ಸಂವಿಧಾನದ ಉಳಿವು, ರಕ್ಷಣೆ ನಮ್ಮೆಲ್ಲರ ಕರ್ತವ್ಯ

ಸಂವಿಧಾನದ ಉಳಿವು, ರಕ್ಷಣೆ ನಮ್ಮೆಲ್ಲರ ಕರ್ತವ್ಯ

ಯುವ ಜನತೆ ದೇಶಕ್ಕೆ ಸಂಪತ್ತಾಗಬೇಕು, ಹೊರೆಯಾಗಬಾರದು: ಸಿಎಂ ಸಿದ್ದರಾಮಯ್ಯ

ದಾವಣಗೆರೆ, ಜ.5- ಯುವ ಜನತೆ ದೇಶಕ್ಕೆ ಸಂಪತ್ತಾಗಬೇಕೇ ಹೊರತು, ದೇಶಕ್ಕೆ ಹೊರೆಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯುವ ಜನತೆಗೆ ಕರೆ ನೀಡಿದರು. 

ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಬಾಪೂಜಿ ಎಂಬಿಎ ಮೈದಾನದಲ್ಲಿ ಆಯೋಜಿಸಲಾಗಿದ ರಾಜ್ಯ ಮಟ್ಟದ ಯುವ ಜನೋತ್ಸವವನ್ನು ನಗಾರಿ ಭಾರಿಸಿ ಹಾಗೂ ಹೊಂಬಾಳೆ ಬಿಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.  

ದೇಶ ನನಗೇನು ಕೊಟ್ಟಿದೆ ಎಂಬುದಕ್ಕಿಂತ ದೇಶಕ್ಕಾಗಿ ನಾನು ಏನು ಮಾಡಿತ್ತಿದ್ದೇನೆ ಎಂದು ಯುವಕರು ಅರಿತುಕೊಳ್ಳಬೇಕು. ಯುವಜನರು ದೇಶವನ್ನು ಮುಂದೆ ಕೊಂಡೊಯ್ಯಲು ಹಾಗೂ ಬದಲಾವಣೆ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಸ್ವಾಮಿ ವಿವೇಕಾನಂದರು ‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂದು ಯುವ ಜನರಿಗೆ ಕರೆ ನೀಡಿದರು. ಯುವಕರಿಗೆ ಜೀವನದಲ್ಲಿ ಗುರಿ ಇರಬೇಕು. ಇದನ್ನು ಸಾಧಿಸಲು ಪರಿಶ್ರಮ ಪಡಬೇಕು. ಆಗ ಮಾತ್ರ ಗುರಿ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಅನೇಕ ಶಕ್ತಿಗಳು ಧರ್ಮ ಹಾಗೂ ಜಾತಿ ಹೆಸರಿನಲ್ಲಿ ಶಾಂತಿಗೆ ಭಂಗ ತರುವ ಕೆಲಸ ಮಾಡುತ್ತಿವೆ. ಯಾವ ಧರ್ಮಕ್ಕೂ ವಿಶೇಷ ಸ್ಥಾನಮಾನ ಇಲ್ಲ, ಎಲ್ಲರಿಗೂ ಸಂವಿಧಾನ ಒಂದೇ, ಆದ್ದರಿಂದ ಸಂವಿಧಾನ ರಕ್ಷಿಸುವ ಕೆಲಸವನ್ನು ಯುವಕರು ಮಾಡಬೇಕಾಗಿದೆ ಎಂದು  ಸಿದ್ದರಾಮಯ್ಯ ಕರೆ ನೀಡಿದರು. 

ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ಇಂದು ಎಲ್ಲರೂ ಶಿಕ್ಷಣ ಪಡೆದು ಉದ್ಯೋಗ ಗಳಿಸಿ, ಗೌರವ ಮತ್ತು ಸಮಾನತೆ ಯಿಂದ ಬಾಳಲು ಸಾಧ್ಯವಾಗಿದೆ. ಸಂವಿಧಾನ ಇದ್ದುದರಿಂದಲೇ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಸಂವಿಧಾನ ರಕ್ಷಿಸಿ, ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಪ್ರಜಾಪ್ರಭುತ್ವ ಒಪ್ಪಿ ದೇಶದಲ್ಲಿ ಆಡಳಿತ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ, ಎಲ್ಲಾ ವ್ಯಕ್ತಿಗಳಿಗೆ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಸಮಾನತೆ ದೊರಕಬೇಕು ಎಂಬುವುದು ಡಾ.ಅಂಬೇಡ್ಕರ್ ಆಶಯವಾಗಿತ್ತು. ಸಂವಿಧಾನದ ಈ ಸಾರ ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ಇದರ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಶಾಲೆಯಲ್ಲಿ ಸಂವಿಧಾನ ಓದು ಕಾರ್ಯಕ್ರಮ ಜಾರಿ ಮಾಡಿದೆ. ಮಕ್ಕಳಿಗೆ ಸಂವಿಧಾನದ ಪೀಠಿಕೆ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತಿದೆ. ಅಂಬೇಡ್ಕರ್ ಅವರ ಆರ್ಥಿಕ ಸಮಾನತೆಯ ಆಶಯವನ್ನು ಈಡೇರಿಸುವ ದೃಷ್ಟಿಯಿಂದ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ ಎಂದು ಹೇಳಿದರು.

ರಾಜ್ಯದಲ್ಲಿ 1.62 ಲಕ್ಷ ಯುವಕ ಯುವತಿಯರಿಗೆ ಯುವನಿಧಿ ಯೋಜನೆಯಡಿ ರೂ.216 ಕೋಟಿ ನಿರುದ್ಯೋಗ ಭತ್ಯೆಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಇದರೊಂದಿಗೆ ಯುವ ಜನರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

ಇದೇ ವೇಳೆ ಯುವ ನಿಧಿ ಯೋಜನೆ ಉದ್ಘಾಟಿಸಲಾಯಿತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ರಾಜ್ಯ ಎನ್.ಎಸ್‌.ಎಸ್ ಘಟಕದ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಸವರಾಜು ವಿ ಶಿವಗಂಗಾ, ಬಿ.ದೇವೇಂದ್ರಪ್ಪ, ಬಿ.ಪಿ.ಹರೀಶ್, ಶಾಂತನಗೌಡ.ಡಿ.ಜಿ. ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಮಹಾನಗರ ಪಾಲಿಕೆ ಮೇಯರ್ ಚಮನ್ ಸಾಬ್.ಕೆ, ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ್ ನಾಯ್ಕ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ರಂದೀಪ್.ಡಿ, ಪೊಲೀಸ್ ಉಪ ಮಹಾನಿರೀಕ್ಷಕ ರಮೇಶ್.ಬಿ, ಜಿಲ್ಲಾ ಪಂಚಾಯಿತಿ ಸಿಇಓ ಸುರೇಶ್ ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಮಾಜಿ ಸಚಿವ ಹೆಚ್.ಆಂಜನೇಯ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಸ್ವಾಗತಿಸಿದರು. ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ. ವಂದಿಸಿದರು.

error: Content is protected !!