ರಾಜ್ಯ ಮಟ್ಟದ ಯುವಜನೋತ್ಸವದ ಸಮಾರೋಪದಲ್ಲಿ ಸಂಸದೆ ಡಾ. ಪ್ರಭಾ ಸಲಹೆ
ದಾವಣಗೆರೆ, ಜ.6- ಯುವ ಜನರು ಕೌಟುಂಬಿಕ, ಸಾಮಾಜಿಕ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕಾಗಿದೆ. ಆರೋಗ್ಯ, ಶಿಕ್ಷಣದ ಕಡೆ ಹೆಚ್ಚು ನಿಗಾ ವಹಿಸುವ ಜೊತೆಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳ ಬೇಕೆಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ನಗರದ ಬಿ.ಐ.ಇ.ಟಿ ಕಾಲೇಜಿನ ಆವ ರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಯುವಜನೋತ್ಸವದ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದರು.
ಜನತೆ ದೇಶದ ಶಕ್ತಿ, ದೇಶದ ಭವಿಷ್ಯ ಯುವಕರ ಕೈಯ್ಯಲಿದೆ. ಸಮಾಜ ಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಸಂವಿಧಾನದ ಹಕ್ಕುಗಳನ್ನಷ್ಟೇ ತಿಳಿಸಿದು ಕೊಂಡರೆ ಸಾಲದು, ಸಾಮಾಜಿಕ ಹೊಣೆಗಾರಿಕೆ, ಕೌಟುಂಬಿಕ ಜವಾಬ್ದಾರಿ ಬಗ್ಗೆ ಅರಿಯುವ ಅಗತ್ಯವಿದೆ. ಹಕ್ಕು ಮತ್ತು ಕರ್ತವ್ಯ ಎರಡನ್ನೂ ಸಹ ತಿಳಿದುಕೊಳ್ಳ ಬೇಕೆಂದರು. ಬರೀ ಚುನಾವಣೆಯಲ್ಲಿ ಮತ ಹಾಕಿ ಕೈಕಟ್ಟಿ ಕುಳಿತುಕೊಳ್ಳದೇ, ಸರ್ಕಾರ ರೂಪಿಸುವ ನೀತಿ, ನಿರೂಪಣೆ ಮತ್ತು ಜನ ಪ್ರತಿನಿಧಿಗಳ ಕಾರ್ಯಗಳ ಬಗ್ಗೆ ವಿಮರ್ಶಾ ತ್ಮಕವಾಗಿ ಅವಲೋಕಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ದೇಶದ ಸಂವಿಧಾನವನ್ನು ಪರಿಚಯಿ ಸುವ ದೃಷ್ಟಿಯಿಂದ ಕೆವೈಸಿ ಎನ್ನುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಗಿದೆ ಎಂದರು.
ಯುವಜನೋತ್ಸಕ್ಕೆ ತೆರೆ
ದಾವಣಗೆರೆ, ಜ.6- ಎರಡು ದಿನಗಳ ಕಾಲ ನಗರದಲ್ಲಿ ಯುವ ಜನರ ಕಲರವಕ್ಕೆ ಸಾಕ್ಷಿಯಾಗಿದ್ದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ತೆರೆ ಬಿದ್ದಿದೆ.
2 ದಶಕಗಳ ತರುವಾಯ ದಾವಣಗೆರೆ ನಗರಕ್ಕೆ ಯುವಜನೋತ್ಸವ ಆಯೋಜಿಸುವ ಸುವರ್ಣ ಅವಕಾಶ ಲಭಿಸಿತ್ತು.
ರಾಜ್ಯದ ಬೀದರ್ ನಿಂದ ಚಾಮರಾಜನಗರ, ಉಡುಪಿಯಿಂದ ಕೋಲಾರದವರೆಗಿನ 31 ಜಿಲ್ಲೆಗಳಿಂದ ಆಗಮಿಸಿದ ಯುವ ಪ್ರತಿಭೆಗಳು ತಮ್ಮ ಕಲೆಗಳನ್ನು ಅನಾವರಣಗೊಳಿಸಿದರು.
ಘೋಷಣಾ ಸ್ಪರ್ಧೆ, ಕವನ ರಚನೆ, ಚಿತ್ರಕಲೆ, ಕಥೆ ಬರವಣಿಗೆ, ವಿಜ್ಞಾನ ಮೇಳ, ಜನಪದ ಗೀತೆ ಹಾಗೂ ಜನಪದ ನೃತ್ಯ ಪ್ರಕಾರಗಳ ಸ್ಪರ್ಧೆಗಳು ನಡೆದವು. ಇಲ್ಲಿ ವಿಜೇತರಾದವರು ರಾಷ್ಟ್ರ ಮಟ್ಟದ ಯುವಜನೊತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಯುವಜನೋತ್ಸವದ ಅಂಗವಾಗಿ ಆಯೋಜಿಸಿದ್ದ ವಾಕಥಾನ್, ರಾಫ್ಟಿಂಗ್ ಹಾಗೂ ಕಾಯ್ಕಿಂಗ್ (ಹಾಯಿದೋಣಿ) ಕ್ರೀಡೆಗಳು ನಗರದ ಜನತೆ ವಿನೂತನ ಅನುಭವ ನೀಡಿದವು. ಮಣಿಕಾಂತ್ ಕದ್ರಿ ಸಂಗೀತ ಸಂಜೆ ಜನರ ಮನರಂಜಿಸಿತು. ಸ್ಪರ್ಧಿಗಳು ಹಾಗೂ ಗಣ್ಯರು ದಾವಣಗೆರೆ ನಗರದ ಅತಿಥ್ಯಕ್ಕೆ ಮನಸೋತರು. ಸಾರಿಗೆ, ವಸತಿ, ಊಟ ಎಲ್ಲದರಲ್ಲೂ ಅಚ್ಚುಕಟ್ಟುತನ ಕಂಡು ಬಂದಿತು. ಭದ್ರತೆಗಾಗಿ 1500 ಪೊಲೀಸರನ್ನು ನೇಮಿಸಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಯುವಜನೋತ್ಸವ ಆಯೋಜನೆಗೆ ಸಂಕಲ್ಪ ತೊಟ್ಟು ಕಾರ್ಯಕ್ರಮ ಸ್ಮರಣೀಯವಾಗಿಸಿದ್ದಾರೆ.
