ಯುವ ಜನೋತ್ಸವ : ಸಾವಿರಾರು ವಿದ್ಯಾರ್ಥಿಗಳ ಬೃಹತ್ ಜಾಥಾ

ಯುವ ಜನೋತ್ಸವ : ಸಾವಿರಾರು ವಿದ್ಯಾರ್ಥಿಗಳ ಬೃಹತ್ ಜಾಥಾ

ದಾವಣಗೆರೆ, ಜ.3 – ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಜನವರಿ 5 ಮತ್ತು 6 ರಂದು ನಗರದ ಬಾಪೂಜಿ ಎಂಬಿಎ ಮೈದಾನದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದ್ದು ಇದರ ಅಂಗವಾಗಿ ಶುಕ್ರವಾರ ಗುಂಡಿ ವೃತ್ತದಿಂದ ಸಾವಿರಾರು ಕಾಲೇಜು ವಿದ್ಯಾರ್ಥಿಗಳಿಂದ ಬೃಹತ್ ಜಾಥಾ ಕಾರ್ಯಕ್ರಮ ನಡೆಯಿತು.  

ಜಿ.ಪಂ. ಸಿಇಒ ಡಾ.ಸುರೇಶ್ ಬಿ. ಇಟ್ನಾಳ್ ಮೋತಿ ವೀರಪ್ಪ ಕಾಲೇಜು ಮುಂಭಾಗದ ಗುಂಡಿ ವೃತ್ತದಲ್ಲಿ ಜಾಥಾಗೆ ಚಾಲನೆ ನೀಡಿದರು.

ಜಾಥಾದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿವಿಧ ಘೋಷ ವಾಕ್ಯಗಳ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ನೀರನ್ನು ಉಳಿಸಿ ಭೂಮಿಯನ್ನು ರಕ್ಷಿಸಿ, ‘ಸ್ವಚ್ಚ ಮತ್ತು ಹಸಿರು ಅದು ನಮ್ಮ ಕನಸು’ ಮತ್ತು ‘ಉಸಿರಾಡಲು ಪ್ರೀತಿಸಿ, ಮರಗಳನ್ನು ಉಳಿಸಿ’ ‘ಮಾಲಿನ್ಯವನ್ನು ಅಳಿಸಿ, ಬದುಕಲು ಪ್ರಾರಂಭಿಸಿ’. ವಿದ್ಯಾರ್ಥಿನಿಯರು ‘ಹಣದಾಸೆಗೆ ಬಲಿಯಾಗದೆ ಯೋಚಿಸಿ ಮತ ಚಲಾಯಿಸಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸಿ ಎಂದು ಕೂಗುತ್ತಾ ಸಾಗಿದರು.  ಜಾಥಾದಲ್ಲಿ 75 ವರ್ಷದ ಹಿರಿಯ ವ್ಯಕ್ತಿ ನಾಗರಾಜ್ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕಾಲ್ನಡಿಗೆ ಜಾಥಾದಲ್ಲಿ ಅತ್ಯುತ್ತಮವಾಗಿ ಸಂಘಟಿಸಿದ ಉತ್ತಮ ತಂಡಕ್ಕೆ ಅಭಿನಂದನಾ ಪತ್ರವನ್ನು ಶಾಸಕ  ಬಿ.ಪಿ ಹರೀಶ್ ವಿತರಿಸಿದರು.  ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್, ಜಿ.ಪಂ. ಉಪಕಾರ್ಯದರ್ಶಿ ಕೃಷ್ಣನಾಯ್ಕ, ಸಿಪಿಓ ಮಲ್ಲಾನಾಯ್ಕ್, ಡಿಡಿಪಿಯು ಕರಿಸಿದ್ದಪ್ಪ, ಡಿಡಿಪಿಐ ಕೊಟ್ರೇಶ್, ಡಿಆರ್‍ಸಿಎಸ್ ಮಧುಶ್ರೀನಿವಾಸ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾ, ಯುವ ಪ್ರಶಸ್ತಿ ಪುರಸ್ಕೃತ ಮಾಗನಹಳ್ಳಿ ಮಂಜುನಾಥ್ ಮತ್ತು ನಗರದ ಪದವಿಪೂರ್ವ, ಪದವಿ ಕಾಲೇಜುಗಳ ವಿದ್ಯಾರ್ಥಿಗಳು , ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸರ್ಕಾರಿ ಇಲಾಖೆಯ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು. 

error: Content is protected !!