ಕುಂದುವಾಡ ಕೆರೆಯಲ್ಲಿ ಹಾಯಿದೋಣಿ ಕ್ರೀಡಾ ಕಾರ್ಯಕ್ರಮದಲ್ಲಿ ಡಿಸಿ ಜಿ.ಎಂ.ಗಂಗಾಧರ ಸ್ವಾಮಿ
ದಾವಣಗೆರೆ,ಜ. 5- ಶಾಂತಿ ಸಾಗರ ಹಾಗೂ ಕೊಂಡಜ್ಜಿ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳ ತರ ಬೇತಿ ಅಕಾಡೆಮಿ ತೆರೆಯಲು ಸಾಕಷ್ಟು ಅವಕಾಶ ಗಳಿವೆ. ಜಿಲ್ಲೆಯ ಯುವಕರು ಇತರೆ ಕ್ರೀಡೆಗಳಂತೆ ಜಲಸಾಹಸ ಕ್ರೀಡೆಯಲ್ಲಿಯೂ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ಇದರಿಂದ ಉತ್ತೇಜನ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಹೇಳಿದರು.
ರಾಜ್ಯ ಮಟ್ಟದ ಯುವಜನೋತ್ಸವದ ಅಂಗವಾಗಿ ಕುಂದುವಾಡ ಕೆರೆಯಲ್ಲಿ ಜನರಲ್ ತಿಮ್ಮಯ್ಯ ಜಲಸಾಹಸ ಅಕಾಡೆಮಿ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ರಾಫ್ಟಿಂಗ್ ಹಾಗೂ ಕಾಯ್ಕಿಂಗ್ (ಹಾಯಿದೋಣಿ) ಕ್ರೀಡೆ ಗಳನ್ನು ಸೋಮವಾರ ವೀಕ್ಷಿಸಿ ಅವರು ಮಾತನಾಡಿದರು.
ಈ ಹಿಂದೆ ಶಾಂತಿಸಾಗರದಲ್ಲಿ ಜಲ ಸಾಹಸ ಕ್ರೀಡೆಗಳ ತರಬೇತಿ ಅಕಾಡೆಮಿ ಕಾರ್ಯ ನಿರ್ವಹಿಸು ತ್ತಿತ್ತು. ಕಾರಣಾಂತರಗಳಿಂದ ಇದನ್ನು ಸ್ಥಗಿತಗೊಳಿಸ ಲಾಗಿದೆ. ನೀರಾವರಿ ಯೋಜನೆಗಳ ಮೂಲಕ ಜಿಲ್ಲೆಯ ಶಾಂತಿಸಾಗರ ಹಾಗೂ ಕೊಂಡಜ್ಜಿ ಕೆರೆಗಳಲ್ಲಿ ಸರ್ವ ಋತುಗಳಲ್ಲಿಯೂ ನೀರಿನ ಲಭ್ಯತೆ ಇರುತ್ತದೆ. ಜಲ ಪರಿಸರಕ್ಕೆ ಹಾನಿಯಾಗದಂತೆ ಶಾಂತಿ ಸಾಗರ ಹಾಗೂ ಕೊಂಡಜ್ಜಿ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳ ತರ ಬೇತಿ ಅಕಾಡೆಮಿ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿ ವರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗು ವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಿಸ್ತರಣೆ: ಬಹಳ ವರ್ಷಗಳ ನಂತರ ಜಿಲ್ಲೆಯಲ್ಲಿ ಯುವ ಜನೋತ್ಸವ ಕಾರ್ಯಕ್ರಮ ಆಯೋಜಿಸ ಲಾಗಿದ್ದು, ನಗರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಈ ಸಂದರ್ಭದಲ್ಲಿ ಯುವಕರಿಗೆ ಜಲಸಾಹಸ ಕ್ರೀಡೆಗಳ ಬಗ್ಗೆ ಪರಿಚಯಿಸಬೇಕು ಎಂಬುದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರ ಆಶಯವಾಗಿತ್ತು. ಈ ಆಶಯಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಲವು ತೋರಿದರು. ಈ ಹಿನ್ನೆಲೆಯಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತರಿಗೆ ಜಲಸಾಹಸ ಕ್ರೀಡೆಗಳನ್ನು ಆಯೋಜಿ ಸುವಂತೆ ಕೋರಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಕಡಿಮೆ ಅವಧಿಯಲ್ಲಿ ಜನರಲ್ ತಿಮ್ಮಯ್ಯ ಜಲಸಾಹಸ ಅಕಾಡೆಮಿ ವತಿಯಿಂದ ಕುಂದವಾಡ ಕೆರೆಯಲ್ಲಿ ರಾಫ್ಟಿಂಗ್ ಹಾಗೂ ಕಾಯ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಇದಕ್ಕೆ ಯುವಕರಿಂದ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಇದೇ ದಿನಾಂಕ 8ವರೆಗೆ ಕೊಂಡಜ್ಜಿ ಕೆರೆಯಲ್ಲಿ ರಾಫ್ಟಿಂಗ್ ವಿಸ್ತರಿಸಲಾಗಿದೆ.
ಜಿಲ್ಲೆಯ ಯುವಕರು ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ಭಾಗವಹಿಸಬಹುದು. ಜ.7ರಂದು ಕೊಂಡಜ್ಜಿ ಕೆರೆಯಲ್ಲಿ ರಾಫ್ಟಿಂಗ್ ಹಾಗೂ ಕಾಯ್ಕಿಂಗ್ ಇರಲಿದೆ. ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಹೇಳಿದರು.
ಉತ್ತಮ ಸ್ಪಂದನೆ: ಕುಂದವಾಡ ಕೆರೆಯಲ್ಲಿ ಆಯೋಜಿಸಲಾಗಿರುವ ರಾಫ್ಟಿಂಗ್ ಹಾಗೂ ಕಾಯ್ಕಿಂಗ್ನಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರಿಂದ ಉತ್ತಮ ಸ್ಪಂದನೆ ದೊರೆತಿದೆ. ವಿವಿಧ ಕಾಲೇಜುಗಳಿಂದ ಆಗಮಿಸಿದ ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಸೋಮವಾರ ಮುಂಜಾನೆಯಿಂದಲೇ ತಂಡ ತಂಡವಾಗಿ ಪಾಲ್ಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಲೈಫ್ ಜಾಕೆಟ್ ತೊಡುವುದು ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗು ತ್ತಿದೆ. 10 ಸಿಂಗಲ್ ಸೀಟರ್ ಕಾಯ್ಕಿಂಗ್ ಬೋಟ್, 7 ಡಬಲ್ ಸೀಟರ್ ಕಾಯ್ಕಿಂಗ್ ಬೋಟ್, 2 ರಾಫ್ಟ್ ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಲೈಫ್ ಜಾಕೆಟ್ಗಳನ್ನು ಇರಿಸಲಾಗಿದೆ. 7 ಜನ ತರಬೇತುದಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ ಎಂದು ಜಲಸಾಹಸ ತರಬೇತುದಾರ ನಾನಾರಾವ್ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಾದ ವಿಜೇತಾ ಹಾಗೂ ಸಂಗೀತಾ ಅವರು ಕಾಯ್ಕಿಂಗ್ ಕ್ರೀಡೆ ಕುರಿತಂತೆ ಸಂತಸ ವ್ಯಕ್ತ ಪಡಿಸಿದರು.