ಗುಣಮಟ್ಟದ ಶಿಕ್ಷಣದಿಂದ ಸದೃಢ ದೇಶ ನಿರ್ಮಾಣ ಸಾಧ್ಯ

ಗುಣಮಟ್ಟದ ಶಿಕ್ಷಣದಿಂದ ಸದೃಢ ದೇಶ ನಿರ್ಮಾಣ ಸಾಧ್ಯ

ಸೋಮೇಶ್ವರೋತ್ಸವ ಸಮಾರಂಭ ಉದ್ಘಾಟಿಸಿದ ಸಾಹಿತಿ ಅಶೋಕ್ ಹಂಚಲಿ

ದಾವಣಗೆರೆ, ಜ.3- ಭವ್ಯ ಭಾರತ ನಿರ್ಮಾಣಕ್ಕಾಗಿ ತಾಯಿಯಲ್ಲಿ ಗುರುವಿನ ಭಾವ ಹಾಗೂ ಗುರುವಿನಲ್ಲಿ ತಾಯಿಯ ಭಾವ ಇರಬೇಕು ಎಂದು ಬಸವನ ಬಾಗೇವಾಡಿಯ ಸಾಹಿತಿ ಅಶೋಕ್ ಹಂಚಲಿ ಹೇಳಿದರು.

ನಗರದ ಶ್ರೀ ಸೋಮೇಶ್ವರ ವಿದ್ಯಾಲಯ ದಿಂದ  ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಸೋಮೇಶ್ವರೋತ್ಸವ-2025 ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸುಂದರ ಸಮಾಜ ಹಾಗೂ ಸದೃಢ ದೇಶ ನಿರ್ಮಾಣ ಸಾಧ್ಯ ಎಂದು ಹೇಳಿದರು.

 ಪಾಲಕರು ಮಕ್ಕಳಿಗೆ ಅಂಕ ಗಳಿಸಲು ಒತ್ತಡ ಹೇರಿ ಅವರನ್ನು ಕುಬ್ಜರನ್ನಾಗಿಸದೆ, ಸಾಂಸ್ಕೃತಿಕ ಚಿಂತನೆಗಳು, ಮೌಲ್ಯಗಳನ್ನು ತುಂಬುವ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ದೇಶಪ್ರೇಮ, ಮಾತೃಭಕ್ತಿ, ಸಂಸ್ಕೃತಿ, ಮೌಲ್ಯಗಳನ್ನು ನೀಡದ ಶಿಕ್ಷಣಕ್ಕೆ ಅರ್ಥವಿಲ್ಲ ಎಂದು ಪ್ರತಿಪಾದಿಸಿದ ಅವರು, ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಮಾರಾಟದ ಸರಕಾಗಿದೆ. ಗುಣಮಟ್ಟದ ಶಿಕ್ಷಣ ಮರೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸೋಮೇಶ್ವರ ವಿದ್ಯಾಲಯವು ವಿದ್ಯೆಯ ಜೊತೆ ಸಂಸ್ಕೃತಿ, ಸಂಸ್ಕಾರ, ಮೌಲ್ಯಗಳನ್ನು ಧಾರೆ ಎರೆಯುತ್ತಾ ದೇಶಕ್ಕೆ ಸದೃಢ ಪ್ರಜೆಗಳನ್ನು ಕೊಡುಗೆಯಾಗಿ ನೀಡುತ್ತಿರುವುದು ಶ್ಲ್ಯಾಘನೀಯ. ಈ ಸಂಸ್ಥೆ ಮುಂದಿನ ದಿನಗಳಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಣೇಬೆನ್ನೂರು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಮಾತನಾಡಿ, ಇಂದು ನಾವು ಎಷ್ಟು ಹಣವನ್ನಾದರೂ ಗಳಿಸಬಹುದು. ಆದರೆ ವಿದ್ಯೆ ಸಂಪಾದಿಸುವುದು ಸುಲಭವಲ್ಲ. ಸೋಮೇಶ್ವರ ವಿದ್ಯಾಲಯವು ಬಡ ಹಾಗೂ ಮಧ್ಯಮ ವರ್ಗದವರಿಗೆ ಅತಿ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.

ಬಡತನದಿಂದಲೇ ಆರಂಭವಾದ ಈ ವಿದ್ಯಾಸಂಸ್ಥೆ ಇಂದು ಎತ್ತರಕ್ಕೆ ಬೆಳೆದಿದೆ. ಮುಂದಿನ ವರ್ಷ ವಿಜ್ಞಾನ ಪಿಯು ಕಾಲೇಜು ಆರಂಭವಾಗಲಿದೆ. ಅಷ್ಟೇ ಸಾಲದು ದಾವಣ ಗೆರೆಯಲ್ಲಿ ಮೆಡಿಕಲ್ ಕಾಲೇಜು ಆರಂಭಿ ಸುವಷ್ಟು ಈ ಸಂಸ್ಥೆ ಬೆಳೆಯಲಿ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಮಹಾಲಿಂಗಪ್ಪ ಯಾದವ್, ಪಿಜಿಯೋಥೆರಪಿಸ್ಟ್‌ ಡಾ.ಬಸವರಾಜ್ ಶಿವಪೂಜೆ ಅವರಿಗೆ ಸೋಮೇಶ್ವರ ಸಿರಿ ಗೌರವ ಪ್ರದಾನ ಮಾಡಲಾಯಿತು.

ಹುಬ್ಬಳ್ಳಿ ಚಿನ್ಮಯ ಮಿಷನ್‌ನ ಶ್ರೀ ಸ್ವಾಮಿ ಕೃತಾತ್ಮಾನಂದರವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಶ್ರೀ ಸೋಮೇಶ್ವರ ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕ ಪಿ.ಎನ್. ಪರಮೇಶ್ವರಪ್ಪ, ಅಧ್ಯಕ್ಷ ಹೆಚ್.ಆರ್. ಅಶೋಕ ರೆಡ್ಡಿ, ಸಂಸ್ಥೆಯ ಸಂಸ್ಥಾಪಕ ಕೆ.ಎಂ. ಸುರೇಶ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಶಿಕ್ಷಕರುಗಳಾದ ವೀಣಾ, ಪ್ರಭಾವತಿ, ಹರೀಶ್ ಬಾಬು, ಪ್ರಕಾಶ್, ಡಾ.ಶ್ವೇತಾ, ಚಂದ್ರಕಲಾ ಇತರರು ಉಪಸ್ಥಿತರಿದ್ದರು. ಕು.ದೀಕ್ಷಾ ಪ್ರಾಸ್ತಾವಿಕವಾಗಿ ಮಾತನಾಡಿದರು.   

error: Content is protected !!