ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ಶಿವಗಂಗಾ ಬಸವರಾಜ್ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ಶಿವಗಂಗಾ ಬಸವರಾಜ್ ಪ್ರತಿಭಟನೆ

ನಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅಕ್ರಮ ಎಂದು ಶಾಸಕ ಆರೋಪ

ಚುನಾವಣೆ ಮುಂದೂಡಿದ ಡಿಸಿ ಅಕ್ರಮ ತನಿಖೆಗೆ ಆದೇಶ

ದಾವಣಗೆರೆ, ಜ.7- ಚನ್ನಗಿರಿ ತಾಲ್ಲೂಕು ನಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅಕ್ರಮ ಮತದಾನಕ್ಕೆ ಸಹಕಾರ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚನ್ನಗಿರಿ ಶಾಸಕ ಬಸವರಾಜ್ ವಿ. ಶಿವಗಂಗಾ ಹಾಗೂ ಅವರ ಬೆಂಬಲಿಗರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಚನ್ನಗಿರಿ ತಾಲ್ಲೂಕಿನ ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜನವರಿ 12 ರಂದು ಚುನಾವಣೆ ನಡೆಯಲಿದೆ. ಆದರೆ ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸೇರಿಕೊಂಡು ಸಭೆಗೆ ಹಾಜರಾಗದೇ ಇರುವ ಸಾಕಷ್ಟು ಜನ ಸದಸ್ಯರ ಸಹಿಯನ್ನು ಅವರೇ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮೂರು ಸಭೆಗಳಿಗೆ ಹಾಜ ರಾಗದೇ ಇರುವ ಜಾಗದಲ್ಲಿ ವೈಟ್ನರ್ ಹಾಕಿ ತಿದ್ದಿದ್ದಾ ರೆಂದು ಶಾಸಕ ಶಿವಗಂಗಾ ಬಸವರಾಜ್ ಆರೋಪಿಸಿದರು. 

ಸಂಘಕ್ಕೆ ಚುನಾವಣೆಗೆ ಸಿದ್ದಪಡಿಸಿರುವ ಮತದಾರರ ಪಟ್ಟಿಯನ್ನೂ ಅಧಿಕಾರಿಗಳು ತಿದ್ದಿದ್ದಾರೆ. ಅಕ್ರಮ ಎಸಗಿದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಿ ಚುನಾವಣೆ ರದ್ದು ಮಾಡುವಂತೆ ಆಗ್ರಹಿಸಿದರು.

ಇದೇ ವಿಷಯವಾಗಿ ಸೋಮವಾರ ಎರಡು ಬಣಗಳ ನಡುವೆ ನಲ್ಲೂರಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೈಕೈ ಮಿಸಲಾಯಿಸುವ ಹಂತಕ್ಕೆ ತಲುಪಿತ್ತು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದೂರು ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಕ್ರಮ ಮಾಡಿದ ನಾಲ್ಕು ಜನ ಅಧಿಕಾರಿಗಳನ್ನು ಅಮಾನತ್ತು ಮಾಡ ಬೇಕು. ಸೊಸೈಟಿ ಸೂಪರ್ ಸೀಡ್ ಮಾಡ ಬೇಕು. ಅಷ್ಟೇ ಅಲ್ಲದೇ ಚುನಾವಣೆಯನ್ನು ರದ್ದು ಮಾಡಬೇಕು, ಸೊಸೈಟಿಯಲ್ಲಿ ನಡೆದ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಶಾಸಕರ ಮನವೊಲಿಸಲು ಪ್ರಯತ್ನಪಟ್ಟರು. ನಂತರ ಶಾಸಕರಿಗೆ ಸದಸ್ಯ ಚುನಾವಣೆ ಮುಂದೂಡುವ ಭರವಸೆ ನೀಡಿದಾಗ ಶಾಸಕರು ಪ್ರತಿಟನೆ ಕೈ ಬಿಟ್ಟರು. ಅಕ್ರಮ ಮಾಡಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಅವರ ವಿರುದ್ದ ಕ್ರಮ ಆಗುವವರೆಗೂ ಪ್ರತಿಭಟನೆ ನಡೆಸುವುದಾಗಿ ಶಾಸಕರು ಎಚ್ಚರಿಸಿದರು.

error: Content is protected !!