಿಯಂತಹ  ಸ್ವ-ಉದ್ಯೋಗ ತರಬೇತಿ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಿ ಕುಟುಂಬಕ್ಕೆ ಆಧಾರಾಗಬೇಕೆಂದರು.

ರಾಮಕೃಷ್ಣ ಆಶ್ರಮದ ಮಹಿಳಾ ಸಬಲೀಕರಣ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿಯವರು, ಯಾವುದೇ ಕೆಲಸ ಕೊಟ್ಟರೂ ಸಮರ್ಥವಾಗಿ ನಿಭಾಯಿಸುವ ಶಕ್ತಿ ಇದೆ ಎಂದರು.

ಬಿಜೆಪಿ ಯುವ ಮುಖಂಡ ಕೊಂಡಜ್ಜಿ ಜಯಪ್ರಕಾಶ್ ಮಾತನಾಡಿ, ಮಹಿಳಾ ಸ್ವ-ಉದ್ಯೋಗ ತರಬೇತಿಯ ಸದುಪಯೋಗ ಪಡೆದುಕೊಂಡು ಆರ್ಥಿಕ ಸ್ವಾವಲಂಬಿಗಳಾಗುವಂತೆ ಸಲಹೆ ನೀಡಿದರು.

ಭಾರತ  ವಿಕಾಸ ಪರಿಷದ್ ಗೌತಮ ಶಾಖೆ ದಾವಣಗೆರೆ ಘಟಕದ ಅಧ್ಯಕ್ಷ ಎ.ಎಸ್. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಭಾವಿಪ ದಕ್ಷಿಣ ಪ್ರಾಂತದ ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜ್ಯೋತಿ ಧನಂಜಯ ಮುಂದಿನ ತರಗತಿಗಳಲ್ಲಿ ನೀಡಲಾಗುವ ಕೌಶಲ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. 

ಬಾಲ ವಿಕಾಸ ಸಂಚಾಲಕರಾದ ಸಂಗೀತ ಮನೋಲಿ, ದಕ್ಷಿಣ ಪ್ರಾಂತೀಯ ಖಜಾಂಚಿ ಪುಟ್ಟಪ್ಪ ಕಾಶೀಪುರ, ತರಬೇತಿ ಸಂಚಾಲಕಿ ನೇತ್ರ ಮಧುಕರ, ಅಕ್ಷಯ್ ಸುರ್ವೆ, ಸದಸ್ಯ ಜಯಣ್ಣ, ಶೋಭಾ ಕೊಟ್ರೇಶ್, ಶಂಭುಲಿಂಗಪ್ಪ, ಪಾಲಿಕೆ ಸದಸ್ಯ ಗೀತಾ ದಿಳ್ಳೆಪ್ಪ ಮತ್ತಿತರರು  ಉಪಸ್ಥಿತರಿದ್ದರು.

ಭಾವಾನಿ ಶಂಭುಲಿಂಗಪ್ಪ, ಶೀಲಾ ನಾಯಕ ವಂದೇ ಮಾತರಂ ಗೀತೆ ಹಾಡಿದರು. ಶಾಖೆಯ ಕಾರ್ಯದರ್ಶಿ ಮಧುಕರ ಸ್ವಾಗತಿಸಿದರು. ಡಾ. ಆರತಿ ಸುಂದರೇಶ್ ನಿರೂಪಿಸಿದರು. ಶಾಂತ ತಿಪ್ಪಣ್ಣ ವಂದಿಸಿದರು.

error: Content is protected !!