11ರಿಂದ ಜಗಳೂರಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ

11ರಿಂದ ಜಗಳೂರಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ

ಆಹ್ವಾನ ಪತ್ರಿಕೆ ಅನಾವರಣಗೊಳಿಸಿದ ಬಿ.ದೇವೇಂದ್ರಪ್ಪ, ಡಾ.ಎ.ಬಿ. ರಾಮಚಂದ್ರಪ್ಪ

ಜ.2ರಂದು ಸಮ್ಮೇಳನ `ಜಾಗೃತಿ ರಥ ಯಾತ್ರೆ’, 13ರಂದು ಜಗಳೂರು `ಜಲೋತ್ಸವ’

ಜಗಳೂರು, ಡಿ.30- ಪಟ್ಟಣದಲ್ಲಿ ಇದೇ ಜನವರಿ 11 ಮತ್ತು 12 ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಶಾಸಕ ಬಿ. ದೇವೇಂದ್ರಪ್ಪ, ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎ.ಬಿ ರಾಮಚಂದ್ರಪ್ಪ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅವರು ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ. ದೇವೇಂದ್ರಪ್ಪ ಅವರು, ಮೂರು ದಶಕಗಳ ನಂತರ ತಾಲ್ಲೂಕಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಷಯ, ಎಲ್ಲರೂ ಒಂದಾಗಿ ಸಮ್ಮೇಳನ ಯಶಸ್ಸಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಕನ್ನಡ ತಾಯಿ ಭುವನೇಶ್ವರಿಯ ತೇರು ಎಳೆ ಯಲು ಎಲ್ಲರೂ ಒಂದಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸಣ್ಣಪುಟ್ಟ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಬದಿಗೊತ್ತಿ ಸಮ್ಮೇಳನದ ಯಶಸ್ವಿಗೆ ಶ್ರಮಿಸಬೇಕು. ಸಮ್ಮೇಳನದ ಪ್ರತಿಯೊಂದು ಜವಾಬ್ದಾರಿಗಳನ್ನು ಆಯಾ ಸಮಿತಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಜಗಳೂರು ಜಲೋತ್ಸವ : ಸಮ್ಮೇಳನದ ಮರುದಿನ ಜ.13ರಂದು ಜಗಳೂರು ಜಲೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 50 ವರ್ಷಗಳ ನಂತರ ಎಲ್ಲಾ ಕೆರೆ-ಕಟ್ಟೆಗಳಿಂದ ನೀರು ಹರಿದು ಬಂದಿದ್ದು, ಕೆರೆಗಳು ತುಂಬಿ ತುಳುಕುತ್ತಿವೆ ತಾಲ್ಲೂಕನ್ನು ಪ್ರಾಕೃತಿಕವಾಗಿ, ಧಾರ್ಮಿಕವಾಗಿ, ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯವ ಕೆಲಸ ಮಾಡಬೇಕಾಗಿದೆ. ಆದ್ದರಿಂದ ತಾಲ್ಲೂಕಿನ ಐತಿಹಾಸಿಕ ಮತ್ತು ಭೌಗೋಳಿಕ ಹಿನ್ನೆಲೆಯ ಸಾಕ್ಷ್ಯ ಚಿತ್ರ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಸಾಪ್ಪ ಅಧ್ಯಕ್ಷ ಬಿ ವಾಮದೇವಪ್ಪ ಮಾತನಾಡಿ, ಸಮ್ಮೇಳನದ ಪೂರ್ವಸಿದ್ಧತೆ ಅತಿಥಿಗಳ ಸನ್ಮಾನ ವೇದಿಕೆ ನಿರ್ಮಾಣ ಮತ್ತು ಆರ್ಥಿಕ ವೆಚ್ಚದ ಬಗ್ಗೆ ಶಾಸಕರಿಗೆ ಸಮಗ್ರ ಮಾಹಿತಿ ನೀಡಿದರು.

ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎ.ಬಿ ರಾಮಚಂದ್ರಪ್ಪ, ಜಿಲ್ಲಾ ಕಸಾಪ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಮತ್ತು ಪಧಾದಿಕಾರಿಗಳು, ಸಾಹಿತಿ ಎನ್.ಟಿ. ಎರ್ರಿಸ್ವಾಮಿ, ತಾ. ಕಸಾಪ ಅಧ್ಯಕ್ಷೆ ಸುಜಾತಮ್ಮ, ಗೌರವ ಕಾರ್ಯದರ್ಶಿ ಗೀತಾ ಮಂಜು, ಪದಾಧಿಕಾರಿಗಳಾದ ಡಿ.ಸಿ ಮಲ್ಲಿಕಾರ್ಜುನ್, ಮಾರ ನಾಯಕ್, ಕೃಷ್ಣಮೂರ್ತಿ, ನಾಗಲಿಂಗಪ್ಪ, ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ, ಪ.ಪಂ ಮಾಜಿ ಅಧ್ಯಕ್ಷ ಮಂಜುನಾಥ್, ಡಿ. ಶ್ರೀನಿವಾಸ್, ಜಗದೀಶ್, ಬಿ. ಮಹೇಶ್ವರಪ್ಪ ಇತರರು ಇದ್ದರು.

error: Content is protected !!