ಜನತೆಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ: ಸಚಿವ ಎಸ್ಸೆಸ್ಸೆಂ

ಜನತೆಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ: ಸಚಿವ ಎಸ್ಸೆಸ್ಸೆಂ

ವಿವಿಧ ಕಾಮಗಾರಿಗಳಿಗೆ  ಭೂಮಿ ಪೂಜೆ, ಹೊಲಿಗೆ ಯಂತ್ರ ವಿತರಣೆ, ಟ್ರ್ಯಾಕ್ಟರ್ ಲೋಕಾರ್ಪಣೆ

ದಾವಣಗೆರೆ, ಜ.7- ಬೆಂಗಳೂರು ನಗರವನ್ನು ಮೀರಿಸುವಂತಹ ಕಾಮಗಾರಿಗಳು ದಾವಣಗೆರೆ ಜಿಲ್ಲೆಯಲ್ಲಾಗಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್  ತಿಳಿಸಿದರು.

ಮಹಾನಗರ ಪಾಲಿಕೆ ಆವರಣದಲ್ಲಿ ವಿವಿಧ ವಾರ್ಡ್ ಗಳಲ್ಲಿ ಕೈಗೊಳ್ಳಲಾದ ರೂ.8.05 ಕೋಟಿ ಮೊತ್ತದ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ 500 ಫಲಾನುಭವಿ ಗಳಿಗೆ ಹೊಲಿಗೆ ಯಂತ್ರಗಳ ವಿತರಣೆ, ಘನತ್ಯಾಜ್ಯ ನಿರ್ವಹಣೆಗಾಗಿ 10 ಟ್ರ್ಯಾಕ್ಟರ್ ಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ನುಡಿದಂತೆ ನಡೆದಿದ್ದೇವೆ. ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಬಡವರ ಅಭಿವೃದ್ಧಿಗಾಗಿ ಕಾಂಗ್ರೆಸ್ ಸದಾ ಮುಂದಿದ್ದು, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿನ ನಮ್ಮ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳು ಜನತಗೆ ಉಪಯುಕ್ತವಾಗಿವೆ. 

ನಮ್ಮ ಅಧಿಕಾರದಲ್ಲಿಯೇ ಪಾಲಿಕೆಯ ವ್ಯಾಪ್ತಿ ಉತ್ತಮ ರಸ್ತೆಗಳನ್ನು ನಿರ್ಮಿಸಿದ್ದೇವೆ. ಅವುಗಳನ್ನು ನಿರ್ವಹಣೆ ಮಾಡಿಕೊಂಡು ಹೊದರೆ ರಸ್ತೆ ಸಮಸ್ಯೆಗಳು ತಪ್ಪುತ್ತವೆ. ಸಿಮೆಂಟ್ ರಸ್ತೆಗಳ ಪಕ್ಕದ ಸರ್ವಿಸ್, ಒಳ ರಸ್ತೆಗಳ ನಿರ್ಮಾಣ, ಯುಜಿಡಿ ಲೈನ್  ಹಾಗೂ ಮೂಲ ಸೌಕರ್ಯವನ್ನು ಬಡ ಜನತೆಗೆ ನೀಡುವಲ್ಲಿ ಪಾಲಿಕೆ ಸದಸ್ಯರು ಮುಂದಾಗಬೇಕು ಎಂದರು.

ಪಾಲಿಕೆಯಿಂದ 1500 ಹೊಲಿಗೆ ಯಂತ್ರಗ ಳನ್ನು ನೀಡಲಾಗಿದೆ. ಮುಂದೆ ನೂತನ ತಂತ್ರ ಜ್ಞಾನವನ್ನು ಅಳವಡಿಸಿ ಮಹಿಳೆಯರಿಗೆ ಎಂಬ್ರಾ ಡರಿ ಮಿಷನ್, ವಾಷಿಂಗ್ ಮಿಷನ್, ಗುಡಿ ಕೈಗಾರಿಕೆಯಂತಹ ಸೇವೆಗಳಾಗಬೇಕು ಎಂದರು.

ಕುಂದುವಾಡ ಕೆರೆ, ಟಿವಿ ಸ್ಟೇಷನ್ ಕೆರೆಗಳ ನಿರ್ಮಾಣದಿಂದ ಕುಡಿಯುವ ನೀರಿನ ಬವಣೆ ನೀಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 250 ಪೌರ ಕಾರ್ಮಿಕರ ಸೇವೆ ಖಾಯಂ ಮಾಡಲಾಗಿದೆ. ಉಳಿದ 24 ಪೌರ ಕಾರ್ಮಿಕರ ಸೇವೆ ಖಾಯಂ ಮಾಡುವ ಪ್ರಸ್ತಾವನೆ ಬಾಕಿ ಇದೆ. ಪಾಲಿಕೆ ವ್ಯಾಪ್ತಿಯಲ್ಲಿನ ಇನ್ನಷ್ಟು ಅಭಿವೃದ್ಧಿಗೆ ಮಹಾತ್ಮ ಗಾಂಧಿ ಯೋಜನೆಯಡಿ 125 ಕೋಟಿ ಅನುದಾನದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು. 

ನಾವು ಪಾಲಿಕೆಯ ಯಾವ ಸದಸ್ಯರಿಗೂ ಬಿಜೆಪಿ ಪಕ್ಷದವರಂತೆ ತಾರಾತಮ್ಯ ಮಾಡುವುದಿಲ್ಲ ಎಂದು ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಿಳಿಸಿದರು. ಪಾಲಿಕೆಯ ಬಿಜೆಪಿಯ ಆಡಳಿತದಲ್ಲಿ ಬಿಜೆಪಿ ಸದಸ್ಯರಿಗೆ ಒಂದು ಕೋಟಿ ಅನುದಾನ ನೀಡಿದರೆ ಕಾಂಗ್ರೆಸ್ ಸದಸ್ಯರಿಗೆ ಐದು ಲಕ್ಷ ಅನುದಾನ ನೀಡುತ್ತಿದ್ದರು. ನಾವು ಹಾಗೇ ಮಾಡುವುದಿಲ್ಲ. ಎಲ್ಲಾ ಸದಸ್ಯರುಗಳನ್ನು ಒಗ್ಗೂಡಿಸಿಕೊಂಡು ಹೋಗುತ್ತೇವೆ.  ಎಲ್ಲಾ ಸದಸ್ಯರುಗಳು ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸಚಿವರು ಕಿವಿಮಾತು ಹೇಳಿದರು.

ಆಯುಕ್ತರಾದ ರೇಣುಕಾ, ಮೇಯರ್ ಕೆ.ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ಉಮೇಶ್, ಸವಿತಾ ಗಣೇಶ್ ಹುಲ್ಮನಿ, ಸುಧಾ ಇಟ್ಟಿಗುಡಿ ಮಂಜುನಾಥ್, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಏ.ನಾಗರಾಜ್, ರಹೀಂ ಖಾನ್, ಉದಯ್ ಕುಮಾರ್, ಪಾಮೇನಹಳ್ಳಿ ನಾಗರಾಜ್, ಎಲ್.ಡಿ ಗೋಣೆಪ್ಪ, ಕೆ.ಎನ್ ವೀರೇಶ್, ಜಾಕೀರ್ ಅಲಿ,  ನಾಮನಿರ್ದೇಶನರಾದ ಸದಸ್ಯ ಸಾಗರ್ ಎಲ್.ಎಂ ಹೆಚ್, ರುದ್ರೇಶ್ ಇತರರು ಉಪಸ್ಥಿತರಿದ್ದರು.

error: Content is protected !!