ಹಳೇ ಕುಂದುವಾಡದಲ್ಲಿ ರಸ್ತೆ ತಡೆದು ಪ್ರತಿಭಟನೆ : ಬಂಧನ – ಬಿಡುಗಡೆ
ದಾವಣಗೆರೆ, ಜ.9- ಹಳೇ ಕುಂದುವಾಡ-ಬನ್ನಿಕೋಡು ಮಾರ್ಗಕ್ಕೆ ನೇರ ಬ್ರಿಡ್ಜ್ ನಿರ್ಮಿಸುವಂತೆ ಆಗ್ರಹಿಸಿ ಹಳೇ ಕುಂದುವಾಡ ಗ್ರಾಮಸ್ಥರು, ಅಲ್ಲಿನ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆ ಬಂದ್‌ಗೊಳಿಸಿ ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ರಸ್ತೆಯಲ್ಲೇ ಕೂತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಧಾವಿಸಿದ ಎಸಿ ಹಾಗೂ ತಹಶೀಲ್ದಾರ್ ಗ್ರಾಮಸ್ಥರನ್ನು ಸಮಾಧಾನ ಪಡಿಸುವಲ್ಲಿ ವಿಫಲರಾದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರು, ಈ ಮೊದಲು ಇಲ್ಲಿದ್ದ ಎರಡೂ ಬ್ರಿಡ್ಜ್‌ಗಳನ್ನು ಅವೈಜ್ಞಾನಿಕವಾಗಿ ಮಾಡಿದ್ದರು. ಪ್ರಸ್ತುತ 2 ಬ್ರಿಡ್ಜ್‌ಗಳನ್ನು ಒಡೆದು, ಈಗ ಮತ್ತೆ ಅವೈಜ್ಞಾನಿಕವಾಗಿ ಬ್ರಿಡ್ಜ್ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಆದ್ದರಿಂದ ಹಳೇ ಕುಂದುವಾಡದಿಂದ ಬನ್ನಿಕೋಡಿಗೆ ಹೋಗುವ ಈ ಸ್ಥಳದಲ್ಲಿ 80ಅಡಿ ನೇರ ಬ್ರಿಡ್ಜ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಎಸಿ, ತಹಶೀಲ್ದಾರ್ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಅಧಿಕಾರಿಗಳ ಮಾತಿಗೆ ಬಗ್ಗದ ಗ್ರಾಮಸ್ಥರು ಬ್ರಿಡ್ಜ್ ನಿರ್ಮಾಣ ಆಗಲೇ ಬೇಕು ಎಂದು ಪಟ್ಟು ಹಿಡಿದು ಕೂತರು.
ಸ್ಥಳಕ್ಕೆ ಎಎಸ್ಪಿ ವಿಜಯಕುಮಾರ್ ಸಂತೋಷ್ ಹಾಗೂ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಆಗಮಿಸಿ ಪ್ರತಿಭಟನೆ ಹತ್ತಿಕ್ಕಲು ಗ್ರಾಮದ 50ಕ್ಕೂ ಅಧಿಕ ಮುಖಂಡರನ್ನು ವಶಕ್ಕೆ ಪಡೆದು, ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಹೆಚ್.ಎನ್. ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಜಿ. ಗಣೇಶಪ್ಪ, ಮುಖಂಡರಾದ ಜೆ. ಮಾರುತಿ, ಹೆಚ್.ಜಿ. ಮಂಜಪ್ಪ, ಮಾಲತೇಶ್, ಜಿಮ್ಮಿ ಹನುಮಂತಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ಡಿ.ಎಸ್.ಎಸ್. ಮಂಜುನಾಥ್, ಡಿ.ಜಿ. ಪ್ರಕಾಶ್, ಅಣ್ಣಪ್ಪ, ಗದಿಗೆಪ್ಪ, ಮಧುನಾಗರಾಜ್, ದಯಾನಂದ್, ಜೆ.ಸಿ. ದೇವರಾಜ್, ರಮೇಶ್ ಸೇರಿದಂತೆ ಗ್ರಾಮಸ್ಥರು ಇದ್ದರು.