ಫಲ-ಪುಷ್ಪ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ

ಫಲ-ಪುಷ್ಪ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ

4 ದಿನಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನರಿಂದ ಪ್ರದರ್ಶನ ವೀಕ್ಷಣೆ, ಜ.5 ಕೊನೆಯ ದಿನ

ದಾವಣಗೆರೆ, ಜ.2- ನಗರದ ಗಾಜಿನ ಮನೆಯಲ್ಲಿ ಕಳೆದ ಡಿ.28ರಿಂದ ಆರಂಭಗೊಂಡ ಫಲ ಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜನವರಿ 1ರ ಬುಧವಾರದವರೆಗೆ ಸುಮಾರು 20 ಸಾವಿರ ಜನರು ಪ್ರದರ್ಶನ ವೀಕ್ಷಿಸಿದ್ದಾರೆ. ವರ್ಷಾಂತ್ಯ ಹಾಗೂ ವರ್ಷದ ಆರಂಭದ ದಿನಗಳಾಗಿದ್ದರಿಂದ ಈ ಎರಡೂ ದಿನಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರದರ್ಶನದ ಸವಿ ಕಂಡಿದ್ದಾರೆ.

ಕಳೆದ ನ.13ರಿಂದ 16ರವರೆಗೆ ಗಾಜಿನ ಮನೆಯಲ್ಲಿ ಚಂದ್ರಯಾನದ ಯಶಸ್ಸಿನ ಹಿನ್ನೆಲೆಯಲ್ಲಿ 25 ಅಡಿ ಎತ್ತರ ಹಾಗೂ 11 ಅಡಿ ಅಗಲದ ಪಿಎಸ್‌ಎಲ್‌ವಿ ಮಾದರಿ, 9 ಅಡಿ ಎತ್ತರದ ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗಳ ಕಲಾಕೃತಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು.

ಜೊತೆಗೆ 16 ಅಡಿ ಎತ್ತರದ ಶಿವನಂದಿ,  7 ಅಡಿ ಎತ್ತರದ ಭಾರತ ಭೂಪಟ, 8 ಅಡಿ ಎತ್ತರದ ಐಸಿಸಿ ವಿಶ್ವಕಪ್‌ ಅನ್ನು ಹೂವುಗಳಿಂದ ರಚಿಸಲಾಗಿತ್ತು. ಈ ವೇಳೆ ಮೂರು ದಿನಗಳ ಕಾಲ ಸುಮಾರು 4 ಸಾವಿರ ಜನರು ಮಾತ್ರ ಪ್ರದರ್ಶನ ವೀಕ್ಷಿಸಿದ್ದರು. ಆದರೆ ಈ ವರ್ಷ ಇಷ್ಟೊಂದು ಸಂಖ್ಯೆಯಲ್ಲಿ ಜನ ಆಗಮಿಸಿದ್ದುದು ಇದೇ ಪ್ರಥಮ ಬಾರಿ.

ಈ ಬಾರಿ ಸೇವಂತಿಗೆ, ಗುಲಾಬಿ ಸೇರಿದಂತೆ ಐದು ವಿವಿಧ ಬಣ್ಣಗಳ ಹೂವುಗಳಿಂದ 30 ಅಡಿ ಉದ್ದ, 13 ಅಡಿ ಅಗಲದ ಹಳೇ ಸಂಸತ್ ಭವನದ ಮಾದರಿ ಆಕರ್ಷಣೀಯವಾಗಿತ್ತು.

