ಕಾಂತರಾಜ್ ವರದಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ

ಕಾಂತರಾಜ್ ವರದಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ

ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿ

ದಾವಣಗೆರೆಯಲ್ಲಿ ನಡೆಯುತ್ತಿರುವ ಕನಕ ಜಯಂತಿ ಕಾರ್ಯಕ್ರಮ ಜಿಲ್ಲಾ ಮಟ್ಟದ್ದಾಗಿದೆ. ಆದರೆ ಇನ್ನೂ ಚನ್ನಾಗಿ ಕಾರ್ಯಕ್ರಮ ರೂಪಿತವಾಗಬೇಕಿತ್ತು. ಜಿಲ್ಲೆಯಲ್ಲಿ ಹೆಚ್ಚು ಜನ ಸೇರಬೇಕಾಗಿತ್ತು. ಸೇರದಿದ್ದರೆ ಶಕ್ತಿ, ಒಗ್ಗಟ್ಟು ಇಲ್ಲ ಎಂಬುದು ಗೊತ್ತಾಗುತ್ತದೆ. ಏನೇ ಭಿನ್ನಾಭಿಪ್ರಾಯವಿದ್ದರೂ ಅವೆಲ್ಲವನ್ನು ಮರೆತು ಒಟ್ಟಾಗಿ ಸೇರಿ ಕನಕ ಜಯಂತಿ ಆಚರಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ದಾವಣಗೆರೆ, ಜ. 5- ನಾನು ಜಾತಿ ಜನಗಣತಿ ಪರವಾಗಿದ್ದು, ಕಾಂತರಾಜ್ ವರದಿಯನ್ನು ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ಅನುಷ್ಠಾನಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ದಾವಣಗೆರೆ ಜಿಲ್ಲಾ ಕುರುಬ ಸಮಾಜ ಹಾಗೂ ಸಿದ್ಧರಾಮಯ್ಯ ಅವರ ಅಭಿಮಾನಿಗಳ ಬಳಗದ ವತಿಯಿಂದ ಜಿಲ್ಲಾ ಮಟ್ಟದ 537 ನೇ ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನಕದಾಸರು ಯಾವುದೇ ಒಂದು ಜಾತಿಗೆ ಸೀಮಿತವಾಗಿ ಇದ್ದಂತವರಲ್ಲ.ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದರು. ಆದರೆ  ಅವರು ಸಂತನಾದ ಮೇಲೆ ಜಾತಿ, ಧರ್ಮ, ಭಾಷೆ, ಪ್ರದೇಶ  ಎಲ್ಲವನ್ನೂ ಮೀರಿ ಸಮಾಜದಲ್ಲಿ ಮಾನವ ಕಲ್ಯಾಣಕ್ಕಾಗಿ ದುಡಿದಂತವರು. ಅವರೊಬ್ಬ ಸಂತರು, ಕವಿ, ಬರಹಗಾರರು, ದಾರ್ಶನಿಕರಾಗಿದ್ದಂತವರು, ಸಮಾಜ ಸುಧಾರಕರಾಗಿದ್ದಂತವರು, ದಾಸಶ್ರೇಷ್ಠರಾಗಿದ್ದಂತವರು ಎಂದರು.

ಕನ್ನಡ ಸಾಹಿತ್ಯದಲ್ಲಿ ಎರಡು ಮೈಲಿಗಲ್ಲುಗಳನ್ನು ನೋಡಲಿಕ್ಕೆ ಸಾಧ್ಯವಿದೆ. ಒಂದು ಶರಣ ಸಾಹಿತ್ಯ ಮತ್ತು ಇನ್ನೊಂದು ದಾಸ ಸಾಹಿತ್ಯ. ಶರಣ ಸಾಹಿತ್ಯದಲ್ಲಿ ಬಹಳ ಪ್ರಮುಖವಾಗಿದ್ದವರು ಬಸವಣ್ಣನವರು, ದಾಸ ಸಾಹಿತ್ಯದಲ್ಲಿ ಶ್ರೇಷ್ಠರಾಗಿದ್ದವರು ಕನಕದಾಸರು. ಎಲ್ಲಾ ಸಂತರು, ಶರಣರು ಮನುಕುಲದ ಉದ್ಧಾರ, ಮಾನವನ ವಿಕಾಸಕ್ಕೆ, ಮಾನವ ಸಮಾಜ ನಿರ್ಮಾಣಕ್ಕೆ ಪ್ರಯತ್ನ ಮಾಡಿದವರು. ನಮ್ಮಲ್ಲಿ ಭಾಷೆ, ಜಾತಿ, ಸಂಸ್ಕೃತಿ, ಪ್ರಾಂತ್ಯ ತಾರತಮ್ಯವಿದೆ. ಇದನ್ನು ಹೋಗಲಾಡಿಸಲು ಬುದ್ಧ, ಬಸವ, ಅಂಬೇಡ್ಕರ್, ನಾರಾಯಣಗುರು, ಮೊಹಮದ್ ಪೈಗಂಬರ್, ಗಾಂಧೀಜಿ ಸೇರಿದಂತೆ ಎಲ್ಲಾ ಸಂತರು, ಶರಣರು ಸಮ ಸಮಾಜ ನಿರ್ಮಾಣದ ಆಶಯ ಹೊಂದಿದ್ದರು ಎಂದು ಹೇಳಿದರು.

