ದೊಡ್ಡ ಗಾತ್ರದ ಹಣವಿದ್ದರೂ ಎಸ್ಸಿ-ಎಸ್ಟಿ ಮಕ್ಕಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತ

ದೊಡ್ಡ ಗಾತ್ರದ ಹಣವಿದ್ದರೂ ಎಸ್ಸಿ-ಎಸ್ಟಿ ಮಕ್ಕಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತ

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದ ಶಾಸಕ ಕೆ.ಎಸ್.ಬಸವಂತಪ್ಪ

ಬೆಳಗಾವಿ, ಡಿ. 19-  ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳು ಹಾಸ್ಟೆಲ್ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಬಜೆಟ್‌ನಲ್ಲಿ ದೊಡ್ಡ ಗಾತ್ರದ ಹಣ ಮೀಸಲಿಟ್ಟರೂ ಆ ಮಕ್ಕಳ ಕತ್ತು ಹಿಸುಕುವ ಪರಿಸ್ಥಿತಿ ಉದ್ಭವಿಸಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸರ್ಕಾರದ ಗಮನ ಸೆಳೆದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಸವಂತಪ್ಪ, ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ  ಎಚ್.ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳು ಯಾವುದೇ ಕಾರಣಕ್ಕೂ ಹಾಸ್ಟೆಲ್ ಸೌಲಭ್ಯಗಳಿಂದ ವಂಚಿತರಾಗಬಾರದು. ಎಷ್ಟೇ ಮಕ್ಕಳು ಬಂದರೂ ಹಾಸ್ಟೆಲ್ ಸೌಲಭ್ಯ ಕೊಡಬೇಕೆಂದು ಸಿದ್ದರಾಮಯ್ಯ ಅವರು ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ಕಾಯ್ದೆ ರೂಪಿಸಿ ಎಂದು ಒತ್ತು ಕೊಟ್ಟಿದ್ದರಿಂದ ಈ ಸಮುದಾಯದ ಮಕ್ಕಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತ ಆಗಿರಲಿಲ್ಲ. 

ತದನಂತರ ಬಂದ ಸರ್ಕಾರ ಅದನ್ನು ಹಿಂಪಡೆದಿದ್ದರಿಂದ ಪ್ಯಾರಾ ಮೆಡಿಕಲ್, ಬಿಇಡಿ, ನರ್ಸಿಂಗ್, ಐಟಿಐ, ಬಿಎಸ್ಸಿ ಸೇರಿದಂತೆ ವೃತ್ತಿಪರ ಕೋರ್ಸ್‌ಗೆ ಪ್ರವೇಶ ಪಡೆದ ಮಕ್ಕಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗಿ 15 ರಿಂದ 20 ಕಿ.ಮೀ. ದೂರದಿಂದ ನಗರ ಪ್ರದೇಶಕ್ಕೆ ಓಡಾಡಿ ಶಿಕ್ಷಣದಿಂದಲೇ ವಿಮುಕ್ತರಾಗುವಂತಾಗಿದೆ.

ಇಷ್ಟೇ ಅಲ್ಲದೇ, ಎಸ್ಸಿ-ಎಸ್ಟಿ ಮಕ್ಕಳು ಸರ್ಕಾರಿ ಕೋಟಾದಿಂದ ಎಂಬಿಬಿಎಸ್, ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ. ಒಂದೆರಡು ವರ್ಷ ಕಳೆದ ಮೇಲೆ ಸರ್ಕಾರದಿಂದ ಸ್ಕಾಲರ್ ಬಂದಿಲ್ಲ. ನೀವು ಹಣ ಕಟ್ಟಿದರೆ ಮಾತ್ರ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡುತ್ತೇವೆ ಎಂದು ಕಾಲೇಜಿನ ಆಡಳಿತ ಮಂಡಳಿಯವರು ಎಚ್ಚರಿಸುತ್ತಾರೆ.

ಪೋಷಕರು ಮಕ್ಕಳನ್ನು ಸ್ನಾತಕೋತ್ತರ ಪದವಿ ಓದಿಸುವುದಕ್ಕೆ ಕಷ್ಟಪಡುವಾಗ ಅವರು ಎಲ್ಲಿಂದ ಹಣ ತರಬೇಕು ಎಂದು ಪ್ರಶ್ನಿಸಿದ ಅವರು, ಎಚ್.ಆಂಜನೇಯ ಅವರು ವಿಶೇಷ ಕಾನೂನು ರೂಪಿಸಿದ್ದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಈಗ ಈ ಸಮಸ್ಯೆ ಉದ್ಭವಿಸಿದೆ. ಕೂಡಲೇ ಸರ್ಕಾರ ವಿಶೇಷ ಕಾಯ್ದೆ ರೂಪಿಸಿ, ಅವರಿಗೆ ಸ್ಕಾಲರ್ ನೀಡಿ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಎಸ್‌ಸಿಪಿ-ಟಿಎಸ್‌ಪಿ ಅನುದಾನ ದಡಿ 38 ಸಾವಿರ ಕೋಟಿ ರೂ. ಮೀಸಲಿರಿಸ ಲಾಗಿದೆ. ಇಷ್ಟೊಂದು ದೊಡ್ಡ ಗಾತ್ರದ ಹಣ ಮೀಸಲಿಟ್ಟರೂ ಉಪಯೋಗವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಪ್ರಸ್ತಾಪಿಸಿರುವ ವಿಷಯ ಪ್ರಸ್ತುತವಾಗಿದೆ. ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಮಕ್ಕಳು ಹಾಸ್ಟೆಲ್ ಸೌಲಭ್ಯ ಮತ್ತು ಸ್ಕಾಲರ್ ಶಿಪ್‌ನಿಂದ ವಂಚಿತರಾಗದಂತೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಸಭಾಧ್ಯಕ್ಷ ಯು.ಟಿ.ಖಾದರ್ ಕೂಡ ಈ ವಿಷಯವನ್ನು  ಗಂಭೀರವಾಗಿ ತೆಗೆದುಕೊಳ್ಳ ಬೇಕೆಂದು ಸಚಿವರಿಗೆ ಸೂಚನೆ ನೀಡಿದರು.

error: Content is protected !!