ಕಲ್ಲಂಗಡಿ ಹಣ್ಣಿನಲ್ಲಿ ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಶಿವಕುಮಾರ ಸ್ವಾಮೀಜಿ, ಕನ್ನಡ ಜ್ಞಾನಪೀಠ ಪುರಸ್ಕೃತರು, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಗಳು ಉತ್ತಮವಾಗಿದ್ದವು. ಹಾಗಲಕಾಯಿಯಲ್ಲಿ ರಚಿಸಿದ ಬೃಹತ್ ಗಾತ್ರದ ಡೈನೋಸಾರ್, ವಿವಿಧ ತರಕಾರಿಗಳಲ್ಲಿ ರಚಿಸಿದ ನವಿಲು, ತಬಲಾ, ತಂಬೂರಿ, ಪೆಂಗ್ವಿನ್ ಪಕ್ಷಿ, ನುಗ್ಗೆಕಾಯಿಯ ಮನೆ, ಕಲ್ಲಂಗಡಿ ಹಾಗೂ ಸಿಹಿಕುಂಬಳದಲ್ಲಿ ಮಾಡಿದ ಶಿವಲಿಂಗ ನೋಡುಗರನ್ನು ಆಕರ್ಷಿಸಿದವು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಸಾರುವ ಗ್ಯಾಲರಿಯನ್ನು ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ ಅಂಬೇಡ್ಕರ್ ಅವರು ಬೆಳೆದು ಬಂದ ಹಾದಿ, ಅವರ ಕುಟುಂಬ, ವ್ಯಾಸಂಗದ ಮಾಹಿತಿ ಇದೆ. ಇದರ ಜೊತೆಗೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಪುತ್ಥಳಿಗಳನ್ನು ನಿರ್ಮಿಸಲಾಗಿದೆ.‌ ಈ ಎಲ್ಲಾ ಕಲಾಕೃತಿಗಳ ಮುಂದೆ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ ಪಡುತ್ತಿದ್ದಾರೆ.

ಇನ್ನು ಈ ಬಾರಿ ಕೃಷಿ ಇಲಾಖೆ ಸಹಯೋಗದಲ್ಲಿ ಬೆಲ್ಲದ ಪರಿಷೆ ಆಯೋಜಿಸಿದ್ದುದು ವಿಶೇಷವಾಗಿತ್ತು. ರಾಸಾಯನಿಕ ಮುಕ್ತ ಬೆಲ್ಲದ ಕುರಿತು ಅರಿವು ಮೂಡಿಸಲು ಹಾಗೂ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಆಯೋಜಿಸಲಾಗಿದ್ದ ಈ ಪರಿಷೆಯಲ್ಲಿ ಜನರು ರಾಸಾಯನಿಕ ಮುಕ್ತ ಬೆಲ್ಲ ಖರೀದಿಗೆ ಮುಗಿ ಬಿದ್ದು ಖರೀದಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಗೆ ಮಾರಾಟಕ್ಕಿಟ್ಟಿದ್ದ ಬೆಲ್ಲ ಖಾಲಿಯಾಗಿತ್ತು.

ಗಾಜಿನ ಮನೆ ಪಕ್ಕದಲ್ಲಿ ಮಕ್ಕಳಿಗಾಗಿ ಜಾಯಿಂಟ್ ವ್ಹೀಲ್ ರೈಲು ಸೇರಿದಂತೆ ವಿವಿಧ ಆಟಿಕೆಗಳಿಗೆ ಅವಕಾಶವಿತ್ತಾದರೂ, ದರ  ಹೆಚ್ಚಳವಾಗಿದೆ ಎಂಬ ಆರೋಪ ಪೋಷಕರಿಂದ ಕೇಳಿ ಬಂತು.

ಅಂದ ಹಾಗೆ ಮೂರು ದಿನಗಳಿಗೆ ಎಂದು ಆಯೋಜಿಸಲಾಗಿದ್ದ ಈ ಪ್ರದರ್ಶನದ ವೀಕ್ಷಣೆಯನ್ನು ರಾಜ್ಯ ಮಟ್ಟದ ಯುವ ವೇಳ ಆಯೋಜಿಸಿರುವ ಹಿನ್ನೆಲೆಯಲ್ಲಿ ಜನವರಿ 5ರವರೆಗೂ ವಿಸ್ತರಿಸಲಾಗಿದೆ. ತರಕಾರಿಯಲ್ಲಿ ರಚಿಸಿದ್ದ ಕಲಾಕೃತಿಗಳು ಬತ್ತಿವೆಯಾದರೂ, ಹೂವಿನಲ್ಲಿ ರಚಿಸಿರುವ ಕಲಾಕೃತಿಗಳನ್ನು ವೀಕ್ಷಿಸಬಹುದಾಗಿದೆ.

error: Content is protected !!