ಅಂಬೇಡ್ಕರ್, ನಾರಾಯಣ ಗುರು, ಕನಕದಾಸರು ಕೂಡ ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆಯ ಕಾರಣಕ್ಕಾಗಿ ಅವಮಾನಿತ ರಾಗಿದ್ದರು. ಯಾರೂ ಕೂಡ ಹುಟ್ಟಿನಿಂದ ದಡ್ಡರಾಗಿರಲು ಸಾಧ್ಯವಿಲ್ಲ. ವ್ಯಾಸರು ಮಹಾಭಾರತವನ್ನು, ವಾಲ್ಮೀಕಿ ರಾಮಾ ಯಣನ್ನು, ಕಾಳಿದಾಸ ಶಾಕುಂತಲೆ ನಾಟಕವನ್ನು ಬರೆದಿದ್ದೇ ಹುಟ್ಟಿನಿಂದ ಯಾರೂ ದಡ್ಡರಲ್ಲ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದರು.

ಅಂಬೇಡ್ಕರ್ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದರಿಂದಲೇ ನರೇಂದ್ರ ಮೋದಿ ಪ್ರಧಾನಿಯಾಗಲು, ನಾನು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಬಡವರು, ಶೋಷಿತರು, ದಲಿತರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.

ಒಬ್ಬರಿಗೆ ಒಂದೇ ಮತ. ಎಲ್ಲಾ ಜಾತಿ, ಧರ್ಮ, ಅಂತಸ್ತಿನವರಿಗೂ ಒಂದೇ ಮತ. ಈ ಸಮಾನತೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬರಬೇಕಾಗಿದೆ. ಆಗ ಮಾತ್ರ ಸಮಾನತೆಯತ್ತ ಮುನ್ನಡೆಯಲು ಸಾಧ್ಯ ಎಂದರು.

ಶೋಷಿತ ಸಮುದಾಯಗಳು ಜಾತಿ ಸಮ್ಮೇಳನಗಳನ್ನು ಮಾಡುವುದು ತಪ್ಪಲ್ಲ. ಆದರೆ ಮುಂದುವರೆದ ಜಾತಿಗಳು ಜಾತಿ ಹೆಸರಿನಲ್ಲಿ ಸಮ್ಮೇಳನ ನಡೆಸುವುದು ಸಾಮಾಜಿಕವಾಗಿ ತಪ್ಪಾಗುತ್ತದೆ. ಸಂಘಟನೆ ಮತ್ತು ಒಗ್ಗಟ್ಟು ಇಲ್ಲದಿದ್ದರೆ ಶೋಷಿತ ವರ್ಗಕ್ಕೆ ಶಕ್ತಿ ಬರುವುದಿಲ್ಲ ಎಂದು ಹೇಳಿದರು.

ಹಿರಿಯ ನ್ಯಾಯವಾದಿ ಹೆಚ್.ಕಾಂತರಾಜ್ ಮಾತನಾಡಿ, ಎಲ್ಲಾ ಜಾತಿ, ಧರ್ಮ ಅಥವಾ ಗಂಡು-ಹೆಣ್ಣು ಸಮಾನರು ಎಂಬ ಸಂವಿಧಾನದ ಪರಿಕಲ್ಪನೆಯನ್ನು ಅಂದೇ ಕನಕದಾಸರು ಪ್ರತಿಪಾದಿಸಿದ್ದರು ಎಂದು ಹೇಳಿದರು.

