22ಕ್ಕೆ ಸರ್‌.ಎಂ.ವಿ ವೈಭವ

22ಕ್ಕೆ ಸರ್‌.ಎಂ.ವಿ ವೈಭವ

ಸತ್ಯಕ್ಕೆ ಜಯ ಸಿಕ್ಕಿದೆ: ಸಿ.ಟಿ. ರವಿ, ಸರ್ಕಾರಕ್ಕೆ ಕಪಾಳ ಮೋಕ್ಷ : ವಿಜಯೇಂದ್ರ

ಮಾನವ ಹಕ್ಕುಗಳ ಉಲ್ಲಂಘನೆ, ಆಯೋಗಕ್ಕೆ ದೂರು ಆರ್.ಅಶೋಕ್

ದಾವಣಗೆರೆ ಡಿ. 20 – `ಸತ್ಯಕ್ಕೆ ಜಯ ಸಿಕ್ಕಿದೆ’ ಎಂದು ಬೆಳಗಾವಿ ಘಟನೆ ಸಂಬಂಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಬೆಳಗಾವಿಯಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಸಂಜೆ ಮಾಧ್ಯಮದವರೊಂದಿಗೆ ಅವರು  ಮಾತನಾಡಿದರು.

ರಾಜ್ಯ ಸರ್ಕಾರ ಪೊಲೀಸರನ್ನು ಬಳಸಿಕೊಂಡು ನನ್ನ ಬಲ ಕುಗ್ಗಿಸುವ ಪ್ರಯತ್ನ ಮಾಡಿತು. ಆದರೆ ಕಳೆದ 35 ವರ್ಷಗಳಿಂದ ನಾನು ಇಂತಹ ಅನೇಕ ದೌರ್ಜನ್ಯ, ಸಂಕಷ್ಟ ಗಳನ್ನು ಅನುಭವಿಸಿದ್ದೇನೆ. ಸರ್ಕಾರ ನೀಡುವ ತೊಂದರೆ ನನಗೆ ಹೋರಾಟ ಮಾಡಲು ಇನ್ನಷ್ಟು ಶಕ್ತಿ ನೀಡುತ್ತದೆ ಎಂದು ಹೇಳಿದರು.

ಯಾವುದೇ ನೋಟಿಸ್ ನೀಡದೆ ನನ್ನನ್ನು ಬಂಧಿಸಲಾಯಿತು. ನಾಲ್ಕು ಜಿಲ್ಲೆಯ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಲೆದಾಡಿಸಿ, ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದರು. ದೈಹಿಕವಾಗಿ ಹಲ್ಲೆ ನಡೆಸುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಈ ಸಮಯದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಜತೆಗೆ ನಿಂತು ಆತ್ಮಸ್ಥೆರ್ಯ ನೀಡಿದ್ದಾರೆ ಎಂದು ಹೇಳಿದರು.

ಸರ್ಕಾರಕ್ಕೆ ಕಪಾಳ ಮೋಕ್ಷ: ಸಿ.ಟಿ. ರವಿ ಅವರಿಗೆ ಮಧ್ಯಂತರ ಜಾಮೀನು ನೀಡಿ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಇದನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ನೋಟಿಸ್ ನೀಡದೆ ಬಂಧನ ಮಾಡಿದ್ದು ಕಾನೂನುಬಾಹಿರ. ನ್ಯಾಯಾಲಯದ ಈ ಆದೇಶ ಕಾಂಗ್ರೆಸ್ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದಂತಾಗಿದೆ ಎಂದರು.

ಕಾಂಗ್ರೆಸ್ ಪುಢಾರಿಗಳು ಸುವರ್ಣಸೌಧದ ಒಳಗೆ ನುಗ್ಗಿ ಸಿ.ಟಿ.ರವಿ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದರು. ನಂತರ ಎಫ್‌ಐಆರ್ ಮಾಡಿ, ನೋಟಿಸ್ ನೀಡದೆ ರವಿ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿದರು. ಖಾನಾಪುರ ಠಾಣೆಗೆ ಕರೆದೊಯ್ದು, ರಾತ್ರಿ ಪೊಲೀಸ್ ಠಾಣೆಯಲ್ಲೇ ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ತಲೆಗೆ ಪೆಟ್ಟು ಬಿದ್ದು ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೆ, ಆಸ್ಪತ್ರೆಗೆ ಕರೆದೊಯ್ಯದೆ, ರಾತ್ರಿ 12 ಗಂಟೆಗೆ ಬೆಂಗಳೂರಿನತ್ತ ಕರೆದೊಯ್ಯುವುದಾಗಿ ಹೇಳಿ, ಮೂರ್ನಾಲ್ಕು ಜಿಲ್ಲೆ ಸುತ್ತಿರಿಸಿ, ಭಯ ಹುಟ್ಟಿಸುವ ರೀತಿ ವರ್ತಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಮೇಲಾಧಿಕಾರಿಗಳು, ಸಚಿವರಿಂದ ಅರ್ಧ ಗಂಟೆಗೊಮ್ಮೆ ಕರೆ ಬರುತ್ತಿತ್ತು. ಮುಖ್ಯಮಂತ್ರಿಗಳಿಂದಲೂ ಕರೆ ಬಂದಿರಬಹುದು ಎಂದರು.

