ಕೇಕ್ ಕತ್ತರಿಸಿ ಸಂಭ್ರಮ, ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದ ಭಕ್ತರು, ಕುಡಿದು ದಣಿದ ಯುವಕರು
ದಾವಣಗೆರೆ, ಜ.1- ರಾತ್ರಿ 12 ಗಂಟೆಯಾಗುತ್ತಲೇ ಪಟಾಕಿಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದವು. ಯುವಕರು ಕೇಕೆ ಹಾಕಿದರು. ಹ್ಯಾಪಿ ನ್ಯೂ ಇಯರ್ ಎಂದು ಕೂಗಿದರು. ಸಂಭ್ರಮಿಸುತ್ತಾ ಹೊಸ ವರ್ಷವನ್ನು ಸ್ವಾಗತಿಸಿದರು.
ನಗರದಲ್ಲಿ ಹೊಸ ವರ್ಷಕ್ಕೆ ಯುವಕ-ಯುವತಿಯರಿಂದ ಸಂಭ್ರಮದ ಸ್ವಾಗತ ಸಿಕ್ಕಿತು. ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ನೆರೆದಿದ್ದವರು ಸಂಗೀತ, ಹಾಡು, ನೃತ್ಯಗಳ ಮೂಲಕ ಸಂಭ್ರಮಿಸಿದರು. ಯುವಕರು ಬೈಕ್‌ಗಳಲ್ಲಿ ಕೇಕೇ ಹಾಕುತ್ತಾ ರಸ್ತೆಗಳಲ್ಲಿ ತಿರುಗಾಡಿದರು.
ಖಾಸಗಿ ಹೋಟೆಲ್‌ಗಳಲ್ಲಿ ಆಯೋಜನೆ ಮಾಡಿದ್ದ ಇವೆಂಟ್ಗಳಲ್ಲಿ ಯುವ ಜನತೆ ಭಾಗಿಯಾಗಿ ಹಾಡುಗಳಿಗೆ ಕುಣಿದು ಕುಪ್ಪಳಿಸಿ ದರು. ಯುವಕರಿಗಿಂತ ನಾವೇನು ಕಮ್ಮಿ ಇಲ್ಲ ಎಂಬಂತೆ ಯುವತಿಯರು ಸ್ಟೆಪ್ ಹಾಕಿದರು. ಇವೆಂಟ್ಗಳಲ್ಲಿ ಯುವತಿಯರಿಗೆ, ಮಹಿಳೆಯರಿಗೆ ಬೌನ್ಸರ್ಗಳು ವಿಶೇಷ ಭದ್ರತೆ ಒದಗಿಸಿದ್ದರು.
ಅಂದಾಜು 8 ಕೋಟಿ ರೂ. ಮೌಲ್ಯದ ಮದ್ಯ ಖರೀದಿ
ಹೊಸ ವರ್ಷದ ಸಂಭ್ರಮ ಎಂದಾಕ್ಷಣ ಯುವಜನತೆ ಮಾತನಾಡುವುದೇ ಎಣ್ಣೆ, ಊಟದ ಬಗ್ಗೆ. ಇತ್ತೀಚೆಗಂತೂ ಮದ್ಯ ಇಲ್ಲದೆ ಸಂಭ್ರಮ ಇಲ್ಲ ಎನ್ನುವಂತಾಗಿದೆ.
ವಾರದ ಮೊದಲೇ ಡಿಸೆಂಬರ್ 31ರ ರಾತ್ರಿಯ ಪಾರ್ಟಿಗೆ ಸಿದ್ಧತೆಗಳು ನಡೆಯುತ್ತವೆ. ಇತ್ತ ಬಾರ್ ಅಂಡ್ ರೆಸ್ಟೋರೆಂಟ್ಗಳು ಗ್ರಾಹಕರನ್ನು ಆಕರ್ಷಿಸಲು ಕಸರತ್ತು ನಡೆಸುತ್ತವೆ.
ಸಂಭ್ರಮದ ನೆಪದಲ್ಲಿ ಪ್ರತಿ ವರ್ಷ ಮದ್ಯ ಮಾರಾಟದಲ್ಲಿಯೇ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತದೆ.
ಅಂದ ಹಾಗೆ ಕಳೆದ ಡಿಸೆಂಬರ್ 31ರಂದು ಡಿಪೋದಿಂದ ಜಿಲ್ಲೆಯಲ್ಲಿ ಬಾರ್ಗಳ ಮಾಲೀಕರು 79 ಕೋಟಿ ರೂ.ಗಳಷ್ಟು ಮದ್ಯ ಖರೀದಿಸಿದ್ದಾರೆ.