ಸಾಮಾಜಿಕ ನ್ಯಾಯ ಎಂದರೆ, ಈ ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರವೇ ಎಲ್ಲರ ಆಸ್ತಿಯಂತೆ. ಈ ಆಸ್ತಿ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕೆಂಬುದೇ ಬಸವಣ್ಣ, ಕನಕದಾಸರ ಪರಿಕಲ್ಪನೆಯಾಗಿತ್ತು. ಕನಕದಾಸರ ಆದರ್ಶ, ಮೌಲ್ಯಗಳನ್ನು ಪ್ರತಿಯೊಬ್ಬರೂ ಸಹ ಅಳವಡಿಸಿಕೊಂಡಾಗ ಮಾತ್ರ ಸಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, 15 ನೇ ಶತಮಾನದಲ್ಲಿ ಜನಿಸಿದ ಶ್ರೇಷ್ಠ ದಾರ್ಶನಿಕ ಕನಕದಾಸರು ಜಾತಿ ಪದ್ಧತಿ ನಿರ್ಮೂಲನೆ ಮಾಡಬೇಕೆಂದು ಅಂದೇ ತಮ್ಮ ಕೀರ್ತನೆಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು ಎಂದು ಹೇಳಿದರು.

ಕನಕ ದಾಸರು ದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಸಮಾಜದಲ್ಲಿ ಅಂಕು ಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದುವ ಪ್ರಯತ್ನ ಮಾಡಿದ್ದಾರೆಂದರು.

ಕುರುಬ ಸಮಾಜದ ಮುಖಂಡರೂ, ಮಾಜಿ ಮೇಯರ್ ಹೆಚ್.ಬಿ. ಗೋಣೆಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ, ಹದಡಿ ಚಂದ್ರಗಿರಿ ಮಠದ ಸದ್ಗುರು ಪರಮಹಂಸ ಮುರುಳೀಧರ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮುಸ್ಲಿಂ ಧರ್ಮಗುರು ಮೌಲಾನ ಬಿ.ಎ. ಇಬ್ರಾಹಿಂ ಸಖಾಫಿ ಮಾತನಾಡಿದರು. ಇದೇ ವೇಳೆ ಬಿಎಸ್‌ಎಫ್‌ನ ದಕ್ಷಿಣ ಭಾರತದ ಮೊದಲ ಮಹಿಳಾ ಕಮಾಂಡೆಂಟ್ ಡಾ. ಎಂ.ಎಲ್. ಮೃದುಲ ಅವರನ್ನು ಗೌರವಿಸಲಾಯಿತು.

ಸಚಿವ ಭೈರತಿ ಸುರೇಶ್, ಸರ್ಕಾರದ ಗ್ಯಾರಂಟಿ ಯೋಜನೆಯ ರಾಜ್ಯಾಧ್ಯಕ್ಷ ಹೆಚ್.ಎಂ. ರೇವಣ್ಣ, ಅಹಿಂದ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿದರು.

ಡಾ. ಉದಯಶಂಕರ್ ಒಡೆಯರ್, ಶಾಸಕರಾದ ಕೆ.ಎಸ್. ಬಸವಂತಪ್ಪ, ಲತಾ ಮಲ್ಲಿಕಾರ್ಜುನ್, ಡಿ.ಜಿ. ಶಾಂತನಗೌಡ, ಬಸವರಾಜ ಶಿವಣ್ಣನವರ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಶಾಸಕರಾದ ಎಸ್. ರಾಮಪ್ಪ, ಮಹಿಮಾ ಜೆ.ಪಟೇಲ್, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಅನಂತನಾಯ್ಕ, ಬಿ. ವೀರಣ್ಣ, ಡಿ.ಬಸವರಾಜ್, ಎಲ್.ಎಂ. ಹನುಮಂತಪ್ಪ, ಬಿ.ಹೆಚ್. ವೀರಭದ್ರಪ್ಪ, ಪ್ರಸನ್ನಕುಮಾರ್, ಇಟ್ಟಿಗುಡಿ ಮಂಜುನಾಥ, ಫುಟ್ಬಾಲ್ ಗಿರೀಶ, ಪುರಂದರ ಲೋಕಿಕೆರೆ, ಹಾಲೇಕಲ್ ಎಸ್.ಟಿ. ಅರವಿಂದ್, ಲಿಂಗರಾಜ್, ಶಿವಣ್ಣ ಮಾಸ್ತರ್, ನಿಕೇತ್ ರಾಜ್ ಮೌರ್ಯ , ಮರಿಯೋಜಿರಾವ್ ಮತ್ತಿತರರು ಭಾಗವಹಿಸಿದ್ದರು. 

error: Content is protected !!