ದಾವಣಗೆರೆ, ಜ. 3- ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಕ್ರೀಡೆಗಳ ಮೂಲಕ ಶಾಲಾ ಬಾಲಕಿಯರ ಸಬಲೀಕರಣಕ್ಕಾಗಿ ಖೇಲೋ ಇಂಡಿಯಾ ಅಡಿಯಲ್ಲಿ ನಗರದ ಲೂರ್ಡ್ಸ್ ಬಾಯ್ಸ್ ಸ್ಕೂಲ್ ಆವರಣದಲ್ಲಿ ನಾಳೆ ದಿನಾಂಕ 4 ರಿಂದ ಒಂದು ತಿಂಗಳ ಕಾಲ ರಾಜ್ಯಮಟ್ಟದ ಬಾಲಕಿಯರ ಫುಟ್ಪಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
13 ವರ್ಷದೊಳಗಿನ ಬಾಲಕೀಯರ ವಿಭಾಗದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 200 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ.
ಕ್ರೀಡಾಪಟುಗಳಿಗೆ ವಸತಿ, ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗುವುದು. ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಥಮ 50 ಸಾವಿರ, ದ್ವಿತೀಯ 30 ಸಾವಿರ, ತೃತೀಯ ಪಾರಿತೋಷಕವನ್ನು ಬಹುಮಾನವಾಗಿ ಕೊಡಲಿದ್ದಾರೆ.
ಅಂದು ಮಧ್ಯಾಹ್ನ 1 ಕ್ಕೆ ಪಂದ್ಯಾವಳಿಗಳ ಉದ್ಘಾಟನೆಯನ್ನು ಎಸ್.ಎಸ್. ಕೇರ್ ಟ್ರಸ್ಟ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್ ನೆರವೇರಿಸಲಿದ್ದಾರೆ. ದಾವಣಗೆರೆ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್ಪಿ ಉಮಾ ಪ್ರಶಾಂತ್, ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರು, ಪಾಲಿಕೆ ಅಧಿಕಾರಿಗಳು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶರಾವ್ ಜಾಧವ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ್ ಹುಲ್ಮನಿ, ಸುಧಾ ಇಟ್ಟಿಗುಡಿ ಮಂಜುನಾಥ್, ಆಶಾ ಉಮೇಶ್, ಮೀನಾಕ್ಷಿ ಜಗದೀಶ್, ಮುಖಂಡರಾದ ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್ ಮತ್ತಿತರರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎ. ಮುಜಾಹೀದ್ ಖಾನ್, ಎಸ್.ಕೆ. ಚಂದ್ರಶೇಖರ್, ವನಜಾಕ್ಷಿ, ಸೌರಭ್ ಐಗೂರು, ಯುವರಾಜ್, ವಂದನ, ನಿಸರ್ಗ ಮತ್ತಿತರರಿದ್ದರು.