ವೇದಿಕೆ ನಿರ್ವಹಣೆ, ಊಟ, ವಸತಿ ವ್ಯವಸ್ಥೆ ಹಾಗೂ ಆತಿಥ್ಯಕ್ಕೆ ಎಲ್ಲಿಯೂ ಚ್ಯುತಿ ಬರದ ಹಾಗೆ ಕಾರ್ಯ ನಿರ್ವಹಿಸಿದ್ದಾರೆ. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಿ, ಅಧಿಕಾರ ಹಾಗೂ ಕಾರ್ಯನಿರ್ವಹಣೆ ಹೊಣೆ ಒದಗಿಸಲಾಗಿತ್ತು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಯುವಜ ನೋತ್ಸವದಲ್ಲಿ ಪಾಲ್ಗೊಳ್ಳುವ ಬಹುತೇಕ ಕಲಾವಿದರು ಬಡ ಕುಟುಂಬದಿಂದ ಬಂದಂತಹವರಾಗಿದ್ದು, ಸ್ಪರ್ಧೆಗೆ ಬಂದು ಹೋಗುವ ಖರ್ಚು-ವೆಚ್ಚಗಳನ್ನು ನಿಭಾಯಿಸುವುದೇ ಕಷ್ಟವಾಗಿರುತ್ತದೆ. ಆದ್ದರಿಂದ ಯುವಜನೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಕಲಾ ತಂಡಗಳಿಗೆ ಒಂದು ಲಕ್ಷ ರೂ. ನಗದು ಬಹುಮಾನ ಘೋಷಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ, ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
ಈ ಹಿಂದೆ ಜಿಲ್ಲೆಯಲ್ಲಿ ನಡೆದ ಯುವಜನ ಮೇಳಗಳು ಅವ್ಯವಸ್ಥೆಯ ಆಗರವಾಗಿದ್ದವು. ಈ ಬಾರಿ ಜಿಲ್ಲೆಯ ದಕ್ಷ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ನೇತೃತ್ವದಲ್ಲಿ ಯುವಜನೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಪ್ರಶಂಸಿಸಿದರು.
ಆದಷ್ಟು ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡದೇ ಸರಳವಾಗಿ, ಯಶಸ್ವಿಯಾಗಿ ನಡೆಸಬೇಕು. ಕಲಾವಿದರಿಗೆ ಹೆಚ್ಚು ಅನು ಕೂಲವಾಗುವ ರೀತಿಯಲ್ಲಿ ಕಾರ್ಯಕ್ರಮ ಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.
ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಎರಡು ದಿನಗಳ ಯುವಜನೋತ್ಸವದಲ್ಲಿ ರಾಜ್ಯ ಮತ್ತು ಹೊರ ರಾಜ್ಯದ ಕಲಾವಿದರು ಉತ್ತಮ ಪ್ರದರ್ಶನ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಾಡಿನ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಧಾರ್ಮಿಕತೆಯನ್ನು ಬಿಂಬಿಸುವಲ್ಲಿ ಕಲಾ ತಂಡಗಳು ಯಶಸ್ವಿಯಾಗಿವೆ ಎಂದರು.
ರಾಜ್ಯ ಸರ್ಕಾರ ರಸ್ತೆ ದುರಸ್ತಿ ಸೇರಿದಂತೆ ಅಭಿವೃದ್ಧಿ ಕೆಲಸಗಳ ಕಡೆ ಹೆಚ್ಚು ಗಮನಹರಿಸಬೇಕು. ಉಳಿದ ಮೂರು ವರ್ಷಗಳಲ್ಲಿ ಹಾಳಾಗಿರುವ ರಸ್ತೆ ದುರಸ್ತಿ, ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡುವಂತೆ ಸದನದಲ್ಲಿ ಧ್ವನಿ ಎತ್ತುವಂತೆ ಶಾಸಕ ಬಸವಂತಪ್ಪ ಅವರಲ್ಲಿ ಮನವಿ ಮಾಡಿದರು.
ಮೇಯರ್ ಕೆ. ಚಮನ್ ಸಾಬ್ ಮಾತನಾಡಿ, ಯುವಜನೋತ್ಸವದಂತಹ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸುವುದು ಸಲ್ಲದು. ಯುವಜನರಲ್ಲಿ ಸೌಹಾರ್ದತೆ, ಸಹೋದರತ್ವವನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿ.ಪಂ. ಸಿಇಓ ಸುರೇಶ ಬಿ. ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್, ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಕೆ. ನಾಗನಗೌಡ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಮಾಗಾನಹಳ್ಳಿ ಮಂಜುನಾಥ್ ಸೇರಿದಂತೆ ಅನೇಕ ಸಂಘಟಕರು ಉಪಸ್ಥಿತರಿದ್ದರು.
ಶೃತಿ ರಾಜು ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕಲಾವಿದರ ಕಲಾ ಪ್ರದೇರ್ಶನಗಳು ಕಣ್ಮನ ಸೆಳೆದವು.