ಜ.4ರಂದು ಉಸ್ತುವಾರಿ ಸಚಿವರಿಗೆ, ಜ.5ರಂದು ಸಿಎಂಗೆ ಮನವಿ ಕೊಡಲು ತೀರ್ಮಾನ
ದಾವಣಗೆರೆ, ಜ.2- ಬರುವ ಮಾರ್ಚ್ ತಿಂಗಳಿನಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ `ವಿಶ್ವ ಕನ್ನಡ ಸಮ್ಮೇಳನಕ್ಕೆ’ ಅವಕಾಶ ಕಾಯ್ದಿರಿಸುವ ಜತೆಗೆ ಅನುದಾನ ಬಿಡುಗಡೆ ಮಾಡಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ವಿಶ್ವ ಕನ್ನಡ ಸಮ್ಮೇಳನ’ ಆಯೋಜಿಸಲು ಒತ್ತಾಯಿಸುವ ಪೂರ್ವಭಾವಿ ಸಭೆ ಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದಲ್ಲಿ ಈ ಹಿಂದೆ ನಡೆದ ಕಾನಿಪ ರಾಜ್ಯಮಟ್ಟದ ಸಮ್ಮೇಳನದಲ್ಲಿ ಕಳೆದ ಬಜೆಟ್‌ನಲ್ಲೇ ಅನುದಾನ ಘೋಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದೆವು. ಆದರೆ ಆಗಿನ ಬಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರಲಿಲ್ಲ ಎಂದು ತಿಳಿಸಿದರು.
ಈ ಹಿಂದೆ 2017ರಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ 30 ಕೋಟಿ ರೂ. ಬಿಡುಗಡೆಯಾಗಿತ್ತು. ಆಗ ಸಮಿತಿ ರಚನೆಯಾಗಿ, 5 ನೂರು ಪುಟಗಳ ವರದಿಯನ್ನೂ ಮಂಡಿಸಿದ್ದರು. ಇಂದು ಇದಕ್ಕೆ ಪುನಶ್ಚೇತನ ನೀಡಬೇಕಿರುವುದು ಪ್ರತಿ ಕನ್ನಡಿಗನ ಕರ್ತವ್ಯ ಆಗಿದೆ ಎಂದು ಹೇಳಿದರು.
ವಿಶ್ವ ಕನ್ನಡ ಸಮ್ಮೇಳನಕ್ಕೆ ದಾವಣಗೆರೆಯಲ್ಲಿ ಅವಕಾಶ ಕೊಡದಿದ್ದರೆ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಕಾರ್ಯವನ್ನು ಎಲ್ಲ ಕನ್ನಡಿಗರು ಮಾಡಬೇಕು. ಆದ್ದರಿಂದ ನಮ್ಮ ಕೂಗಿಗೆ ಶಕ್ತಿ ಬರಲು, ಎಲ್ಲಾ ಜನರು ಒಕ್ಕೊರಲಿನಿಂದ ಸರ್ಕಾರಕ್ಕೆ ಆಗ್ರಹಿಸಬೇಕು ಎಂದರು.
ಜ.4ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮತ್ತು ಜ.5ರ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ ಮನವೊಲಿಸುವ ಕಾರ್ಯ ಮಾಡೋಣ ಎಂದು ಹೇಳಿದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಕನ್ನಡ ಪರ ವೇದಿಕೆ, ರೈತ ಸಂಘ ಹಾಗೂ ಇತರೆ ಸಂಘಟನೆಯವರು ನಮ್ಮ ಜೊತೆಗೆ `ವಿಶ್ವ ಕನ್ನಡ ಸಮ್ಮೇಳನಕ್ಕೆ’ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿನ ಎಲ್ಲಾ ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಮೂಲಕ ಸಮ್ಮೇಳನವನ್ನು ನಗರದಲ್ಲೇ ಆಯೋಜಿಸುವಂತೆ ಸಿಎಂ ಮೇಲೆ ಒತ್ತಡ ಹೇರುವ ಕಾರ್ಯ ಮಾಡಬೇಕು.
– ರಾಜಶೇಖರ್ ಗುಂಡಗತ್ತಿ, ಚುಸಾಪ ಅಧ್ಯಕ್ಷ
ದಾವಣಗೆರೆಯಲ್ಲೇ `ವಿಶ್ವ ಕನ್ನಡ ಸಮ್ಮೇಳನ’ ನಡೆಯುವಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಭಿಯಾನ ಪ್ರಾರಂಭಿಸುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು.
– ನಾಗರಾಜ್ ಬಡದಾಳ್., ವರದಿಗಾರರ ಕೂಟದ ಅಧ್ಯಕ್ಷ
ದಾವಣಗೆರೆ ನಗರದಲ್ಲಿ `ವಿಶ್ವ ಕನ್ನಡ ಸಮ್ಮೇಳನ’ ನಡೆದರೆ ವಿಶ್ವಮಟ್ಟದಲ್ಲಿ ನಗರದ ಕೀರ್ತಿ ರಾರಾಜಿಸಲಿದೆ.
