ಪಾರಂಪರಿಕ ವೈದ್ಯ ಪದ್ಧತಿ ಮನೆ ಮನೆಗೂ ತಲುಪಲಿ

ಪಾರಂಪರಿಕ ವೈದ್ಯ ಪದ್ಧತಿ ಮನೆ ಮನೆಗೂ ತಲುಪಲಿ

ಪಾರಂಪರಿಕ ವೈದ್ಯ ಪರಿಷತ್‌ನ 25ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಹಾಂತ ರುದ್ರೇಶ್ವರ ಶ್ರೀ

ದಾವಣಗೆರೆ, ಜ. 6- ಅನುಭವ ಆಧರಿಸಿ ಚಿಕಿತ್ಸೆ ನೀಡುವಂಥ ಪಾರಂಪರಿಕ ವೈದ್ಯ ಪದ್ಧತಿ ಮನೆ ಮನೆಗೂ ತಲುಪಬೇಕಿದೆ ಎಂದು ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ ಹೇಳಿದರು.

ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ನಗರದ ರೋಟರಿ ಬಾಲ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಾರಂಪರಿಕ ವೈದ್ಯ ಪರಿಷತ್ 25ನೇ ಸಂಸ್ಥಾಪನಾ ದಿನಾ ಚರಣೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇತರೆ ವೈದ್ಯಕೀಯ ಪದ್ಧತಿಗಳಿಂದ ಗುಣಪಡಿಸಲಾಗದ ಕಾಯಿಲೆಗಳನ್ನು ಪಾರಂಪರಿಕ ವೈದ್ಯ ಪದ್ಧತಿ ಮೂಲಕ ವಾಸಿ ಮಾಡ ಬ ಹುದಾಗಿದೆ ಎಂದು ಹೇಳಿದರು.

ಅಪರೂಪದ ಸಸ್ಯ ಪ್ರಬೇಧಗಳಲ್ಲಿ ಅನೇಕ ರೀತಿಯ ಔಷಧೀಯ ಗುಣಗಳಿರುತ್ತವೆ. ಈ ಹಿಂದೆ ನಮ್ಮ ಪೂರ್ವಾ ಶ್ರಮದಲ್ಲಿ ಚರ್ಮರೋಗಕ್ಕೆ, ಮೂಲ ವ್ಯಾಧಿಗೆ, ಬಂಜೆತನಕ್ಕೆ ಸೊಪ್ಪಿನಿಂದ ಮಾಡಿದ ಔಷಧ ಕೊಡುತ್ತಿದ್ದರು. ಕಾಯಿಲೆ ವಾಸಿಯಾಗುತ್ತಿತ್ತು. ಬಂಜೆತನಕ್ಕೆ ನೀಡುವ ಔಷಧಿಯಿಂದ ವಿವಾಹವಾಗಿ 25 ವರ್ಷವಾದವರಿಗೂ ಮಕ್ಕಳಾದಂತಹ ಉದಾಹರಣೆಗಳಿದ್ದವು ಎಂದು ಹೇಳಿದರು.

ನೀರು ಕಡಿಮೆ ಕುಡಿಯುವುದರಿಂದ ಮೂತ್ರಕೋಶದಲ್ಲಿ ಕಲ್ಲುಗಳಾಗುತ್ತಿವೆ. ಬಾಳೆ ದಿಂಡಿನ ರಸಕ್ಕೆ ಕೆಂಪು ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಕಲ್ಲುಗಳಾ ಗುತ್ತಿರಲಿಲ್ಲ. ಈ ರೀತಿ ಕುಡಿಯುವ ಅಭ್ಯಾಸ ಹಿಂದಿನ ಜನರಲ್ಲಿತ್ತು. ಆದರೆ ಇಂದು ಕಲ್ಲುಗಳಾದರೆ ಪರೀಕ್ಷೆಗೆಂದೇ ಹೆಚ್ಚಿನ ಹಣ ತೆರಬೇಕಾದ ಸ್ಥಿತಿ ಇದೆ ಎಂದರು.

