ಜಗಳೂರು: ಕನ್ನಡ ರಥಕ್ಕೆ ಶಾಸಕರಿಂದ ಚಾಲನೆ

ಜಗಳೂರು: ಕನ್ನಡ ರಥಕ್ಕೆ ಶಾಸಕರಿಂದ ಚಾಲನೆ

ಜಗಳೂರು, ಜ.2- ಇದೇ 11,12,13 ರಂದು ನಡೆಯಲಿರುವ 14 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಜಲೋತ್ಸವದ ಪೂರ್ವಭಾವಿ ಯಾಗಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಲಿರುವ `ಕನ್ನಡ ರಥ’ಕ್ಕೆ ಶಾಸಕ ಬಿ. ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ಇಂದು ಅದ್ಧೂರಿಯಾಗಿ  ಚಾಲನೆ ನೀಡಲಾಯಿತು. 

ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ನೂರಾರು ವಿದ್ಯಾರ್ಥಿಗಳ, ಅಧಿಕಾರಿಗಳ ಸಮ್ಮುಖದಲ್ಲಿ ಮಾತನಾಡಿದ ಶಾಸಕ ಬಿ.ದೇವೇಂದ್ರಪ್ಪ,  14 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಜಲೋತ್ಸವ ಕಾರ್ಯಕ್ರಮಗಳ ಯಶಸ್ವಿಗೆ  ಪಕ್ಷಾತೀತ, ಜಾತ್ಯತೀತವಾಗಿ ನುಡಿ ಹಬ್ಬ ಸಂಭ್ರಮಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು.ಕನ್ನಡಾಂಬೆ ಭುವನೇಶ್ವರಿ ಕೃಪೆಗೆ ಪಾತ್ರರಾಗಬೇಕು ಎಂದು ಕರೆ ನೀಡಿದರು.

ರಥಕ್ಕೆ ಯಾವುದೇ ಚ್ಯುತಿ ಬರದಂತೆ ಕನ್ನಡಾಂಬೆಗೆ ಗೌರವಿಸಬೇಕು. ಸಂಭ್ರಮದಿಂದ ಸ್ವಾಗತಿಸಬೇಕು. ಗ್ರಾಪಂ ಅಧಿಕಾರಿಗಳು, ಜವಾ ಬ್ದಾರಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಕೆರೆಗಳು ಕೋಡಿ ಬಿದ್ದ ಹಿನ್ನೆಲೆಯಲ್ಲಿ ಜಲ ಸಂಭ್ರಮಕ್ಕಾಗಿ ಜ.13ರಂದು `ಜಲೋತ್ಸವ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಜೆ ರಸಮಂಜರಿ ಕಾರ್ಯಕ್ರಮಕ್ಕೆ ಸರಿಗಮಪ ಸೀಜನ್ ನ 40 ಜನರ ತಂಡ ಹಾಗೂ ಖ್ಯಾತ ಗಾಯಕರಾದ ಅರ್ಜುನ್ ಜನ್ಯ, ಅನುರಾಧ ಭಟ್ ಅವರು ಭಾಗವಹಿಸಲಿದ್ದಾರೆ. ಅಧಿಕ ಸಂಖ್ಯೆಯಲ್ಲಿ  ಪ್ರೇಕ್ಷಕರು ಭಾಗವಹಿಸಬೇಕು ಎಂದು ಶಾಸಕರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಲೋಕೇಶ್ ಮಾತನಾಡಿ, 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ  ಬುಡಕಟ್ಟು ಸಂಸ್ಕೃತಿ ನೆಲೆಸಿರುವ ತಾಲ್ಲೂಕಿನಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಎ.ಬಿ.ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ವೈಚಾರಿಕತೆ ಸಾರುವ  ಗೋಷ್ಠಿಗಳು ನಡೆಯಲಿವೆ. ಎರಡು ದಿನಗಳ ಕಾಲ ಜರುಗಲಿರುವ ಸಾಹಿತ್ಯ ಸಂಭ್ರಮದ ಸೊಬಗು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಗಳೂರು ಇತಿಹಾಸ ಸಾರುವ ಸಾಕ್ಷ್ಯಚಿತ್ರ  ಪ್ರದರ್ಶನಗೊಳ್ಳಲಿವೆ ಎಂದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಮೂಲಕ  ದಾವಣಗೆರೆ ರಸ್ತೆ, ಮಹಾತ್ಮಗಾಂಧಿ ವೃತ್ತದ ಮೂಲಕ ವಿದ್ಯಾರ್ಥಿಗಳು, ಅಧಿಕಾರಿಗಳ ನೇತೃತ್ವದಲ್ಲಿ ಕಲಾತಂಡಗಳ ಮೂಲಕ ಅದ್ದೂರಿ ಕನ್ನಡ ರಥದ ಮೆರವಣಿಗೆ ಸಾಗಿತು. ನಂತರ ರಸ್ತೆಮಾಚಿಕೆರೆ ಮಾರ್ಗವಾಗಿ ಬಿಸ್ತುವಳ್ಳಿ, ಬಿದರಕೆರೆ, ತೋರಣಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಮುಖಾಂತರ ಕಲ್ಲದೇವರಪುರ ಗ್ರಾಮಕ್ಕೆ ತೆರಳಿತು.

ಈ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷರಾದ ಸಾಂಸ್ಕೃತಿಕ ಚಿಂತಕ, ಸಾಹಿತಿ ಡಾ. ಎ.ಬಿ. ರಾಮಚಂದ್ರಪ್ಪ, ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ಸಾಹಿತಿ ಎನ್.ಟಿ. ಎರಿಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ರವಿಚಂದ್ರ, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ತಾ.ಪಂ. ಇಓ ಕೆಂಚಪ್ಪ, ಬಿಇಓ ಹಾಲಮೂರ್ತಿ, ಪಿಐ ಶ್ರೀನಿವಾಸ್ ರಾವ್, ಕಸಾಪ ತಾಲ್ಲೂಕು ಅಧ್ಯಕ್ಷೆ ಸುಜಾತಮ್ಮ, ರಥ ನಿರ್ವಹಣಾ ಸಮಿತಿ ಅಧ್ಯಕ್ಷ ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ. ಮಹೇಶ್ಬರಪ್ಪ ಮತ್ತು ಸಮಿತಿ ಸದಸ್ಯರು ಇದ್ದರು.

error: Content is protected !!