– ರಾಘವೇಂದ್ರ ನಾಯರಿ, ಕಸಾಪ ಕೋಶಾಧ್ಯಕ್ಷ
ನಾವು ಮೊದಲು ಜಿಲ್ಲಾ ಉಸ್ತುವಾರಿ ಸಚಿವರ ಮನವೊಲಿಸುವ ಕಾರ್ಯ ಮಾಡಿದಾಗ, ಖುದ್ದು ನಮ್ಮ ಮಂತ್ರಿಗಳೇ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಲಿದ್ದಾರೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಹೋಗಿ ಸಚಿವರಿಗೆ ಮನವಿ ಸಲ್ಲಿಸೋಣ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್ ಮಾತನಾಡಿ, ಇದು ಇಂದಿನ ಹೊಸ ಬೇಡಿಕೆಯೇನಲ್ಲ. ಇಲ್ಲಿ ಸಮ್ಮೇಳನ ನಡೆಯಬೇಕು ಎಂಬುದು ಬಹು ದಿನದ ಕನಸು ಆಗಿದೆ. ಹಾಗಾಗಿ 3ನೇ ವಿಶ್ವ ಕನ್ನಡ ಸಮ್ಮೇಳನ ದಾವಣಗೆರೆಯಲ್ಲಿಯೇ ನಡೆಯುವಂತೆ ದೊಡ್ಡ ಸಂಖ್ಯೆಯಲ್ಲಿ ಎಲ್ಲರೂ ಧ್ವನಿ ಎತ್ತೋಣ ಎಂದು ತಿಳಿಸಿದರು.
ರೈತ ಮುಖಂಡ ಬಲ್ಲೂರು ರವಿ ಕುಮಾರ್ ಮಾತನಾಡಿ, ವಿಶ್ವ ಕನ್ನಡ ಸಮ್ಮೇಳನದ ಹೋರಾಟಕ್ಕಾಗಿ ಒಂದು ಒಕ್ಕೂಟ ತೆರೆದು, ಇಲ್ಲಿನ ಎಲ್ಲ ಸಂಘಟನೆಗಳಿಂದ ಇಬ್ಬಿಬ್ಬರನ್ನು ನಿಯೋಜಿಸಿಕೊಂಡು ಎಲ್ಲರೂ ಒಗ್ಗಟ್ಟಾಗಿ, ಸಂಬಂಧಿಸಿದವರಿಗೆ ಮನವಿ ಸಲ್ಲಿಸೋಣ. ಅದಕ್ಕೆ ಸ್ಪಂದನೆ ಸಿಗದಿದ್ದರೆ ಹೋರಾಟಕ್ಕೆ ಇಳಿಯೋಣ ಎಂದು ಅಭಿಪ್ರಾಯ ತಿಳಿಸಿದರು.
ಪತ್ರಕರ್ತ ಫಕೃದ್ಧೀನ್ ಮಾತನಾಡಿ, ಸಮ್ಮೇಳನದ ದಿನಾಂಕ ನಿಗದಿ ಪಡಿಸುವಂತೆ ಮುಖ್ಯಮಂತ್ರಿಗಳಿಗೆ ಕೇಳೋಣ ಮತ್ತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸೋಣ ಎಂದರು.
ಕಾನಿಪ ಜಿಲ್ಲಾಧ್ಯಕ್ಷ ಇ.ಎಂ ಮಂಜುನಾಥ್ ಮಾತನಾಡಿ, ಇಚ್ಛಾಶಕ್ತಿ ಕೊರತೆಯಿಂದಾಗಿ ಇಲ್ಲಿ ನಡೆಯುವ ಸಮ್ಮೇಳನ ತಟಸ್ಥವಾಗಿದೆ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮ್ಮೇಳನಕ್ಕೆ ಅಡ್ಡಿಪಡಿಸಬಹುದು ಎಂದು ಅಭಿಪ್ರಾಯ ತಿಳಿಸಿದರು.
ಸಾಹಿತಿ ಬಾ.ಮ. ಬಸವರಾಜ್ ಮಾತನಾಡಿ, ಸಮ್ಮೇಳನಕ್ಕಾಗಿ ಅಂದು 5ಕೋಟಿ ರೂ. ಬಿಡುಗಡೆಯಾಗಿ ಅದು ಅಲ್ಲಿಗೆ ಸ್ಥಬ್ದವಾಗಿದೆ. ಹಾಗಾಗಿ ನಿಂತು ಹೋದ ಆ ಪ್ರಕ್ರಿಯೆಯನ್ನು ಮುಂದುವರೆಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ದಿನಾಂಕ ನಿಗದಿ ಪಡಿಸುವಂತೆ ಒತ್ತಾಯಿಸಬೇಕಿದೆ ಎಂದು ಹೇಳಿದರು.
ಈ ವೇಳೆ ಹಿರಿಯ ಪತ್ರಕರ್ತ ಸದಾನಂದ ಹೆಗಡೆ, ಮಂಜುನಾಥ್ ಗೌರಕ್ಕಳವರ್, ಸುಮತಿ ಜಯಪ್ಪ, ಜಯಮ್ಮ ನೀಲಗುಂದ, ಎಸ್.ಎಂ. ಮಲ್ಲಮ್ಮ, ಸತ್ಯಭಾಮ ಮಂಜುನಾಥ್, ರುದ್ರಾಕ್ಷಿ ಬಾಯಿ, ಶಿವಶಂಕರ್, ಜಿಗಳಿ ಪ್ರಕಾಶ್, ಕೆ. ಸಿರಾಜ್, ಬಂಕಾಪುರದ ಚನ್ನಬಸಪ್ಪ ಇತರರು ಇದ್ದರು.