ಪಾರಂಪರಿಕ ವೈದ್ಯಕೀಯ ಪದ್ಧತಿಯಿಂದ ಜನರು ವಿಮುಖರಾಗುತ್ತಿದ್ದಾರೆ. ಹಣ ಕೊಟ್ಟು ಸರದಿಯಲ್ಲಿ ನಿಂತು ಕಾಯಿಲೆಗೆ ಚಿಕಿತ್ಸೆ, ಔಷಧ ಪಡೆಯುವ ವ್ಯವಸ್ಥೆ ಹೆಚ್ಚಾಗಿದೆ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಅತಿ ಕಡಿಮೆ ವೆಚ್ಚದಲ್ಲಿ ಸಿಗುವ ಪಾರಂಪರಿಕ ಔಷಧಿ ಪದ್ಧತಿಯಿಂದ ಜನರು ಆರ್ಥಿಕ ಹೊರೆಯಿಂದ ದೂರವಾಗಬಹುದು. ಈ ಹಿನ್ನೆಲೆಯಲ್ಲಿ ಪಾರಂಪರಿಕ ವೈದ್ಯ ಪರಿಷತ್ ಸದಸ್ಯರು ಮನೆ ಮನೆಗೂ ತೆರಳಿ ಸುಲಭ ಮನೆ ಔಷಧಿಗಳ ಬಗ್ಗೆ ತಿಳಿ ಹೇಳುವ ಕೆಲಸ ಮಾಡಬೇಕು. ಪಾರಂಪರಿಕ ವೈದ್ಯ ಪರಿಷತ್ 25 ವರ್ಷದ ಯುವಕನಂತಿದೆ. ಮುಂದಿನ ದಿನಗಳಲ್ಲಿ ಇದನ್ನು ಹೆಮ್ಮರವನ್ನಾಗಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಮೈಸೂರಿನ  ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಸತ್ಯನಾರಾಯಣ ಭಟ್ ಮಾತನಾಡಿ, ಮೌಖಿಕ ಪರಂಪರೆ, ದಾಖಲೆ ಹೊಂದದ ಸಂಗತಿಗಳು ಜನರ ಮನದಲ್ಲಿ ಉಳಿದು ಸಮಾಜದ ಒಳಿತಿಗೆ ಬಳಕೆಯಾಗಬೇಕು ಇದು ಪಾರಂಪರಿಕ ವೈದ್ಯ ಪರಿಷತ್ ಉದ್ದೇಶವಾಗಿದೆ ಎಂದರು.

ಪಾರಂಪರಿಕ ವೈದ್ಯ ಪರಿಷತ್ ದಾವಣಗೆರೆ ಘಟಕದ ಅಧ್ಯಕ್ಷ ವೈದ್ಯೆ ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.  ಪಾ.ವೈ.ಪ. ಕರ್ನಾಟಕ ಅಧ್ಯಕ್ಷ ವೈದ್ಯ ಟಿ.ಮಹದೇವಯ್ಯ, ಕೋಶಾಧ್ಯಕ್ಷ ಶಿವಾನಂದ ಜಂಗಿನಮಠ, ಸಹಕಾರ್ಯದರ್ಶಿ ಉಮಾದೇವಿ, ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಣ್ಣ, ಜಿಲ್ಲಾ ಸಂಚಾಲಕರಾದ ಕೆ.ಎಂ. ಪುಷ್ಪಲತ, ರಹಮತ್ ವುಲ್ಲಾ ಇತರರು ಉಪಸ್ಥಿತರಿದ್ದರು. ಲತಾ, ಪುಷ್ಪಲತಾ, ಮಮತಾ ಪ್ರಾರ್ಥಿಸಿದರು. ಶಿವಮೂರ್ತಿ ಸ್ವಾಮಿ ನಿರೂಪಿಸಿದರು.

error: Content is protected !!