ಲಕ್ಷ್ಮೀ ವೆಂಕಟೇಶನ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ, ಉತ್ತರ ದ್ವಾರದ ಮೂಲಕ ದರ್ಶನ
ದಾವಣಗೆರೆ, ಜ.8- ದೇವನಗರಿಯಲ್ಲಿ ಶನಿವಾರ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿತ್ತು. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ವೈಕುಂಠ ಏಕಾದಶಿ ಆಚರಿಸಿದರು.
ಎಂಸಿಸಿ ‘ಬಿ’ ಬ್ಲಾಕ್‍ನಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಶ್ರೀ ಸ್ವಾಮಿಯ ಅಖಂಡ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.
ವೆಂಕಟೇಶ್ವರ ಸ್ವಾಮಿ-ಪದ್ಮಾವತಿ ದೇವಿಯನ್ನು ಹೂವಿನಿಂದ ಅಲಂಕೃತಗೊಳಿಸಲಾಗಿತ್ತು. ದೇಗುಲಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ನಸುಕಿನಿಂದಲೇ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಮಂಗಳ ಸ್ನಾನ, ತುಳಸಿ ಅರ್ಚನೆ, ಮಹಾ ಮಹಾಮಂಗಳಾರತಿ ನಡೆಯಿತು.
ವೈಕುಂಠ ಏಕಾದಶಿಯಂದು ಉತ್ತರ ದ್ವಾರದ ಮೂಲಕ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಎಲ್ಲಾ ದೇವಸ್ಥಾನಗಳಲ್ಲಿ ಉತ್ತರ ದ್ವಾರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಬೆಳಗಿನ ಚಳಿಯನ್ನು ಲೆಕ್ಕಿಸದೆ ಭಕ್ತರು ವೆಂಕಟೇಶ್ವರನ ದರ್ಶನಕ್ಕಾಗಿ ಸರದಿಗೆ ನಿಂತಿದ್ದರು. ವೈಕುಂಠ ದ್ವಾರದ ಮೂಲಕ ಸಾಗಿ ದೇವರ ದರ್ಶನ ಪಡೆದು ಭಕ್ತರು ಪುನೀತರಾದರು. ದೇವಸ್ಥಾನದ ಮುಂಭಾಗ ಲಡ್ಡು ಪ್ರಸಾದ ವಿತರಿಸಲಾಯಿತು. ಸಾಮಾನ್ಯ ದರ್ಶನ ಹಾಗೂ ಹಣ ಪಾವತಿಸಿ ಹೋಗುವ ವಿಶೇಷ ದರ್ಶನಕ್ಕೆ ಎರಡು ರೀತಿಯ ಸರದಿ ವ್ಯವಸ್ಥೆ ಇತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಗದ್ದಲ ಉಂಟಾಗದಂತೆ ದೇವಸ್ಥಾನಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ದೇವಸ್ಥಾನದ ಮುಂಭಾಗ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಪರಮಾತ್ಮನ ಕುರಿತ ಮಾಹಿತಿ ತಿಳಿಸಿಕೊಡಲಾಗುತ್ತಿತ್ತು.
ನಗರದ ಬೇತೂರು ರಸ್ತೆಯ ಲಕ್ಷ್ಮಿವೆಂಕಟೇಶ್ವರ ದೇವಾಲಯದಲ್ಲೂ ವೈಕುಂಠ ಏಕಾದಶಿ ಮಹೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ಇಲ್ಲಿ ಮುಂಜಾನೆ 5.30ರಿಂದಲೇ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 11.30 ರವರೆಗೂ ಇಲ್ಲಿ ಭಕ್ತರು ದರ್ಶನ ಪಡೆದರು. ಇಲ್ಲೂ ಕೂಡ ಭಕ್ತರ ದಂಡೇ ನೆರೆದಿತ್ತು, ತೀರ್ಥ, ಪ್ರಸಾದ ವಿತರಿಸಲಾಯಿತು.
ಅಣಜಿ ಗೊಲ್ಲರಹಳ್ಳಿಯ ದೇವಸ್ಥಾನದಲ್ಲೂ ಅಖಂಡ ದರ್ಶನ ಅವಕಾಶ ನೀಡಲಾಯಿತು. ಯರವನಾಗ್ತಿಹಳ್ಳಿ ಕ್ಯಾಂಪ್‌ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜೆಗಳು ನಡೆದವು. ಚನ್ನಗಿರಿ ತಾಲ್ಲೂಕಿನ ವೆಂಕಟೇಶ್ವರ ಪುರದಲ್ಲಿ ಶ್ರೀದೇವಿ ದೇವಿ ಭೂದೇವಿ ಸಹಿತ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.