ದಾವಣಗೆರೆ, ಜ. 7 – ಗುತ್ತಿಗೆದಾರರು ಉತ್ತಮ ಕಾಮಗಾರಿಗಳನ್ನು ನಿರ್ಮಾಣ ಮಾಡುವಂತೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
ದೊಡ್ಡಬೂದಿಹಾಳ್ ಗ್ರಾಮದಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಬಿ. ಕಲಪನಹಳ್ಳಿ ಗ್ರಾಮದಲ್ಲಿ ರಾಜಕಾಲುವೆಯ ಹಳ್ಳಕ್ಕೆ ತಡೆಗೋಡೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬಡವರ ಪಕ್ಷವೆಂದರೇ ಅದು ಕಾಂಗ್ರೆಸ್ ಪಕ್ಷ, ಉಪಯುಕ್ತ ಐದು ಗ್ಯಾರೆಂಟಿಗಳನ್ನು ತಂದು ನುಡಿದಂತೆ ನಡೆದಿದ್ದೇವೆ. ಜಿಲ್ಲೆಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಕಾಂಗ್ರೆಸ್ ಪಕ್ಷವು ಮುಂದಾಗಿದೆ. ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಿಗಳಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ವಸತಿ ವ್ಯವಸ್ಥೆ ಲಭಿಸುವ ಹಿನ್ನೆಲೆ ದೊಡ್ಡಬೂದಿಹಾಳ್ ಗ್ರಾಮದಲ್ಲಿ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಅಪಘಾತಗಳನ್ನು ತಪ್ಪಿಸಲು ಬಿ. ಕಲಪನಹಳ್ಳಿ ಗ್ರಾಮದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಗುತ್ತಿಗೆದಾರರು ಉತ್ತಮ ಕಾಮಗಾರಿ ನಿರ್ಮಾಣ ಮಾಡಬೇಕು ಹಾಗೂ ಇಂಜಿನಿಯರ್‌ಗಳು ಕಳಪೆ ಕಾಮಗಾರಿಯಾಗದಂತೆ ಜಾಗೃತಿ ವಹಿಸುವಂತೆ ಸಚಿವರು ಸೂಚಿಸಿದರು.