5ರಿಂದ ಕಾಲುವೆಗೆ ನೀರು ಹರಿಸಲು ರೈತ ಒಕ್ಕೂಟದ ಆಗ್ರಹ

5ರಿಂದ ಕಾಲುವೆಗೆ ನೀರು ಹರಿಸಲು ರೈತ ಒಕ್ಕೂಟದ ಆಗ್ರಹ

ದಾವಣಗೆರೆ, ಜ.1- ಭತ್ತದ ಬೆಳೆಗಾಗಿ ಜನವರಿ 5ರಿಂದ ಭದ್ರಾ ಡ್ಯಾಮಿನ ನೀರನ್ನು ಕಾಲುವೆಗೆ ಹರಿಸುವಂತೆ ಆಗ್ರಹಿಸಿ ಜಿಲ್ಲಾ ರೈತರ ಒಕ್ಕೂಟವು ಬುಧವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಸಲ್ಲಿಸಿತು.

ಈ ವೇಳೆ ಮಾತನಾಡಿದ ರೈತ ಮುಖಂಡರು, ಭದ್ರಾ ಡ್ಯಾಂ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಈ ಡ್ಯಾಮಿನ ಆಸರೆಯಿಂದ ಜಿಲ್ಲೆಯಲ್ಲಿ ಸುಮಾರು 1ಲಕ್ಷ 60ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆಯಲು ಕೊಳವೆಬಾವಿ ಮತ್ತು ಇತರೆ ನೀರಿನ ಸೌಲಭ್ಯ ಇರುವವರು ಈಗಾಗಲೇ ಸಸಿಮಡಿ ತಯಾರಿಸಿ, ಬೀಜ ಚೆಲ್ಲಿದ್ದಾರೆ. ಇನ್ನುಳಿದ ಕೆಲವು ರೈತರು ಸಸಿಮಡಿಗೆ ಬೀಜ ಚೆಲ್ಲಲು ಕಾಲುವೆಗಳಲ್ಲಿ ನೀರು ಹರಿಸುವುದನ್ನು ಕಾಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದರು.

ಕೆಲವು ರೈತರು ಬೀಜ ಉಗ್ಗುವ ಮೂಲಕ ನೇರ ಬಿತ್ತನೆ ಮಾಡುವ ಮುಖೇನ ಚೆಲ್ಲುವ ಪದ್ಧತಿ ಅನುಸರಿಸುವವರೂ ನೀರು ಹರಿಸುವುದನ್ನು ಕಾಯುತ್ತಿದ್ದಾರೆ.  ಪ್ರಸಕ್ತ ಡ್ಯಾಮ್‌ನಲ್ಲಿ ನೀರಿನ ಮಟ್ಟ 183ಅಡಿ ಇದ್ದು, ಡ್ಯಾಮ್‌ ತುಂಬಿದೆ. ನೀರು ಬಿಡುವುದು ತಡವಾದರೆ ಬೇಸಿಗೆ ಹಂಗಾ ಮಿನಲ್ಲಿ ಭತ್ತದ ಬೆಳೆಗೆ ಅನಾನುಕೂಲ ವಾಗುತ್ತದೆ. ಆದ್ದರಿಂದ ತಕ್ಷಣವೇ ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕೆಂದು ಒತ್ತಾಯಿಸಿದರು.

ಕಾಲುವೆಗಳಲ್ಲಿ ಬೆಳೆದಿರುವ ಗಿಡ-ಗಂಟಿ ಮತ್ತು ಹೂಳನ್ನು ತೆಗೆದು, ನೀರು ಸರಾಗವಾಗಿ ಕೊನೆಯ ಭಾಗಕ್ಕೆ ಹರಿಯುವಂತೆ ಮಾಡಬೇಕು ಮತ್ತು ಭದ್ರಾ ಡ್ಯಾಮ್‌ ಸುರಕ್ಷತೆ ಬಗ್ಗೆ ಸಮೀಕ್ಷೆ ನಡೆಸಿ, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಡ್ಯಾಮ್‌ ನಿರ್ವಹಣೆಯ ಕ್ರೇನ್‌ಗಳನ್ನು ರೀ ಕಂಡೀಷನ್ ಮಾಡಿಸಬೇಕು ಹಾಗೂ ತಳಭಾಗದ ಬಫರ್ ಜೋನ್ ಪ್ರದೇಶದಲ್ಲಿ ಯಾವುದೇ ರೀತಿಯ ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳಬಾರದು ಎಂದು ಮನವಿ ಮಾಡಿದರು.

ಈ ವೇಳೆ ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ ಸತೀಶ್, ಅಣಬೇರು ಕುಮಾರಸ್ವಾಮಿ, ಮಾಜಿ ಮೇಯರ್ ಹೆಚ್.ಎನ್. ಗುರುನಾಥ್, ಕುರ್ಕಿ ರೇವಣಸಿದ್ದಪ್ಪ, ಕುಂದುವಾಡದ ಜಿಮ್ಮಿ ಹನುಮಂತಪ್ಪ ಇತರರಿದ್ದರು.

error: Content is protected !!