ಈ ಪೈಕಿ 7.26 ಕೋಟಿ ರೂ. ಮೌಲ್ಯದ 117190 ಬಾಕ್ಸ್ ಮದ್ಯವಾದರೆ, 67.33 ಲಕ್ಷ ರೂ. ಮೌಲ್ಯದ 3811 ಬಾಕ್ಸ್ ಬಿಯರ್ ಖರೀದಿಯಾಗಿದೆ.
ಸಂಭ್ರಮಾಚರಣೆ ದಿನವೇ ಅಪಘಾತ: ಯುವಕ ಸಾವು
ದಾವಣಗೆರೆ : ಹೊಸ ವರ್ಷದ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕನೊಬ್ಬ ಸಾವಿಗೀಡಾಗಿರುವ ಘಟನೆ ನಡೆದಿದೆ.
ನಗರದ ನೂತನ ಕಾಲೇಜ್ ಮುಂಭಾಗ ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಬೈಕ್ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ನಿಟ್ಟುವಳ್ಳಿ ಹೊಸ ಬಡಾವಣೆಯ ಕಾರ್ತಿಕ್ (19) ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹೊಸ ವರ್ಷ ಸಂಭ್ರಮಾಚರಣೆಗೆ ಸ್ನೇಹಿತರ ಜೊತೆ ಯುವಕ ಆಗಮಿಸುತ್ತಿದ್ದ. ಬೈಕ್ನಲ್ಲಿ ವೇಗವಾಗಿ ಬರುತ್ತಿದ್ದಾಗ ಬೈಕ್ ಹಾಗೂ ಕಾರು ನಡುವೆ ಅಪಘಾತದಲ್ಲಿ ನಡೆದಿದೆ. ಬೈಕ್ ಸಂಪೂರ್ಣ ಜಖಂಗೊಂಡಿದೆ.
ಮನೆಗಳಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲು ಕೇಕ್‌ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಬುಧವಾರ ತಡರಾತ್ರಿಯವರೆಗೂ ಬೇಕರಿಗಳಲ್ಲಿ ಕೇಕ್ ಬಿಕರಿಯಾ ಯಿತು. ಗುರುವಾರವೂ ಸಂಘ-ಸಂಸ್ಥೆ ಗಳು, ಕಚೇರಿಗಳಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.
ಮಧ್ಯಾಹ್ನ ಹಾಗೂ ರಾತ್ರಿಯೂ ಊಟದ ಹೋಟೆಲ್‌ಗಳು, ಅದರಲ್ಲೂ ನಾರ್ಥ್ ಇಂಡಿ ಯನ್ ಹೋಟೆಲ್‌ಗಳು ಭರ್ತಿಯಾಗಿ ದ್ದವು. ಹೆದ್ದಾರಿ ಪಕ್ಕದ ಬಾರ್ ಅಂಡ್ ರೆಸ್ಟೋರೆಂಟ್ ಗಳೂ ಭರ್ತಿಯಾಗಿದ್ದವು. ಹೋಟೆಲ್-ರೆಸ್ಟೋರೆಂಟ್‌ಗಳಲ್ಲಿ ಮದ್ಯಕ್ಕೆ ಹೆಚ್ಚು ದರ ನೀಡಲೊಪ್ಪದ ಯುವಕರು, ಖಾಲಿ ನಿವೇಶನ, ದೊಡ್ಡ ಮೈದಾನಗಳಲ್ಲಿ ಪಾರ್ಟಿ ಮಾಡಿದರು. ಹೋಲ್‌ಸೇಲ್ ಅಂಗಡಿಗಳಲ್ಲಿ ಮದ್ಯ ಖರೀದಿಸಿ ನಾಲ್ಕಾರು ಜನ ಗುಂಪು ಕೂಡಿ ಕುಡಿದು, ಕೇಕೆ ಹಾಕುತ್ತಿದ್ದರು. ಸನಿಹದಲ್ಲೇ ಇದ್ದ ಮನೆಗಳಿಗೆ ಇದು ಕಿರಿ ಕಿರಿಯಾಗುತ್ತಿತ್ತು.
ಬೆಳಿಗ್ಗೆ ದೇವಸ್ಥಾನಗಳಲ್ಲಿ ಜನ ಜಂಗುಳಿ ಇತ್ತು. ಹೊಸ ವರ್ಷದ ಮೊದಲ ದಿನ ದೇವರ ದರ್ಶನಕ್ಕೆ ಜನರು ತೆರಳುತ್ತಿದ್ದುದು ಸಾಮಾನ್ಯವಾಗಿತ್ತು.