ಹೆಚ್.ಎಂ.ಪಿ.ವಿ ಬಗ್ಗೆ ಆತಂಕ, ಭಯ ಬೇಡ

ಹೆಚ್.ಎಂ.ಪಿ.ವಿ ಬಗ್ಗೆ ಆತಂಕ, ಭಯ ಬೇಡ

ದಾವಣಗೆರೆ, ಜ.8- ಕೊರೊನಾ ಹಾವಳಿ ಮರೆಯಾದ ತರುವಾಯ ಹೊಸದಾಗಿ ಉತ್ಪತ್ತಿಯಾಗಿರುವ ಹ್ಯೂಮನ್ ಮೆಟ್ಪಾ ನ್ಯೂಮೋ ವೈರಸ್ (ಹೆಚ್.ಎಂ.ಪಿ.ವಿ) ವೈರಸ್‌ ಕುರಿತು ಸಾರ್ವಜನಿಕರಲ್ಲಿ ಆತಂಕ ಬೇಡ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯ ಪರೀಕ್ಷೆಯ ಸಮಯದಲ್ಲಿ 2 ಹೆಚ್.ಎಂ.ಪಿ.ವಿ. ಸೋಂಕಿತ ಪ್ರಕರಣಗಳು ದೃಡಪಟ್ಟಿವೆ. 1 ಪ್ರಕರಣವನ್ನು ಈಗಾಗಲೇ ಚಿಕಿತ್ಸೆ ನೀಡಿ ಬಿಡುಗಡೆ ಮಾಡಿದ್ದು, ಉಳಿದ ಪ್ರಕರಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಈ ಎರಡೂ ಪ್ರಕರಣಗಳು ಸೌಮ್ಯ ಸ್ವಭಾವದವು ಮತ್ತು ಯಾವುದೇ ಅಂತರರಾಷ್ಟ್ರೀಯ ಪ್ರಯಾಣ ಇತಿಹಾಸ ಹೊಂದಿಲ್ಲ ಎಂದು ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯದಲ್ಲಿ ಶೀತ ಜ್ವರ ತರಹದ ಸಾಮಾನ್ಯ ಮತ್ತು ತೀವ್ರ ತರಹದ ಸೋಂಕಿನಂತಹ ಚಾಲ್ತಿಯಲ್ಲಿರುವ ಉಸಿರಾಟದ ಸೋಂಕುಗಳ ಡೇಟಾವನ್ನು ವಿಶ್ಲೇಷಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 2024ರ ಡಿಸೆಂಬರ್‍ನಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿಲ್ಲ ಎಂದಿದ್ದಾರೆ.

ರೋಗದ ಲಕ್ಷಣಗಳು : ಹೆಚ್.ಎಂ.ಪಿ.ವಿ. ಕೆಮ್ಮು, ಜ್ವರ, ಮೂಗು ಕಟ್ಟುವಿಕೆ ಮತ್ತು ಉಸಿರಾಟದ ತೊಂದರೆ ಸೇರಿದಂತೆ ಜ್ವರ ತರಹದ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ. ಹೆಚ್ಚು ತೀವ್ರತರವಾದ ಪ್ರಕರಣಗಳಲ್ಲಿ ಇದು ಶ್ವಾಸನಾಳ ಮತ್ತು -ಶ್ವಾಸಕೋಶದ ಸೋಂಕಿಗೆ ಕಾರಣವಾಗಬಹುದು. ವಿಶೇಷವಾಗಿ ಇದು ಚಿಕ್ಕಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಹೊಂದಿರದ ವ್ಯಕ್ತಿಗಳಲ್ಲಿ ಕಂಡು ಬರುತ್ತದೆ.

ಹರಡುವಿಕೆ : ಉಸಿರಾಟದ ಹನಿಗಳು, ನಿಕಟ ವೈಯಕ್ತಿಕ ಸಂಪರ್ಕ ಮತ್ತು ವೈರಸ್‍ನಿಂದ ಕಲುಷಿತಗೊಂಡ ಮೈ ಕೈ ಸ್ಪರ್ಶಿಸಿದ ನಂತರ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಮುಟ್ಟಿದರೆ ಹರಡಬಹುದು.

ಭಾರತದಲ್ಲಿ ಪ್ರಸ್ತುತ ಸ್ಥಿತಿ : ಭಾರತ ಸರ್ಕಾರ ಮತ್ತು ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ. ಇತ್ತೀಚಿನ ಮಾಹಿತಿಯಂತೆ ದೇಶದಲ್ಲಿ ಹೆಚ್.ಎಂ.ಪಿ.ವಿ. ಪ್ರಕರಣಗಳಲ್ಲಿ ಯಾವುದೇ ಗಣನೀಯ ಏರಿಕೆ ಕಂಡುಬಂದಿಲ್ಲ. ಎಚ್ಚರಿಕೆಗೆ ಯಾವುದೇ ಕಾರಣವಿಲ್ಲ. ಆದರೆ ತಡೆಗಟ್ಟುವ ಕ್ರಮಗಳನ್ನು ಶಿಫಾರಸ್ಸು ಮಾಡಲಾಗಿದೆ.

ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಶುಪೇಪರ್ ನಿಂದ ಮುಚ್ಚಿಕೊಳ್ಳಬೇಕು. ಕೈಗಳನ್ನು ಸಾಬೂನು, ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್‍ನಿಂದ ಹೆಚ್ಚಾಗಿ ತೊಳೆಯಬೇಕು.

ಹರಡುವಿಕೆ ಕಡಿಮೆ ಮಾಡಲು ಎಲ್ಲಾ ಒಳ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ಗಾಳಿಯೊಂದಿಗೆ ಸಾಕಷ್ಟು ವಾತಾವರಣವನ್ನು (ventilation) ಶಿಫಾರಸ್ಸು ಮಾಡಲಾಗಿದ್ದು, ಫ್ಲೂ ಐ.ಎಲ್.ಐ.ನ ಚಿಹ್ನೆಗಳು ಮತ್ತು ರೋಗ ಲಕ್ಷಣಗಳನ್ನು ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

ಸಾಕಷ್ಟು ಪ್ರಮಾಣದ ನೀರು ಕುಡಿಯಬೇಕು ಮತ್ತು ಪೌಷ್ಟಿಕ ಆಹಾರ ಸೇವಿಸಿ. ರಾಜ್ಯ ಆರೋಗ್ಯ ಇಲಾಖೆ ಸಮನ್ವಯದಿಂದ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಇದಕ್ಕೆ ಭಯ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

error: Content is protected !!