ಎಸ್ಸೆಸ್ ಆರೋಗ್ಯ ವಿಚಾರಿಸಿದ ತರಳಬಾಳು ಜಗದ್ಗುರುಗಳು

ಎಸ್ಸೆಸ್ ಆರೋಗ್ಯ ವಿಚಾರಿಸಿದ ತರಳಬಾಳು ಜಗದ್ಗುರುಗಳು

ಶತೋತ್ತರ ಆಯುಷಿಯಾಗುವಂತೆ ಆಶೀರ್ವದಿಸಿದ ಸ್ವಾಮೀಜಿ

ಸದಾ ಶಿಷ್ಯರ ಹಿತ ಬಯಸುವ‌ ತಾವೇ ನಮ್ಮ ಗುರುಗಳು ಎಂದು ಭಾವುಕರಾದ ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಜ. 2- ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ಗುರುವಾರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಆಶೀರ್ವದಿಸಿದರು.

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ರವರು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ತರಳಬಾಳು ಕೇಂದ್ರಕ್ಕೆ ಆಗಮಿಸಿ, ತಮ್ಮ ತಂದೆಯ ಆರೋಗ್ಯದ ಬಗ್ಗೆ ಶ್ರೀಗಳಿಗೆ ಮಾಹಿತಿ ನೀಡಿದರು. ತಂದೆ ಶಾಮನೂರು ಶಿವಶಂಕರಪ್ಪನವರು ತಮ್ಮ ದರ್ಶನಕ್ಕೆ ಹಲವಾರು ಬಾರಿ ಅಪೇಕ್ಷಿಸುತ್ತಿರುವುದನ್ನು ತಿಳಿಸಿದ ತಕ್ಷಣವೇ ಶ್ರೀಗಳು ಖುದ್ದಾಗಿ ಆಸ್ಪತ್ರೆಗೆ ತೆರಳಿ ಶಿವಶಂಕರಪ್ಪನವರ ಕುಶಲೋಪರಿ ವಿಚಾರಿಸಿದರು.  ಶಾಲು ಹೊದಿಸಿ, ಹಾರ ಹಾಕಿ, ಶತೋತ್ತರ ಆಯುಷಿಯಾಗುವಂತೆ ಆಶೀರ್ವದಿಸಿದರು.

ಈ ವೇಳೆ ಶಿವಶಂಕರಪ್ಪನವರು, ಪ್ರತಿಯೊಬ್ಬರಿಗೂ ಸನ್ಮಾರ್ಗ ತೋರಿಸುವ ಗುರುವಿನ ಅಗತ್ಯತೆ ಬಹಳವಿದೆ. ಸನ್ಮಾರ್ಗದಲ್ಲಿ ಹೋದರೆ ಮಾತ್ರ ಒಳಿತಾಗುತ್ತದೆ. ಕೆಟ್ಟ ಮಾರ್ಗದಲ್ಲಿ ಹೋದರೆ ಕೆಡುಕಾಗುತ್ತದೆ. ಇದು ಗೊತ್ತಿದ್ದರೂ ಯಾವುದು ಸರಿಯಾದ ಮಾರ್ಗ, ಅಪಮಾರ್ಗ ಅನ್ನುವುದು ಅರ್ಥವಾಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಉತ್ತಮ ಮಾರ್ಗದರ್ಶಕರಾಗಿ ಸದಾಕಾಲ ಶಿಷ್ಯರ ಹಿತ ಬಯಸುವ‌ ತಾವೇ ನಮ್ಮ ಗುರುಗಳು ಎಂದು  ಭಾವುಕರಾದರು.

ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ನಿವೃತ್ತ ಪೊಲೀಸ್ ಮಹಾ ನಿರೀಕ್ಷಕ ಶಂಕರ್ ಬಿದರಿ ಈ ವೇಳೆ ಉಪಸ್ಥಿತರಿದ್ದರು.

error: Content is protected !!