ಹಳೇ ನಗರದಲ್ಲಿ ಸಂಚಾರ ನಿರ್ವಹಣೆ ಪರಿಶೀಲನೆ

ಹಳೇ ನಗರದಲ್ಲಿ ಸಂಚಾರ ನಿರ್ವಹಣೆ ಪರಿಶೀಲನೆ

ಫುಟ್‌ಪಾತ್ ಅತಿಕ್ರಮಿಸಿದವರಿಗೆ ದಂಡ, ಪ್ರಕರಣ ದಾಖಲಿಸಲು ಎಸ್ಪಿ ಉಮಾ ಸೂಚನೆ

ದಾವಣಗೆರೆ, ಜ.8- ಎಸ್ಪಿ ಉಮಾ ಪ್ರಶಾಂತ್ ಅವರು ಬುಧವಾರ ನಗರದ ಹಳೇ ಭಾಗದಲ್ಲಿ ಸಂಚರಿಸಿ ಸಂಚಾರ ನಿರ್ವಹಣೆ, ಪಾರ್ಕಿಂಗ್, ಒನ್ ವೇ, ಫುಟ್ ಪಾತ್ ನಿರ್ವಹಣೆ ಬಗ್ಗೆ ಪರಿಶೀಲಿಸಿದರು.

ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ ಪ್ರಮುಖ ರಸ್ತೆಗಳಾದ ಮಂಡಿಪೇಟೆ ರಸ್ತೆ, ಬಿನ್ನಿ ಕಂಪನಿ ರಸ್ತೆಗಳಲ್ಲಿ ಅಂಗಡಿ ಮಾಲೀಕರು ಪಾದಚಾರಿ ಮಾರ್ಗವನ್ನು ಅಕ್ರಮಿಸಿಕೊಂಡಿರುವ ಬಗ್ಗೆ ಕೆಲವು ಮಾಲೀಕರಿಗೆ ನೋಟಿಸ್ ನೀಡುವುದರ ಜೊತೆಗೆ ದಂಡವನ್ನು ವಿಧಿಸಲಾಯಿತು. 

ಪಾದಚಾರಿ ಮಾರ್ಗ ದುರ್ಬಳಕೆ ಮಾಡಿಕೊಂಡವರ ಮೇಲೆ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಪೊಲೀಸ್ ಅಧೀಕ್ಷಕರು ಸೂಚಿಸಿದರು. 

ಅದೇ ರೀತಿ ವಾಹನ ಗಳ ನಿಲುಗಡೆ ಸರಿಯಾಗಿ ಮಾಡದ ವಾಹನ ಚಾಲಕರ ಮೇಲೆ ಐಎಂವಿ ಪ್ರಕರಣಗಳನ್ನು ದಾಖಲು ಮಾಡಲು ಸೂಚಿಸಿದರು.

ಸ್ಥಳೀಯ ಅಂಗಡಿ ಮಾಲೀಕರ ಸಲಹೆಗಳನ್ನು ಹಾಗೂ ಮೌಖಿಕ ಮನವಿಯನ್ನು ಪಡೆದು ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಕ್ರಮಗಳನ್ನು ಕೈಗೊಳ್ಳಲು ಹಾಗೂ ನಗರದಲ್ಲಿ ಸಂಚಾರ ಸುಧಾರಣೆ ಬಗ್ಗೆ ಸೂಕ್ತ  ಕ್ರಮ ಕೈಗೊಳ್ಳುವ  ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳಾದ  ಮಂಜಪ್ಪ,  ಜಯಶೀಲ  ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!