ಜೀವನದ ಸವಾಲುಗಳನ್ನೆದುರಿಸಿದಾಗ ಮಾತ್ರ ಗಟ್ಟಿತನ ಬರಲು ಸಾಧ್ಯ

ಜೀವನದ ಸವಾಲುಗಳನ್ನೆದುರಿಸಿದಾಗ ಮಾತ್ರ ಗಟ್ಟಿತನ ಬರಲು ಸಾಧ್ಯ

ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೋಜ  ಅಭಿಮತ

ದಾವಣಗೆರೆ, ಡಿ. 29- ಜೀವನದಲ್ಲಿ ಸೋಲು-ಗೆಲುವು ಸಾಮಾನ್ಯ. ಸೋಲೇ ಗೆಲುವಿನ ಸೋಪಾನ. ಜೀವನದ ಉನ್ನತ ಗುರಿಗಳನ್ನು ಬೆನ್ನಟ್ಟಿ ಹೊರಟಾಗ ಏಳುಬೀಳುಗಳು ಸಹಜ. ಅಂತಹ ಸವಾಲುಗಳನ್ನು ಎದುರಿಸಿದಾಗ ಮಾತ್ರ ಗಟ್ಟಿತನ ಬರಲು ಸಾಧ್ಯ ಎಂದು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೋಜ ಹೇಳಿದರು.

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜನೆಗೊಂಡಿದ್ದ ಸಂಸ್ಥೆಯ 55 ನೇ ವಾರ್ಷಿಕ ಸಂಭ್ರಮ, ಶಿಕ್ಷಣ ಶಿಲ್ಪಿ ಡಾ.ಎಂ.ಎಸ್. ಶಿವಣ್ಣ ಪ್ರಶಸ್ತಿ  ಪ್ರದಾನ, ಎಂಎಸ್‌ಎಸ್‌ ಕ್ವಿಜ್ ಬಹುಮಾನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪೋಷಕರು ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಜೊತೆಗೆ ಪ್ರೋತ್ಸಾಹಿಸ ಬೇಕು. ಅವರ ವಿದ್ಯಾಭ್ಯಾಸದ ಬಗ್ಗೆ ನಿತ್ಯ ಗಮನಹರಿಸಬೇಕು. ಮೊಬೈಲ್ ಬಳಕೆ ಅಗತ್ಯಕ್ಕೆ ಅನುಗುಣವಾಗಿರಬೇಕೆಂದು ಕಿವಿಮಾತು ಹೇಳಿದರು.

ಚಿಕ್ಕಂದಿನಿಂದಲೇ ಮಕ್ಕಳಿಗೆ ಕಥೆ ಸೇರಿದಂತೆ ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು. ಸಂಸ್ಕೃತಿ, ಸಂಸ್ಕಾರವನ್ನು ಬಿತ್ತುವ ಕೆಲಸವನ್ನು ಪಾಲಕರು ಮಾಡಬೇಕೆಂದು ಹಿತನುಡಿದರು.

ಜೀವನದಲ್ಲಿ ಆತ್ಮವಿಶ್ವಾಸ ಬಹುಮುಖ್ಯ. ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವ ವನ್ನು ರೂಢಿಸಿಕೊಳ್ಳಬೇಕು. ಓದಿನಲ್ಲಿ ಶ್ರದ್ಧೆ, ಸತತ ಪರಿಶ್ರಮ ಇದ್ದರೆ ಸಾಧನೆ ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.

ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಗಳಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ನಮ್ಮ ಕುಟುಂಬದ ಹೇಮಂತ್, ಜಯಂತ್, ಪ್ರಶಾಂತ್ ಹಾಗೂ ರೇಖಾರಾಣಿ ಅವರ ಶೈಕ್ಷಣಿಕ ಸೇವೆ ಶ್ಲಾಘನೀಯ ಎಂದು ಮುಕ್ತ ಮನಸ್ಸಿನಿಂದ ಪ್ರಶಂಸಿಸಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಕಂಪ್ಯೂಟರ್ ವಿಭಾಗದ ಹಿರಿಯ ಉಪನ್ಯಾಸಕ ಶೇಖ್ ನಫೀಜ್ ಮಾತನಾಡಿ, ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವಂತೆ ಮಾಡುವಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಮನುಷ್ಯ ತಪ್ಪು ಮಾಡುವುದು ಸಹಜ. ಆದರೆ ತಿದ್ದಿಕೊಂಡು ಮುನ್ನಡೆದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಶಿಕ್ಷಕರ, ಪೋಷಕರ ಮಾರ್ಗದರ್ಶನದಲ್ಲಿ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮುವಂತೆ ಕರೆ ನೀಡಿದರು.

ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಗಣಿತ ವಿಭಾಗದ ಹಿರಿಯ ಉಪನ್ಯಾಸಕ ಬಿ.ಜಿ. ವಿಜಯಕುಮಾರ್, ಆಂಗ್ಲಭಾಷೆ ಹಿರಿಯ ಉಪನ್ಯಾಸಕರಾದ ಶೃತಿ, ನಿರ್ದೇಶಕ ಡಾ. ಡಿಎಸ್. ಜಯಂತ್, ರೇಖಾರಾಣಿ ಮತ್ತಿತರರಿದ್ದರು.

error: Content is protected !!