  ಘಟನೆ ಕರ್ನಾಟಕದ ರಾಜಕೀಯ ಮಾತ್ರವಲ್ಲ, ದೇಶದ ರಾಜಕಾರಣದಲ್ಲಿ ನಡೆದಿಲ್ಲ. ಕಾಂಗ್ರೆಸ್ ಸರ್ಕಾರವು ಹಿಟ್ಲರ್ ಧೋರಣೆಯನ್ನು ಪ್ರದರ್ಶಿಸಿದೆ. ಬಿಜೆಪಿ ಕಾರ್ಯಕರ್ತರೇನು ಬಳೆ ತೊಟ್ಟು ಕುಳಿತಿಲ್ಲ. ಚರ್ಚೆ ಮಾಡುತ್ತೇವೆ, ತಾರ್ಕಿಕ ಅಂತ್ಯದ ವರೆಗೆ ಹೋರಾಟ ಮಾಡುತ್ತೇವೆ. ನಾವೆಲ್ಲರೂ ಒಟ್ಟಾಗಿ ಮುಂದಿನ ಹೆಜ್ಜೆಯ ಕುರಿತು ತೀರ್ಮಾನ ಮಾಡುತ್ತೇವೆ ಎಂದರು.

ಮಾನವ ಹಕ್ಕು ಆಯೋಗಕ್ಕೆ ದೂರು: ಸಿ.ಟಿ. ರವಿ ಮೇಲೆ ಹಲ್ಲೆ ನಡೆಸಿದ   ಪೊಲೀಸ್ ಅಕಾರಿಗಳ ವಿರುದ್ಧ ಕೇಂದ್ರ ಮಾನವ ಹಕ್ಕು ಆಯೋಗಕ್ಕೆ ದೂರು ನೀಡುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಸಿ.ಟಿ.ರವಿ ಅವಾಚ್ಯವಾಗಿ ಮಾತನಾಡಿರುವುದು ನಿಜ ಎಂದು ಸಾಬೀತಾಗಬೇಕು. ಸಭಾಧ್ಯಕ್ಷರು ದೂರು ದಾಖಲಿಸಬೇಕು, ಬಳಿಕ ಕೋರ್ಟಿಗೆ ಹೋಗುತ್ತದೆ, ನ್ಯಾಯಾಧೀಶರು ಆದೇಶ ನೀಡಿದರೆ ಪಾಲನೆ ಮಾಡುತ್ತೇವೆ. ಆದರೆ, `ಶಿಕ್ಷೆ ಕೊಡಲು ಡಿಕೆಶಿ, ಸಿದ್ದರಾಮಯ್ಯ ಯಾರು? ಅವರು ನ್ಯಾಯಾಧೀಶರಾ? ಕೊಲೆ ಮಾಡಲು 40 ಜನ ಬಂದಿದ್ದರು, ಶವವನ್ನು ಚಿಕ್ಕಮಗಳೂರಿಗೆ ಪಾರ್ಸಲ್ ಮಾಡುತ್ತೇವೆ ಎಂದು ಹೇಳುತ್ತಾರೆ. ಇದು ಗೂಂಡಾಗಿರಿ ಅಲ್ಲವೇ ಎಂದು ಅಶೋಕ್ ಪ್ರಶ್ನಿಸಿದರು.

ಪೊಲೀಸರು ರವಿ ಅವರನ್ನು ಕಾಡಿನ ಒಳಗೆ, ಕ್ರಶರ್ ಬಳಿ ಕರೆದುಕೊಂಡು ಹೋಗಿ ಬೆದರಿಕೆ ಹಾಕಿ, ಮಾನಸಿಕವಾಗಿ ಕುಗ್ಗಿಸಿದ್ದಾರೆ. ಹಿಂದೂ ಪರ ಧ್ವನಿ ಎತ್ತುವ ಸಿ.ಟಿ.ರವಿ ಅವರನ್ನು ಬಗ್ಗು ಬಡಿಯಲು ಸರಕಾರ ಹುನ್ನಾರ ನಡೆಸಿದೆ. ತನಿಕಾಕಾರಿ ಮೇಲೆ ಕಮೀಷನರ್ ಒತ್ತಡ ಹಾಕಿದ್ದಾರೆ ಎಂದು ದೂರಿದರು.

ಕೋರ್ಟ್ ಛೀಮಾರಿ ಹಾಕಿದೆ. ಬೇರೆ ಯಾರಾದರೂ ಆಗಿದ್ದರೆ ರಾಜೀನಾಮೆ ನೀಡುತ್ತಿದ್ದರು. ಈ ಘಟನೆ, ದೌರ್ಜನ್ಯ ಸರಕಾರಕ್ಕೆ ಕಪ್ಪುಚುಕ್ಕೆ, ಎಲ್ಲಿದ್ದಾರೋ ಅಲ್ಲೇ ಬಿಡುಗಡೆ ಮಾಡಬೇಕು ಎಂದು ಕೋರ್ಟ್ ಆದೇಶಿಸಿದೆ. ಸಿ.ಟಿ.ರವಿ ಒಬ್ಬಂಟಿ ಅಲ್ಲ ಎಂಬುದನ್ನು ಕಳೆದ ಎರಡು ದಿನಗಳಿಂದ ನಾವು ತೋರಿಸಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ, ಕೇಡರ್ ಪಕ್ಷ, ಕಾಂಗ್ರೆಸ್ ರೀತಿ ಅಬ್ಬೇಪಾರಿ ಪಕ್ಷವಲ್ಲ ಎಂದು ಕಿಡಿಕಾರಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಹರಿಹರ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಬಸವರಾಜ ನಾಯ್ಕ,  ಎಸ್.ವಿ. ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!